ರಾಯಚೂರು

ಜನರ ಹಿತಾಸಕ್ತಿಗೆ ತಕ್ಕಂತೆ ಮೂಲ ಸೌಲಭ್ಯ ಕಲ್ಪಿಸಿ

Published On :

ಕನ್ನಡಪ್ರಭ ವಾರ್ತೆ ,  ಲಿಂಗಸ್ಗೂರು ,  ಜೂ.22
ತಾಲೂಕಿನಲ್ಲಿ ಅತಿವೃಷ್ಟಿ, ಬರಗಾಲದಿಂದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಆರೋಗ್ಯ, ಶಿಕ್ಷಣ, ನೀರಾವರಿ, ವಿದ್ಯುತ್ ಮತ್ತು ಕುಡಿವ ನೀರು ವ್ಯವಸ್ಥೆ ಕೈಗೊಳ್ಳುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಶಾಸಕ ಮಾನಪ್ಪ ವಜ್ಜಲ್ ತಾಕೀತು ಮಾಡಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ಶನಿವಾರ ಶಾಸಕ ಮಾನಪ್ಪ ವಜ್ಜಲ್ ಹಾಗೂ ತಾಪಂ ಅಧ್ಯಕ್ಷೆ ಲಲಿತಮ್ಮ ಶಿವನಗೌಡ ಅಧ್ಯಕ್ಷತೆಯಲ್ಲಿ ಜರುಗಿದ ವಿವಿಧ ಇಲಾಖೆ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಆರೋಗ್ಯ: ತಾಲೂಕಿನಲ್ಲಿ ಸುರಿದ ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಡೆಂಘಿ, ಮಲೇರಿಯಾ ಪ್ರಕರಣಗಳ ನಿಯಂತ್ರಣಕ್ಕೆ ವೈದ್ಯರ ತಂಡ ರಚನೆ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಶಂಕಿತ ಪ್ರಕರಣ ಕಂಡುಬಂದರೆ ಪಟ್ಟಣ ಪ್ರದೇಶಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಪರಿಹಾರ ಧನ ಒದಗಿಸಬೇಕೆಂದು ಶಾಸಕ ಮಾನಪ್ಪ ವಜ್ಜಲ್, ಜಿಪಂ ಸದಸ್ಯ ಭೂಪನಗೌಡ ಕರಡಕಲ್ ಹಾಗೂ ದುರುಗಮ್ಮ ಗುಂಡಪ್ಪ ನಾಯಕ ಸೂಚಿಸಿದರು.
ಜೆಸ್ಕಾಂ:  ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ರೈತರು ಬೋರ್‌ವೆಲ್ ಕೊರೆಸಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಇಲಾಖೆಯಿಂದ ಸಲಕರಣೆಗಳು ಬಂದಿಲ್ಲವೆಂದು ನೆಪ ಹೇಳುತ್ತಾ ಕಾಲಕಳೆಯುವುದು ಸರಿಯಲ್ಲ. ವಿಳಂಬ ನೀತಿಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಕುಡಿವ ನೀರು ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ತಾಕೀತು ಮಾಡಿದರು.
ಪಂಚಾಯತ್ ರಾಜ್: ಮಸ್ಕಿ ಗ್ರಾಮದ ಎಲ್ಲ ಕಾಮಗಾರಿಗಳು ಮುಗಿದಿವೆ. ಪಂಪಿಂಗ್ ಮಷಿನರಿ ಕೆಲಸ ಪ್ರಗತಿಯಲ್ಲಿದೆ. ಉಳಿದ 3 ಹೊಸ ಕಾಮಗಾರಿಗಳಿಗೆ ಡಿಎಸ್‌ಆರ್ ತಯಾರಿಸಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಪಂಚಾಯತ್ ರಾಜ್ ಎಂಜಿನೀಯರಿಂಗ್ ಉಪವಿಭಾಗ ಅಧಿಕಾರಿ ಸಿ.ಎಸ್. ಪಾಟೀಲ್ ಸಭೆಯಲ್ಲಿ ವಿವರಿಸಿದರು. ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಇರುವ 112 ಹಳ್ಳಿಗಳನ್ನು ಗುರುತಿಸಿ ತಯಾರಿಸಿದ ವರದಿ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದ್ದು, ಈ ಕುರಿತು ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಶಿಕ್ಷಣ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಾಜರಾತಿಗೆ ತಕ್ಕಂತೆ ಶಾಲಾ ಕೊಠಡಿ, ಪಠ್ಯ ಪುಸ್ತಕ, ಸಮವಸ್ತ್ರ, ಬೈಸಿಕಲ್, ಕುಡಿವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಶಿಕ್ಷಕರ ಕೊರತೆ ಇರುವ ಕಡೆಗಳಲ್ಲಿ ಕೂಡಲೇ ನೇಮಕ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಅವರಿಗೆ ಜಿಪಂ ಸದಸ್ಯರಾದ ಭೂಪನಗೌಡ ಕರಡಕಲ್, ಎಚ್.ಬಿ. ಮುರಾರಿ ಒತ್ತಾಯಿಸಿದರು.
