ರಾಯಚೂರು

ಗುತ್ತಿಗೆದಾರರಿಂದ ಕಾನೂನು ಉಲ್ಲಂಘನೆ; ಆರೋಪ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಜೂ.13
ನಗರದ ನೈರ್ಮಲೀಕರಣ ಕಾರ್ಯವನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಸರ್ಕಾರದ ಆದೇಶಗಳನ್ನು ಸಂಪೂರ್ಣ ಉಲ್ಲಂಘಿಸುತ್ತಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ದಲಿತ ಸಂಘರ್ಷ ಸಮಿತಿ(ಭೀಮವಾದ) ನಗರ ಸಂಚಾಲಕ ರಾಜು ಪಟ್ಟಿ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯಲ್ಲಿ ನಗರ ನೈರ್ಮಲೀಕರಣ ವಿಭಾಗದ ಕಾರ್ಯವನ್ನು ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆದಾರರು ಕಾರ್ಮಿಕರಿಗೆ ಕನಿಷ್ಠ ವೇತನ ದಿನಕ್ಕೆ 178ರ ಬದಲು ಕೇವಲ 100 ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆಂದು ದೂರಿದರು.
ಗುತ್ತಿಗೆದಾರರು- ಅಧಿಕಾರಿಗಳು ಶಾಮೀಲು: ಕಡಿಮೆ ವೇತನ ದೊರೆಯುತ್ತಿರುವುದರಿಂದ ಕಾರ್ಮಿಕರು ಕಾರ್ಯನಿರ್ವಹಿಸಲೂ ಹಿಂದೇಟು ಹಾಕುತ್ತಿದ್ದಾರೆ. ಅದೇ ರೀತಿ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಠ 26 ದಿನಗಳ ಕಾಲ ಕೆಲಸ ನೀಡಿ 4 ದಿನ ರಜೆ ನೀಡಬೇಕು. ರಜೆ ದಿನಗಳಂದು ಕಾರ್ಮಿಕರು ಕಾರ್ಯನಿರ್ವಹಿಸಿದ್ದರೆ ದಿನದ ದುಪ್ಪಟ್ಟು ವೇತನ ನೀಡಬೇಕೆಂದಿದೆ. ಆದರೆ ಗುತ್ತಿಗೆದಾರರು ಸಮರ್ಪಕ ವೇತನ ನೀಡದೇ ವಂಚಿಸುತ್ತಿದ್ದಾರೆ. ರಜೆ ದಿನಗಳಂದು ಕೆಲಸ ನಿರ್ವಹಿಸಿದರೂ ಅವರಿಗೆ ವೇತನ ನೀಡುತ್ತಿಲ್ಲ. ಗುತ್ತಿಗೆದಾರರು ಹಾಗೂ ನಗರಸಭೆಯ ಅಧಿಕಾರಿಗಳು ಶಾಮೀಲಾಗಿ ಕಾರ್ಮಿಕರಿಗೆ ದ್ರೋಹ ಬಗೆಯುತ್ತಿದ್ದಾರೆಂದು ಟೀಕಿಸಿದರು.
ಈವರೆಗೂ ಸಮಿತಿ ರಚಿಸಿಲ್ಲ: ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಕಾರ್ಮಿಕರಿಗೆ ವೇತನ ನೀಡುವ ಸಂದರ್ಭದಲ್ಲಿ ನಗರಸಭೆ ನಿಯೋಜಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಮಿಕ ಸಂಘದ ಸದಸ್ಯ, ಚುನಾಯಿತ ಪ್ರತಿನಿಧಿಗಳಿರುವ ಸಮಿತಿ ರಚಿಸಬೇಕು. ಸಮಿತಿಯ ಸಮ್ಮುಖದಲ್ಲಿಯೇ ಕಾರ್ಮಿಕರ ವೇತನ ನೀಡಬೇಕೆಂದು ಸೂಚಿಸಿದ್ದರೂ ನಗರಸಭೆಯು ಸಮಿತಿ ಇದುವರೆಗೆ ರಚಿಸಿಲ್ಲ ಎಂದು ಆರೋಪಿಸಿದರು.
