ನಗರಸಭೆ ನಿರ್ಲಕ್ಷ್ಯಕ್ಕೆ ನಾಗರಿಕರು ತತ್ತರ
ಸಿಂಧನೂರು: ನಗರದಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವೆಂಕಟರಾವ್ ಕಾಲೋನಿಗೆ ಬಸ್ ನಿಲ್ದಾಣದ ನೀರು ನುಗ್ಗಿ ಆವಾಂತರ ಸೃಷ್ಟಿಸಿತು.
ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣ ಆವರಣದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹಗೊಂಡು, ಆ ನೀರು ಪಕ್ಕದ ಎಸ್ಆರ್ಎಸ್ ಲಾಡ್ಜ್ ಹಿಂದಿನ ಬಡಾವಣೆಗೆ ನುಗ್ಗಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.
ಕೆಲವರ ಮನೆಗಳಿಗೂ ನೀರು ನುಗ್ಗಿದೆ. ರಸ್ತೆ ತುಂಬ ನೀರು ನಿಂತು ಸಂಚಾರಕ್ಕೂ ತೊಂದರೆಯಾಯಿತು. ಈ ಸಮಯದಲ್ಲಿ ಜನರ ನೆರವಿಗೆ ಬರಬೇಕಾದ ನಗರಸಭೆ ಸಿಬ್ಬಂದಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ದೂರವಾಣಿ ಕರೆ ಮಾಡಿದರೆ ಯಾವೊಬ್ಬ ಅಧಿಕಾರಿಯೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ನಗರಸಭೆ ವಿರುದ್ಧ ಕಿಡಿಕಾರಿದರು.
ಜನರ ಆಕ್ರೋಶ: ಕಳೆದ ನಾಲ್ಕೈದು ವರ್ಷಗಳಿಂದ ಮಳೆಗಾಲದಲ್ಲಿ ಇದೇ ರೀತಿ ಸಮಸ್ಯೆ ಉಂಟಾಗುತ್ತಿದ್ದು ನಗರಸಭೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣ ಹಾಗೂ ಬಸ್ ಡಿಪೋದಲ್ಲಿ ಸಂಗ್ರಹಗೊಳ್ಳುವ ನೀರು ಚರಂಡಿಗೆ ಹರಿಯದೆ ಸೀದಾ ಓಣಿಗಳಿಗೆ ನುಗ್ಗುವುದರಿಂದ ಕುಳಿತುಕೊಳ್ಳಲು ಜಾಗವಿಲ್ಲದಂತೆ ಮನೆ ತುಂಬ ನೀರು ತುಂಬಿಕೊಳ್ಳುತ್ತದೆ.
ಆದರೆ ನಗರಸಭೆಯವರು ಮಳೆ ನೀರು ಚರಂಡಿಗೆ ಹರಿಯುವ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ. ಚರಂಡಿಗಳಲ್ಲಿ ಹೂಳು ತುಂಬಿ ನೀರು ರಸ್ತೆ ಮತ್ತು ಮನೆಗಳಲ್ಲಿ ನುಗ್ಗುತ್ತಿದೆ. ನಾವೆಲ್ಲ ಹೇಗೆ ನಿದ್ದೆ ಮಾಡಬೇಕು ಎಂದು ಸ್ಥಳೀಯ ಪ್ರಶ್ನಿಸುತ್ತಿದ್ದಾರೆ. ಜಗದೀಶ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಚಂದ್ರಶೇಖರ ಮೈಲಾರ, ಶಿವರುದ್ರಗೌಡ ಉಪ್ಪಳ, ಮಲ್ಲಪ್ಪ ದಸ್ತಾವೇಜು ಬರಹಗಾರ ಸೇರಿದಂತೆ ಅನೇಕ ನಿವಾಸಿಗಳೆಲ್ಲ ಸೇರಿ ಮಳೆ ನೀರು ಚರಂಡಿಗೆ ಹರಿಯುವಂತೆ ಮಾಡಿದರು.
ಅದೇ ರೀತಿ ನಗರದ ಖದರೀಯಾ ಕಾಲೋನಿ, ಹೌಸಿಂಗ್ ಕಾಲೋನಿ ಪ್ರಗತಿ ಬಾರ್ ಹತ್ತಿರ, ಕಿತ್ತೂರು ಚನ್ನಮ್ಮ ಸರ್ಕಲ್ನಿಂದ ಹನುಮಂತ ದೇವರ ಗುಡಿವರೆಗೆ, ಹಳೆಬಜಾರ್, ಮಹೆಬೂಬ ಕಾಲೋನಿ, ಆದರ್ಶ ಕಾಲೋನಿಗಳಲ್ಲೂ ಇದೇ ಪರಿಸ್ಥಿತಿ ಕಂಡು ಬಂತು. ಮಳೆ ನೀರು ನಿವಾಸಿಗಳ ಮನೆಹೊಕ್ಕು ಸಾರ್ವಜನಿಕರು ತೊಂದರೆ ಅನುಭವಿಸಿದರು. ಆದರೆ ನಗರಸಭೆಯ ಯಾವುದೇ ಅಧಿಕಾರಿಗಳು ಸಾರ್ವಜನಿಕರ ನೆರವಿಗೆ ಬಾರದಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

