ಮುಸ್ಲಿಂ ನೌಕರರ ಸಂಘದ ಕಾರ್ಯಕಾರಿ ಸಮಿತಿ ರಚನೆ
ಲಿಂಗಸ್ಗೂರು: ತಾಲೂಕು ಮುಸ್ಲಿಂ ನೌಕರರ ಸಂಘದ ಕಾರ್ಯಕಾರಿ ಸಮಿತಿ ರಚನೆ ಮಾಡಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷ, ಶಿಕ್ಷಕ ಮಹ್ಮದ್ ಅಲಿ ದೋಟಿಹಾಳ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷರಾಗಿ ಉಪನ್ಯಾಸಕ ಮಹ್ಮದ್ ಅಹ್ಮದ್, ಉಪಾಧ್ಯಕ್ಷರಾಗಿ ಮುಖ್ಯಗುರು ಮಹ್ಮದ್ ಮಹೆಬೂಬ, ಪ್ರಾಚಾರ್ಯ ನೂರ್ಬಾಷ, ಪ್ರಧಾನ ಕಾರ್ಯದರ್ಶಿ ಶಿಕ್ಷಕ ಮಹ್ಮದ್ ಮುಸ್ತಫಾ, ಸಹ ಕಾರ್ಯದರ್ಶಿ ಮುಖ್ಯಗುರು ಮಹ್ಮದ್ ಆಝಮ್, ಖಜಾಂಚಿ ಶಿಕ್ಷಕ ಖಾಜಾಹುಸೇನ್, ಕಾನೂನು ಸಲಹೆಗಾರರಾಗಿ ಶಿಕ್ಷಕ ರಹೀಮಾನ್ಸಾಬ ಹವಾಲ್ದಾರ, ಸಂಘಟನಾ ಕಾರ್ಯದರ್ಶಿ ಪಿಡಬ್ಲ್ಯೂಡಿ ಇಲಾಖೆ ಹಾಜೀಬಾಬು, ಸಲಹಾ ಸಮಿತಿ ಸದಸ್ಯರಾಗಿ ಶಿಕ್ಷಕರಾದ ಜಮೀರ್ ಅಹ್ಮದ್, ಖಾಜಾ ಮೋಹಿನುದ್ದಿನ್, ಹಾಜೀಮಲಂಗಬಾಬ, ಮುರ್ತುಜಾ, ಮಹ್ಮದ್ ಮುನಾವರ್ ಇವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಇಂದು ನೆರವು ಸಂಗ್ರಹ
ರಾಯಚೂರು: ಉತ್ತರಾಖಂಡದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿದವರಿಗೆ ನೆರವಾಗಲು ಎಸ್ ಯುಸಿಐ ಸಂಘಟನೆಯು ಜೂ.24ರಂದು ನಗರದಲ್ಲಿ ಆರ್ಥಿಕ ಸಹಾಯ ಮತ್ತು ಔಷಧವನ್ನು ಸಂಗ್ರಹಿಸಲಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ.ಸುನೀತ್ ಕುಮಾರ್, ನಗರದಲ್ಲಿ ಹಣ ಮತ್ತು ಔಷಧವನ್ನು ಸಂಗ್ರಹಿಸಲಾಗುತ್ತದೆ. ಆನಂತರ ಆರ್ಥಿಕ ನೆರವು ಮತ್ತು ಔಷಧವನ್ನು ವೈದ್ಯರ ತಂಡದೊಂದಿಗೆ ನೆರೆ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ. ನೆರೆ ಸಂತ್ರಸ್ತರಿಗೆ ನಗರದ ಜನತೆ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.