ಸುರಕ್ಷತಾ ಕ್ರಮಗಳಿಲ್ಲ: ಕಾರ್ಮಿಕರಿಗೆ ಪ್ರತಿ ತಿಂಗಳು 10ನೇ ತಾರೀಕಿನೊಳಗೆ ವೇತನ ನೀಡಬೇಕು. ಆದರೆ ಗುತ್ತಿಗೆದಾರರು ಮನಬಂದಾಗ ವೇತನ ನೀಡುತ್ತಿದ್ದಾರೆ. ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡದೇ ಕಾರ್ಮಿಕರಿಗೆ ನಗದು ನೀಡುತ್ತಿದ್ದಾರೆ. ಕಾರ್ಮಿಕರಿಗೆ ಗುರುತಿನ ಚೀಟಿ, ಸಮವಸ್ತ್ರ, ಶೂಗಳು, ಮಾಸ್ಕ್, ಗ್ಲೌಸ್ ನೀಡಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ. ಆದರೆ ಗುತ್ತಿಗೆದಾರರು ಇಂಥ ಯಾವುದೇ ಸುರಕ್ಷತಾ ಕ್ರಮಗಳನ್ನು ಕಾರ್ಮಿಕರಿಗೆ ಒದಗಿಸಿಲ್ಲ ಎಂದು ದೂರಿದರು.
ಆರೋಗ್ಯ ವಿಭಾಗ ವಿಫಲ: ತರಕಾರಿ ಮಾರುಕಟ್ಟೆ ಮತ್ತು ಕಸಾಯಿಖಾನೆಯಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಆರೋಗ್ಯ ವಿಭಾಗವು ಈ ನಿಟ್ಟಿನಲ್ಲಿ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ. ಅದರಿಂದ ತರಕಾರಿ ಮಾರುಕಟ್ಟೆ ಮತ್ತು ಅಶೋಕ ಡಿಪೋ ರಸ್ತೆಯಲ್ಲಿರುವ ಕಸಾಯಿಖಾನೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದ್ದು ಸುತ್ತಲಿನ ಪ್ರದೇಶದ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು. ಕಸಾಯಿಖಾನೆಯಲ್ಲಿ ಪ್ರಾಣಿವಧೆ ಮಾಡುವ ಮೊದಲು ಪಶು ವೈದ್ಯರಿಂದ ಅನುಮತಿ ಪಡೆದು ನಂತರ ವಧೆ ಮಾಡಬೇಕೆಂಬ ಕಾನೂನಿದ್ದರೂ, ಅನುಮತಿ ಪಡೆಯದೇ ರೋಗಪೀಡಿತ ಜಾನುವಾರುಗಳನ್ನು ವಧೆ ಮಾಡುತ್ತಿದ್ದು, ಅಂಥ ಮಾಂಸ ಸೇವನೆಯಿಂದ ಜನತೆ ಅನಾರೋಗ್ಯಕ್ಕೆ ಸಿಲುಕುತ್ತಿದ್ದಾರೆಂದು ದೂರಿದರು.
ಕ್ರಮಕ್ಕೆ ಆಗ್ರಹ: ಹೀಗೆ ಹತ್ತು ಹಲವು ರೀತಿಯಲ್ಲಿ ಸರ್ಕಾರದ ನೀತಿ ನಿಯಮ ಉಲ್ಲಂಘಿಸಿ ನಗರದಲ್ಲಿ ಸ್ವಚ್ಛತೆ ಕಾಪಾಡದೇ ಅನುದಾನ ಬಳಕೆ ಮಾಡಿಕೊಳ್ಳುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ನಗರಸಭೆಯ ಪರಿಸರ ಅಭಿಯಂತರರು ಮತ್ತು ಪೌರಾಯುಕ್ತರ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಾಜುಗೋಪಾಲ ಗಣಮೂರು, ಚಂದ್ರಶೇಖರ್, ಮಹೇಶ್, ಶಂಶಾಲಪ್ಪ, ಲಕ್ಷ್ಮಿಕಾಂತ್, ನಿಜಾಮುದ್ದೀನ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.