ರಾಯಚೂರು

ರಾಯಚೂರು ಹಬ್ಬ ರಾಜ್ಯಮಟ್ಟದ್ದಾಗಲಿ

Published On :

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಜೂ.22
ಮುನ್ನೂರು ಕಾಪು ಸಮಾಜದಿಂದ ಆಯೋಜಿಸಲಾಗುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವು ಶೀಘ್ರದಲ್ಲಿಯೇ ರಾಜ್ಯಮಟ್ಟದ ಹಬ್ಬವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಮುಂದಿನ ಪೀಳಿಗೆಗೆ ಗ್ರಾಮೀಣರ ಬದುಕಿನ ಕಲೆ, ಸಂಸ್ಕೃತಿಯ ಪರಿಚಯಿಸುವ ಕಾರ್ಯ ಮುಂದುವರಿಯಬೇಕಿದೆ ಎಂದು ಹೇಳಿದರು.
ಮೆಚ್ಚುಗೆ: ಅವರು ನಗರದಲ್ಲಿ ಶನಿವಾರ ಮುನ್ನೂರು ಕಾಪು ಸಮಾಜದಿಂದ ಇಲ್ಲಿನ ರಾಜೇಂದ್ರ ಗಂಜ್ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಾಯವಾಗುತ್ತಿರುವ ಕಲೆಯನ್ನು ರಾಜ್ಯಮಟ್ಟಕ್ಕೆ ಪರಿಚಯಿಸುವ ಕಾರ್ಯವನ್ನು ಮುನ್ನೂರು ಕಾಪು ಸಮಾಜ ಮಾಡುತ್ತಿದೆ ಎಂದು ಶ್ಲಾಘಿಸಿದರು.
ದೇವದುರ್ಗ ಶಾಸಕ ಎ. ವೆಂಕಟೇಶ ನಾಯಕ ಮಾತನಾಡಿ, ರಾಜ್ಯದಲ್ಲಿ ಹೊಸ ಪರಂಪರೆ ಸೃಷ್ಟಿಸುವ ಕಾರ್ಯ ಮುನ್ನೂರು ಕಾಪು ಸಮಾಜ ಮುಂದಾಗಿದೆ. ಪ್ರತಿ ವರ್ಷ ಮುಂಗಾರು ಹಬ್ಬವನ್ನು ಯಶಸ್ವಿಯಾಗಿ ಆಚರಿಸುವ ಮೂಲಕ ರಾಜ್ಯಮಟ್ಟದಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವು ಕೇವಲ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯಾದ್ಯಂತ ಹೆಸರು ಗಳಿಸಿದೆ. ಇದರ ಹಿಂದೆ ಮುನ್ನೂರು ಕಾಪು ಸಮಾಜದ ಶ್ರಮಿವಿದೆ ಎಂದ ಅವರು, ಇಂಥ ಗ್ರಾಮೀಣ ಕಲೆ ಬದುಕನ್ನು ಪರಿಚಯಿಸುವ ಹಬ್ಬದಾಚರಣೆ ಹೆಮ್ಮೆಯ ಪ್ರತೀಕ ಎಂದರು.
ಗ್ರಾಮೀಣ ಸೊಗಡು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಕೃಷಿಕರನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಮುಂಗಾರು ಹಬ್ಬದ ಮೂಲಕ ಗ್ರಾಮೀಣ ಪ್ರದೇಶದ ಸೊಗಡು ಎಲ್ಲರಿಗೆ ತಿಳಿಸಿಕೊಡುವ ಕಾರ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಮುನ್ನೂರು ಕಾಪು ಸಮಾಜದ ಶ್ರಮ ಸಾರ್ಥಕತೆ ಕಂಡಿದೆ ಎಂದರು.
ಗ್ರಾಮೀಣ ಭಾಗದ ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಸಿಕೊಂಡು ಮುಂದೆ ಸಾಗುವಲ್ಲಿ ಮುಂಗಾರು ಹಬ್ಬ ಮಹತ್ವದ ಪಾತ್ರ ವಹಿಸಲಿದೆ. ಮುಂಗಾರು ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಮಾತನಾಡಿ, ಮುನ್ನೂರು ಕಾಪು ಸಮಾಜವು ಉತ್ಸವಕ್ಕಾಗಿ ಸ್ವಂತ ಹಣ ರು. 33 ಲಕ್ಷ ವೆಚ್ಚ ಮಾಡುತ್ತಿದೆ. ವಿವಿಧ ಸಂಸ್ಥೆಗಳು ರು. 7 ಲಕ್ಷ ಮುಂಗಾರು ಹಬ್ಬಕ್ಕೆ ನೀಡಿವೆ ಎಂದು ಹೇಳಿದರು.
ಕರ್ನಾಟಕವಷ್ಟೇ ಅಲ್ಲ, ನೆರೆಯ ಆಂಧ್ರ ಹಾಗೂ ಮಹಾರಾಷ್ಟ್ರಗಳಿಂದಲೂ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿವೆ. ಮೂರು ದಿನಗಳ ಕಾಲ ನಗರದಲ್ಲಿ ಸ್ಪರ್ಧೆ ಹಾಗೂ ಕಲೆಯನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುನ್ನೂರು ಕಾಪು ಸಮಾಜದ ಪ್ರಮುಖರು ಹಾಗೂ ನಗರದ ಜನತೆ ಹಬ್ಬದಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾಗಿದ್ದಾರೆಂದು ಹೇಳಿದರು.
ಮುಂಗಾರು ಹಬ್ಬ: ಕಳೆದ ಅನೇಕ ವರ್ಷಗಳಿಂದ ಯಶಸ್ವಿಯಾಗಿ ಸಾಗುತ್ತಿರುವ ಮುಂಗಾರು ಹಬ್ಬವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತದೆ. ಗ್ರಾಮೀಣ ಬದುಕಿನ ವಿವಿಧ ಮಜಲುಗಳನ್ನು ನಗರದವರಿಗೆ ಪರಿಚಯಿಸುವುದೇ ತಮ್ಮ ಆಶಯ ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಮುನ್ನೂರು ಕಾಪು ಸಮಾಜದ ಸದ್ಗುರು ಶರಣ ತಿಪ್ಪೇಶ್ವರ ಸ್ವಾಮೀಜಿ ವಹಿಸಿದ್ದರು. ಪ್ರಮುಖರಾದ ಜಿಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷೆ ಕೆ.ಶರಣಪ್ಪ, ಸಮಾಜದ ಅಧ್ಯಕ್ಷೆ ಬೆಲ್ಲಂ ನರಸರೆಡ್ಡಿ, ಎಂ. ನಾಗರೆಡ್ಡಿ, ಲಾಲಪ್ಪ, ರಾಳ್ಲ ತಿಮ್ಮಾರೆಡ್ಡಿ, ಜಿ. ಬಸವರಾಜ ರೆಡ್ಡಿ, ಪುಂಡ್ಲ ನರಸರೆಡ್ಡಿ, ಜಿ. ಶೇಖರರೆಡ್ಡಿ, ಎನ್. ಶೇಖರ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ವೀಕ್ಷಕರು ಮುಂಗಾರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.