ಆಧುನಿಕತೆಯ ಭರಾಟೆ, ಮಾನವ ಸಂಬಂಧಗಳಲ್ಲಿ ಬಿರುಕು: ಕಳವಳ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.16
ಜನಪದರ ಬದುಕಿನಲ್ಲಿ ಮಾನವೀಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಆಧುನಿಕತೆಯ ಭರಾಟೆಯಲ್ಲಿ ಮಾನವ ಸಂಬಂಧಗಳಲ್ಲಿ ಬಿರುಕುಂಟಾಗಿದೆ. ದುರ್ಬಲ ವ್ಯವಸ್ಥೆಯಲ್ಲಿ ಬದುಕು ಕಳೆಯುತ್ತಿದ್ದೇವೆ ಎಂದು ಖ್ಯಾತ ಜನಪದ ವಿದ್ವಾಂಸ ಪ್ರೊ. ಶಂಭು ಬಳಿಗಾರ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ರಾತ್ರಿ ನಡೆದ ರಾಯಚೂರು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜನಪದ ಸಾಹಿತ್ಯ ತಾಯಿ ಬೇರಿದ್ದಂತೆ. ಸಂಸ್ಕೃತಿಗೆ ಸಂಸ್ಕಾರವೇ ಮೂಲಾಧಾರ. ಅಂಥ ಸಂಸ್ಕಾರವನ್ನು ಜನಪದ ಸಾಹಿತ್ಯ ನೀಡುತ್ತಿದೆ ಎಂದರು.
ಮಾನವನ ಬದುಕಿಗೆ ಸಾಹಿತ್ಯದಿಂದ ಸಂಸ್ಕಾರ ದೊರೆಯುತ್ತದೆ. ಅಂಥ ಸಾಹಿತ್ಯವನ್ನು ರಕ್ಷಿಸುವ ಬಹುದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಸಲಹೆ ನೀಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕ್ರಪ್ಪ ಮಾತನಾಡಿ, ಸಾಹಿತ್ಯವು ಸಂಬಂಧಗಳನ್ನು ಬೆಳೆಸುವಂಥ ಕಾರ್ಯ ಮಾಡಬೇಕು ಎಂದ ಅವರು, ಸಾಹಿತ್ಯವನ್ನು ಪರರ ಹೀಯಾಳಿಸಲು ಬಳಕೆ ಮಾಡುವಂತಾಗಬಾರದು ಎಂದು ಸಲಹೆ ನೀಡಿದರು.
ಸಂಸದ ಸಣ್ಣ ಫಕೀರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭವನದ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ 10 ಲಕ್ಷ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಡಾ. ಶಿವರಾಜ ಪಾಟೀಲ್, ಕಾರ್ಯಾಧ್ಯಕ್ಷ, ಶಾಸಕ ತಿಪ್ಪರಾಜು ಹವಾಲ್ದಾರ್ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಭಗತರಾಜ್ ನಿಜಾಮಕಾರಿ, ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ತಾಲೂಕು ಅಧ್ಯಕ್ಷ ಚಿದಾನಂದ ಸಾಲಿ, ಬಿಇಒ ಮಲ್ಲಿಕಾರ್ಜುನ ಇದ್ದರು. ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