ಬೆಂಕಿ ತಗುಲಿ ಇಬ್ಬರ ಸಾವು
ರಾಯಚೂರು: ಸಿಂಧನೂರು ತಾಲೂಕಿನ ಸತ್ಯನಾರಾಯಣ ಕ್ಯಾಂಪಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತನನ್ನು ವೆಂಕಟೇಶ್ವರರಾವ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಸ್ಟವ್ಗೆ ಬೆಂಕಿ ಹಚ್ಚಲು ಹೋದಾಗ ಆಕಸ್ಮಿಕವಾಗಿ ಆತನಿಗೆ ಬೆಂಕಿ ತಗುಲಿದ್ದು ಸುಟ್ಟ ಗಾಯಗಳಿಂದ ಬಳಲಿದ ಆತನನ್ನು ಬಳ್ಳಾರಿಯ ವಿಮ್ಸ್ಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಮೃತಪಟ್ಟಿದ್ದಾಳೆ. ಮೃತಳನ್ನು ಲಲಿತಮ್ಮ ಎಂದು ಗುರುತಿಸಲಾಗಿದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಡಾದುಡ್ಡಿಗೆ ಹಾಲು ಮಾರಾಟ
ಸಿಂಧನೂರು: ನಗರದ ಗುರುದೇವ ಹೊಟೇಲ್ ಹಿಂದುಗಡೆ ಇರುವ ರೆಡ್ಡಿ ಮಿಲ್ಕ್ ಪಾರ್ಲರ್ನಲ್ಲಿ ನಂದಿನಿ, ಶುಭಂ, ಆರೋಗ್ಯ ಹಾಲಿನ ಪ್ಯಾಕೆಟ್ಗಳನ್ನು ಅಡ್ಡಾದುಡ್ಡಿಗೆ ಮಾರಾಟ ಮಾಡುತ್ತಿದ್ದು, ದಿನನಿತ್ಯ ಇದೇ ವಿಷಯವಾಗಿ ಏಜೆಂಟ್ ಹಾಗೂ ಗ್ರಾಹಕರ ಮಧ್ಯ ಜಗಳ ಸಾಮಾನ್ಯವಾಗಿದೆ. ಎಂಆರ್ಪಿ ದರಕ್ಕಿಂತ 2ರಿಂದ 3ರಷ್ಟು ಹೆಚ್ಚು ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಆತನನ್ನು ಗ್ರಾಹಕರು ಕೇಳಿದರೆ ಇಷ್ಟವಿದ್ದರೆ ಖರೀದಿಸಿರಿ, ಇಲ್ಲದಿದ್ದರೆ ಬಿಡಿ. ನಾನಂತೂ ಹೆಚ್ಚಿಗೆ ದರದಲ್ಲಿ ಮಾರಾಟ ಮಾಡುತ್ತೇನೆ ಎಂದು ಏಜೆಂಟ್ ಬಹಿರಂಗವಾಗಿ ಹೇಳುತ್ತಾರೆ. ಬೆಳಗ್ಗೆ 8ರೊಳಗೆ ಖರೀದಿಸಿದರೆ ಎಂಆರ್ಪಿ ದರಕ್ಕೆ ಕೊಡುತ್ತೇನೆಂದು ಹೇಳುವ ಅವರು, 8 ಗಂಟೆಯೊಳಗೆ ಹೋದರೆ 1 ಕೂಲಿಂಗ್ ಚಾರ್ಜ್ ಹೆಚ್ಚಿಗೆ ಕೊಡಬೇಕೆಂದು ದಬಾಯಿಸುತ್ತಾರೆ. 8 ಗಂಟೆ ಮೇಲೆ ಹೋದರೆ 2 ಹೆಚ್ಚಿಗೆ ಕೊಡಲೇಬೇಕು. ಸ್ವಲ್ಪ ತಡವಾದರೆ ಹಾಲನ್ನು ಇಳಿಸಿಕೊಳ್ಳುವುದಿಲ್ಲ. ತಡವಾಗಿದೆ, ಹಾಲಿನ ಪ್ಯಾಕೆಟ್ಗಳು ಒಡೆದಿವೆ ಎಂಬ ಕಾರಣಗಳನ್ನೊಡ್ಡಿ ವಾಪಸ್ ತೆಗೆದುಕೊಂಡು ಹೋಗುವಂತೆ ರೇಗಾಡುತ್ತಾರೆ. ಬೆಳಗಿನ ಜಾವ ಹಾಲು ಖರೀದಿಸಲು ಹೋದ ಗ್ರಾಹಕರಿಗೆ ಜಗಳ ತಲೆನೋವು ತರುತ್ತದೆ.
