ರಾಯಚೂರು

ಜು.1ರಿಂದ ಆರ್ಸೆನಿಕ್ ಯುಕ್ತ ನೀರು ಪೂರೈಕೆ ಸ್ಥಗಿತ

Published On :

ಕನ್ನಡಪ್ರಭ ವಾರ್ತೆ ,   ರಾಯಚೂರು ,   ಜೂ.17
ಜಿಲ್ಲೆಯಲ್ಲಿ ಆರ್ಸೆನಿಕ್ ಯುಕ್ತ ನೀರಿನ ಮೂಲಗಳನ್ನು ಜು.1ರಿಂದಲೇ ಸ್ಥಗಿತಗೊಳಿಸಬೇಕು. ಅದಕ್ಕೆ ಪರ್ಯಾಯವಾಗಿ ಶುದ್ಧ ಕುಡಿಯುವ ನೀರೊದಗಿಸುವ ಮೂಲಗಳನ್ನು ಪತ್ತೆ ಮಾಡಿ ಜನತೆಗೆ ಶುದ್ಧ ನೀರೊದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಆದೇಶಿಸಿದರು.
ನಗರದಲ್ಲಿ ಸೋಮವಾರ ರಾತ್ರಿ ಜಿಪಂ ಸಭಾಂಗಣದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಆರ್ಸೆನಿಕ್ ಯುಕ್ತ ನೀರು ಪೂರೈಕೆಯಾಗುತ್ತಿರುವ ಗ್ರಾಮಗಳ ಬಗ್ಗೆ ಜಿಲ್ಲಾಡಳಿತದ ಬಳಿ ಮಾಹಿತಿಯಿದ್ದು ಅದರಂತೆ ಆಯಾ ಗ್ರಾಮಗಳಲ್ಲಿ ಆರ್ಸೆನಿಕ್ ಯುಕ್ತ ನೀರೊದಗಿಸುತ್ತಿರುವ ಕೊಳವೆಬಾವಿಗಳನ್ನು ಮುಚ್ಚಬೇಕು. ಈ ನಿಟ್ಟಿನಲ್ಲಿ ಜಿಪಂ ಸಿಇಒ ನಿಗಾಯಿರಿಸುವಂತೆ ಅವರು ಸೂಚಿಸಿದರು.
ನೀರು ಪರೀಕ್ಷಾ ಪ್ರಯೋಗಾಲಯ ಘಟಕ: ನಗರದಲ್ಲಿ ಕೇಂದ್ರ ಸರ್ಕಾರದ ನೀರು ಪರೀಕ್ಷಾ ಪ್ರಯೋಗಾಲಯದ ಘಟಕವನ್ನು ಸ್ಥಾಪಿಸಲು 1 ಕೋಟಿ ಅನುದಾನ ಒದಗಿಸಲಾಗುತ್ತದೆ. ಈ ಪ್ರಯೋಗಾಲಯದಲ್ಲಿ ಗುಲ್ಬರ್ಗ, ಯಾದಗಿರಿ, ಬೀದರ್, ರಾಯಚೂರು ಹಾಗೂ ಸುತ್ತಲಿನ ಪ್ರದೇಶದ ನೀರಿನಲ್ಲಿರುವ ವಿಷಕಾರಿ ಅಂಶದ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಆರ್ಸೆನಿಕ್ ಯುಕ್ತ ನೀರು ಪಡೆಯುತ್ತಿರುವ ಗ್ರಾಮಗಳ ಜನತೆಗೆ ಶುದ್ಧ ಕುಡಿಯುವ ನೀರೊದಗಿಸುವುದು ಅಧಿಕಾರಿಗಳ ಮೊದಲಾದ್ಯತೆ ಆಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಹಣಕಾಸಿನ ನೆರವು ಸರ್ಕಾರ ಒದಗಿಸಲಿದೆ. ಆದರೆ ಯಾವುದೇ ಕಾರಣಕ್ಕೆ ಜನತೆಗೆ ಆರ್ಸೆನಿಕ್ ಯುಕ್ತ ನೀರು ಒದಗಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಗತ್ಯ ನೀರು- ಅಸಡ್ಡೆ ಸಲ್ಲದು: ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನೀರಾವರಿ ಯೋಜನೆಗಳನ್ನು ಬಳಸಿಕೊಂಡು ಜನತೆಗೆ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು. ಅದಕ್ಕೆ ಅಗತ್ಯವಿರುವ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಕಳೆದ 20 ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿರುವ ವಿವಿಧ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕೆಂದು ಅವರು ಆದೇಶಿಸಿದರು.
ಸರ್ಕಾರದ ಆದೇಶ ಪಾಲಿಸಿ: ಜು.1ರಿಂದ ಅಪಾಯಕಾರಿ ರೀತಿಯಲ್ಲಿ ಆರ್ಸೆನಿಕ್ ಅಂಶವಿರುವ ನೀರು ಪಡೆಯುತ್ತಿರುವ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಟ್ಯಾಂಕರ್ ಮೂಲಕವೂ ನೀರು ಪೂರೈಸಬಹುದಾಗಿದೆ. ಅಧಿಕಾರಿಗಳು ಜಾಗೃತರಾಗಿದ್ದು ಸರ್ಕಾರದ ಆದೇಶ ಪಾಲಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.
ಜಿಪಂ ಸಿಇಒ ಅವರು ಜಿಲ್ಲೆಯಲ್ಲಿನ ಈ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನಹರಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಎದುರಾಗುವ ಭೂ ಸ್ವಾಧೀನ ಮತ್ತಿತರೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಸಮನ್ವಯದ ಮೂಲಕ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸಬೇಕೆಂದು ಆದೇಶಿಸಿದರು.
ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳಿಸಿ: ಜಿಲ್ಲೆಯಲ್ಲಿರುವ ಕೊಳವೆಬಾವಿಗಳಲ್ಲಿ ದೊರೆಯುತ್ತಿರುವ ನೀರಿನಲ್ಲಿರುವ ಅಪಾಯಕಾರಿ ರಾಸಾಯನಿಕ ಅಂಶಗಳ ಬಗ್ಗೆ ನೀರಿನ ಮಾದರಿ ಪ್ರಯೋಗಾಲಯಗಳಿಗೆ ಕಳುಹಿಸಿ ಮಾಹಿತಿ ಸಂಗ್ರಹಿಸಬೇಕಿದೆ. ಅದರನುಸಾರ ಮುಂದಿನ ದಿನಗಳಲ್ಲಿ ಯೋಜನಾಬದ್ಧ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ನೀರಿನಲ್ಲಿರುವ ಫ್ಲೋರೈಡ್ ಮತ್ತು ಆರ್ಸೆನಿಕ್ ಅಂಶವು ಮಾನವ ಜೀವಕ್ಕೆ ಅಪಾಯಕಾರಿ ಆಗಿದ್ದು, ಗಾಬರಿ ಹುಟ್ಟಿಸುವಂತ ಸಂಗತಿ ಇದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜನತೆಗೆ ಶುದ್ಧ ಕುಡಿವ ನೀರು ಒದಗಿಸುವ ವಿಚಾರದಲ್ಲಿ ಯಾವುದೇ ರೀತಿಯಿಂದ ಹಿಂದೇಟು ಹಾಕದು ಎಂದ ಅವರು, ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕವಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ಡಾ. ಶಿವರಾಜ್ ಪಾಟೀಲ್, ಜಿಪಂ ಅಧ್ಯಕ್ಷೆ ಲಲಿತಮ್ಮ, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಸಿಇಒ ಜ್ಞಾನಪ್ರಕಾಶ್ ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.