ಸಮಾಜ ಕಲ್ಯಾಣ: ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ವಸತಿ ನಿಲಯ ಕೋರಿ ಸಲ್ಲಿಸಿದ ಯಾವುದೇ ಅರ್ಜಿ ತಿರಸ್ಕರಿಸದೆ ಎಲ್ಲರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಕೊಠಡಿಗಳ ಕೊರತೆ ಉಂಟಾದರೆ ಬಾಡಿಗೆ ರೂಪದಲ್ಲಿ ಕಟ್ಟಡ ಪಡೆದರೆ, ಸರ್ಕಾರದಿಂದ ಬಾಡಿಗೆ ಹಣ ಭರಿಸಲಾಗುವುದೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್ ಅವರಿಗೆ ಶಾಸಕ ಮಾನಪ್ಪ ವಜ್ಜಲ್ ಸೂಚಿಸಿದರು.
ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳಲ್ಲಿ  ಅವ್ಯವಸ್ಥೆಯಿಂದ ಕೂಡಿದ್ದು, ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಪಂ ಸದಸ್ಯ ಮಹಾದೇವಪ್ಪಗೌಡ ಮಸ್ಕಿ ಸೂಚಿಸಿದರು.
ಸಾಮಾಜಿಕ ಅರಣ್ಯ: ಸರ್ಕಾರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿದರೂ ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. 2008ರಿಂದ ಇಲಾಖೆಯ ವಿವಿಧ ಯೋಜನೆಯಡಿ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಸಮಗ್ರ ವರದಿ ಸಲ್ಲಿಸುವಂತೆ ಸಾಮಾಜಿಕ ಅರಣ್ಯ ಅಧಿಕಾರಿ ಗಂಗಪ್ಪ ದಿನ್ನಿ ಅವರಿಗೆ ಶಾಸಕ ಮಾನಪ್ಪ ವಜ್ಜಲ್ ಮತ್ತು ಜಿಪಂ ಸದಸ್ಯ ಭೂಪನಗೌಡ ಕರಡಕಲ್ ತಾಕೀತು ಮಾಡಿದರು.
ಲೋಕೋಪಯೋಗಿ: ಇಲಾಖೆಯಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಗತಿಯಲ್ಲಿನ ರಸ್ತೆ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು.
ಪಟ್ಟಣದ ಬಸ್ ನಿಲ್ದಾಣ ಬಳಿಯ ಸೇತುವೆ ಹಾಗೂ ಯಲಗಲದಿನ್ನಿ ಹಳ್ಳದ ಸೇತುವೆ ಕಾಮಗಾರಿಗೆ ತಲಾ ರು. 50 ಲಕ್ಷ ಅಂದಾಜು ಪತ್ರಿಕೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಮಾಹಿತಿ ನೀಡಬೇಕು. ಅಂಕನಾಳ ವಯಾ ಹಲ್ಕಾವಟಗಿ ರಸ್ತೆ ರಿಪೇರಿ ಕಾಮಗಾರಿ ಪಡೆದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿ ಮಹಾಂತೇಶ ಅವರಿಗೆ ಶಾಸಕ ಮಾನಪ್ಪ ವಜ್ಜಲ್ ಹಾಗೂ ಜಿಪಂ ಸದಸ್ಯ ಭೂಪನಗೌಡ ಕರಡಕಲ್ ಸೂಚಿಸಿದರು.
