ರಾಯಚೂರು

ಟಿವಿ ಪ್ರಭಾವದಲ್ಲಿ ಸಾಹಿತ್ಯಾಸಕ್ತಿ ಗೌಣ: ರಾಜಶ್ರೀ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.15
ದೂರದರ್ಶನದ ಸೆಳೆತದ ಮುಂದೆ ಜನತೆಯಲ್ಲಿ ಕುಂದುತ್ತಿರುವ ಸಾಹಿತ್ಯಾಸಕ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಉಪನ್ಯಾಸಕಿ ಡಾ. ರಾಜಶ್ರೀ ಕಲ್ಲೂರಕರ್, ಕೊಂಡು ಓದುವ ಹವ್ಯಾಸ ಜನರಲ್ಲಿ ಮಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ನಡೆದ ರಾಯಚೂರು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಯಚೂರು ತಾಲೂಕಿನ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ಹೊಸ ತಲೆಮಾರಿನ ಸಾಹಿತ್ಯ ಎಂಬ ವಿಷಯದ ಕುರಿತು ಮಾತನಾಡಿ, ರಾಯಚೂರು ಶರಣರು, ದಾಸರು ಬಾಳಿ ಬದುಕಿದ ನಾಡು. ಶರಣರು- ದಾಸರು ಶೋಷಣೆಯಿಂದ ಕೂಡಿದ್ದ ಅಂದಿನ ಕಾಲಘಟ್ಟದಲ್ಲಿಯೇ ವಿಶ್ವ ಮಾನವಪ್ರಜ್ಞೆಯನ್ನು ಸಾರುವ ಕಾರ್ಯ ಮಾಡಿದ್ದರು ಎಂದು ಹೇಳಿದರು.
ಜಿಲ್ಲೆಯಿಂದ ರಾಜ್ಯಕ್ಕೆ ಸತ್ವಯುತ ಸಾಹಿತ್ಯ: ಸತ್ವಯುತ ಸಾಹಿತ್ಯವನ್ನು ರಾಜ್ಯಕ್ಕೆ ರಾಯಚೂರು ನೀಡಿದೆ. ಹಿರಿಯ ಸಾಹಿತಿಗಳಾದ ಶಾಂತರಸರು, ಜಂಬಣ್ಣ ಅಮರಚಿಂತರು ಸೇರಿದಂತೆ ಅನೇಕರು ರಾಜ್ಯದ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತವಾಗಿಸುವಲ್ಲಿ ತಮ್ಮದೇ ಆದ ರೀತಿಯ ಕೊಡುಗೆ ನೀಡಿದ್ದಾರೆ. ಹೊಸ ತಲೆಮಾರಿನ ಸಾಹಿತಿಗಳೂ ಸಹ ಒಳ್ಳೆಯ ಸಾಹಿತ್ಯ ರಚನೆ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಧುನಿಕ ಜಗತ್ತಿನ ಒತ್ತಡದ ಬದುಕಿನಲ್ಲಿ ಓದು ಕಡಿಮೆಯಾಗಿದೆ. ದೂರದರ್ಶನದ ಪ್ರಭಾವದಲ್ಲಿ ಓದುವ ಹವ್ಯಾಸ ಬಹುತೇಕರಲ್ಲಿ ಮಾಯವಾಗಿದೆ. ಕಥೆ, ಕಾದಂಬರಿಗಳನ್ನು ಓದುವಷ್ಟೂ ಸಮಯವಿಲ್ಲ ಎಂಬ ಆಸಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಎಸ್ಸೆಮ್ಮೆಸ್ ಯುಗವಿದು. ಇಲ್ಲಿ ಕಾದಂಬರಿಗಳನ್ನು ಓದಲೂ ಯಾರಿಗೂ ತಾಳ್ಮೆಯಿಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ಮಕ್ಕಳ ಸಾಹಿತ್ಯ ರಚನೆ ವಿರಳ: ಸಾಹಿತ್ಯದ ಅರಿವಿಲ್ಲದವರ ಬದುಕಿಗೆ ಸಾಹಿತ್ಯವನ್ನು ಪರಿಚಯಿಸುವ ಕಾರ್ಯ ಆಗಬೇಕಿದೆ. ಹೊಸ ತಲೆಮಾರಿನವರು ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದರೂ ಮಕ್ಕಳ ಸಾಹಿತ್ಯ ರಚನೆಯಲ್ಲಿ ಈಗಲೂ ಹಿಂದೆ ಬಿದ್ದಿರುವುದು ಸುಳ್ಳಲ್ಲ. ಮಕ್ಕಳಲ್ಲಿನ ಮುಗ್ಧತೆ ಕಳೆದುಹೋಗುವ ಮೊದಲು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಕಾಣಬೇಕಿದೆ ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಸಾಹಿತಿ ವೀರಹನುಮಾನ್ ಅವರು ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತು ಮಾತನಾಡಿದರು. ತಾಯಣ್ಣ ಯರಗೇರಾ ಅವರು ತಾಲೂಕಿನ ರಂಗಭೂಮಿ ಚಟುವಟಿಕೆಗಳ ಕುರಿತು ವಿಷಯ ಮಂಡಿಸಿದರು.
ಸಮ್ಮೇಳನಾಧ್ಯಕ್ಷ ಭಗತರಾಜ್ ನಿಜಾಮಕಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ತಿಮ್ಮಣ್ಣ, ದೇವದುರ್ಗ ತಾಲೂಕು ಕಸಾಪ ಅಧ್ಯಕ್ಷ ನರಸಿಂಗರಾವ್ ಸರ್ಕಿಲ್, ಲಿಂಗಸ್ಗೂರು ಕಸಾಪ ಅಧ್ಯಕ್ಷ ಡಾ. ಅಮರೇಶ್ ಯತಗಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.