ರಾಯಚೂರು

ಸರ್ಕಾರಿ ಯೋಜನೆ ರೈತರ ಮನೆ ಬಾಗಿಲಿಗೆ ತಲುಪಿಸಿ

Published On :

ಕನ್ನಡಪ್ರಭ ವಾರ್ತೆ ,  ಲಿಂಗಸ್ಗೂರು ,  ಜೂ.21
ಸರ್ಕಾರ ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗಳ ಮೂಲಕ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಗ್ರಾಮೀಣ ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ತಿಳಿಸಿದರು.
ಸ್ಥಳೀಯ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ, ಜಿಪಂ ರಾಯಚೂರು ಮತ್ತು ತಾಪಂ ಲಿಂಗಸ್ಗೂರು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಲಿಂಗಸ್ಗೂರು ತಾಲೂಕು ಕೃಷಿ ಉತ್ಸವ- 2013ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕದ ಬಿಸಿಲ ನಾಡಲ್ಲಿ ಸಮಯಕ್ಕೆ ಮಳೆಯಾಗದೆ ಬರಗಾಲ, ಪ್ರಕೃತಿ ವಿಕೋಪದಂತಹ ಅವಘಡಗಳು ಸಂಭವಿಸಿ ರೈತರು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ಸೋಮಾರಿಗಳಾಗಬೇಡಿ..: ನೆರೆಯ ಆಂಧ್ರಪ್ರದೇಶದಿಂದ ವಲಸೆ ಬಂದವರು ರೈತರ ಭೂಮಿ ಉಳುಮೆಗೆ ಪಡೆದು ಬತ್ತ, ಮೆಣಸಿನಕಾಯಿ, ಹತ್ತಿ ಸೇರಿದಂತೆ ವಿವಿಧ ಬೆಳೆ ಬೆಳೆದು ಉತ್ತಮ ಲಾಭ ಪಡೆಯುತ್ತಾರೆ. ಆದರೆ ನಮ್ಮ ರೈತರು ಸೋಮಾರಿತನ ಬೆಳೆಸಿಕೊಂಡು ವಲಸಿಗರಿಗೆ ಉಳುಮೆಗೆ ಭೂಮಿ ನೀಡುವುದು ಅಥವಾ ಮಾರಾಟ ಮಾಡಿ ಕೂಲಿ ಮಾಡುವಲ್ಲಿ ನಿರತರಾಗುತ್ತಿರುವುದು ಅನುಭವದ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ.
ಆರ್ಥಿಕವಾಗಿ ಸಬಲರಾಗಿ: ಪ್ರಸಕ್ತ ಮುಂಗಾರು ಉತ್ತಮವಾಗಿ ಸುರಿದಿದ್ದು, ಸರ್ಕಾರದ ವಿವಿಧ ಯೋಜನೆಗಳ ಕುರಿತು ಹೋಬಳಿ ಮಟ್ಟದ ರೈತರಿಗೆ ಜಾಗೃತಿ ಮೂಡಿಸುವುದು ಅಗತ್ಯ. ವಿವಿಧ ಇಲಾಖೆಗಳ ಮೂಲಕ ದೊರೆಯುವ ಸವಲತ್ತುಗಳನ್ನು ರೈತರು ಸಮರ್ಪಕವಾಗಿ ಸದುಪಯೋಗ ಪಡೆಯಬೇಕು. ಜೊತೆಗೆ ಅಧಿಕಾರಿಗಳಿಂದ ಮತ್ತು ಅನುಭವಿ ರೈತರ ಸಲಹೆ ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕಿದೆ ಎಂದು ಸಲಹೆ ನೀಡಿದರು.
ಸನ್ಮಾನ: ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಶಿವಕುಮಾರ ಪಾಟೀಲ ಗುಡಿಹಾಳ ಮತ್ತು ರೋಡಲಬಂಡಾ ತವಗ ಮಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ನಂದಿಕೋಲಮಠ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.