ಪೊಲೀಸ್: ತಾಲೂಕಿನಲ್ಲಿ ಕಳ್ಳತನ, ಜೂಜಾಟ ಮತ್ತು ಮಟಗಾ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡವರ ಮೇಲೆ ದಾಖಲಿಸಿದ ಪ್ರಕರಣಗಳಿಗೆ ಯಾವ ರೀತಿ ಕ್ರಮ ಕೈಗೊಂಡಿದ್ದಾರೆಂಬ ಮಾಹಿತಿ ದೊರೆಯುತ್ತಿಲ್ಲ. ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ಸಿಪಿಐ ಪಂಚಾಕ್ಷರಯ್ಯ ಅವರಿಗೆ ಶಾಸಕ ವಜ್ಜಲ್ ತಾಕೀತು ಮಾಡಿದರು.
ಕೆಬಿಜೆಎನ್‌ಎಲ್:  ಜಿಲ್ಲೆಯ ಬಹುದಿನದ ಬೇಡಿಕೆಯಾದ ನಂದವಾಡಗಿ ಏತನೀರಾವರಿ ಯೋಜನೆ ಜಾರಿಗೆ ಈ ಹಿಂದೆ 3.37 ಟಿಎಂಸಿ ನೀರು ಹಂಚಿಕೆ ಮಾಡಿ ಸರ್ವೆ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ಈಗ 6 ಟಿಎಂಸಿಯ ಕ್ರಿಯಾ ಯೋಜನೆ ತಯಾರಿಸಲು ಹೇಳಿದ್ದಾರೆ. ಸರ್ಕಾರದಿಂದ ಅನುಮತಿ ದೊರೆಯಬೇಕಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ವಿವರಿಸಿದರು.
ಇದಕ್ಕೆ ಜಿಪಂ ಸದಸ್ಯ ಎಚ್.ಬಿ. ಮುರಾರಿ ಮಾತನಾಡಿ, ನಂದವಾಡಗಿ ಏತನೀರಾವರಿ ಯೋಜನೆ ಜಾರಿಯಿಂದ ಮೂರು ತಾಲೂಕುಗಳ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಆರ್ಸೆನಿಕ್, ಫ್ಲೋರೈಡ್ ಅಂಶವುಳ್ಳ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಯೋಜನೆ ಜಾರಿಗೆ 6 ಟಿಎಂಸಿ ನೀರು ಹಂಚಿಕೆ ಮಾಡಿದರೆ ಒಳ್ಳೆಯದು. ಆದರೆ 5.50ಗೆ ಇದ್ದ ಆರ್‌ಎಲ್ ಈಗ 5.40ಗೆ ಆರ್‌ಎಲ್ ಇಳಿಕೆ ಮಾಡಿರುವುದರಿಂದ ಕೊನೆಯ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಬರುವುದಿಲ್ಲ ಮತ್ತು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಆಗುವುದಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ಮುಂದುವರಿಯಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಲಲಿತಮ್ಮ ಶಿವನಗೌಡ, ಉಪಾಧ್ಯಕ್ಷ ಮಾನಪ್ಪ ಚವ್ಹಾಣ, ಜಿಪಂ ಸದಸ್ಯರಾದ ಭೂಪನಗೌಡ ಕರಡಕಲ್, ಎಚ್.ಬಿ. ಮುರಾರಿ, ಮಹಾದೇವಪ್ಪಗೌಡ ಮಸ್ಕಿ, ದುರುಗಮ್ಮ ಗುಂಡಪ್ಪ ನಾಯಕ, ಮೀನಾಕ್ಷಮ್ಮ, ಪುಷ್ಪಾ ಪಾಮಯ್ಯ ಮುರಾರಿ ಸೇರಿದಂತೆ ಆರೋಗ್ಯ, ಜೆಸ್ಕಾಂ, ಪಂಚಾಯತ್ ರಾಜ್, ಕೃಷಿ, ಶಿಕ್ಷಣ, ಭೂ ಸೇನಾ, ಸಮಾಜ ಕಲ್ಯಾಣ, ಜಲಾನಯನ, ವಲಯ ಅರಣ್ಯ, ಮೀನುಗಾರಿಕೆ, ಕೈಗಾರಿಕೆ, ಪೊಲೀಸ್, ತಾಪಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.