ಏನು ಬೇಕಾದರೂ ಮಾಡಿಕೊಳ್ಳಿ: ತಾನು ಹೆಚ್ಚಿನ ದರದಲ್ಲಿ ಹಾಲನ್ನು ಮಾರಾಟ ಮಾಡುವ ಬಗ್ಗೆ ಅಧಿಕಾರಿಗಳಿಗೆ ದೂರು ಕೊಡುತ್ತೇವೆಂದರೆ, 'ದೂರು ಕೊಟ್ಟರೆ ಕೊಡಿ, ಇಲ್ಲಿ ಬೇರೆಯವರು ಯಾರೂ ಏಜೆನ್ಸಿ ಮಾಡುವುದಿಲ್ಲ. ನನ್ನನ್ನು ಅಧಿಕಾರಿಗಳು ತೆಗೆಯುವುದಿಲ್ಲ. ನಾನು ಅವರಿಗೆ ಅನಿವಾರ್ಯವಾಗಿದ್ದೇನೆ. ನಿಮ್ಮಂತೆ ಅನೇಕರು ಫೋನ್ ಮಾಡಿದ್ದರೂ ಏನೂ ಆಗಿಲ್ಲ' ಎಂದು ಮಾರುತ್ತರ ನೀಡುತ್ತಾನೆ. ರಾಯಚೂರಿನ ಕೆಎಂಎಫ್ ಎಂಡಿ ರಾಮಚಂದ್ರಪ್ಪ ಅವರಿಗೆ ಈತನ ಉಪಟಳದ ಕುರಿತು ದೂರು ಹೇಳಿದರೆ- 'ಆ ಏಜೆನ್ಸಿಯ ಬಗ್ಗೆ ನಮಗೂ ಸಾಕಾಗಿದೆ. ಆದರೆ ಅಲ್ಲಿ ಬೇರೆಯವರು ಯಾರೂ ಏಜೆನ್ಸಿ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ ನಾವು ಆತನ ತಪ್ಪುಗಳನ್ನು ಮುಚ್ಚಿಕೊಂಡು ಹೊರಟಿದ್ದೇವೆ. ಇನ್ನೊಂದು ವಾರದಲ್ಲಿ ಹೊಸ ಏಜೆನ್ಸಿ ಕೊಡಲು ಪ್ರಯತ್ನಿಸುತ್ತೇವೆ' ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಬಳ್ಳಾರಿಯ ಕೆಎಂಎಫ್ ಅಧಿಕಾರಿ ಸುರೇಶ ಸಹ ಇದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಹಾಲಿನ ವಾಹನಗಳ ಡ್ರೈವರ್ಗಳು ಈತನ ಬೆದರಿಕೆಗಳಿಂದಾಗಿ ಬೇಸತ್ತು ನಿತ್ಯ ಜಗಳವಾಡಿಕೊಂಡೇ ಊರು ಸೇರುತ್ತಾರೆ. ಈ ಏಜೆನ್ಸಿಯ ಅವಾಂತರ ನಿಯಂತ್ರಿಸಲು ಸಿಂಧನೂರಿನಲ್ಲಿ ಯಾರೂ ಇಲ್ಲವೇ ಎಂದು ಅನೇಕ ಗ್ರಾಹಕರಾದ ಗುರುರಾಜ, ವ್ಯಾಸರಾಜ, ವೀರೇಶ ಸಜ್ಜನ, ಅಮರೇಶ 'ಕನ್ನಡಪ್ರಭ'ಕ್ಕೆ ತಮ್ಮ ಅಳಲು ತೋಡಿಕೊಂಡರು.
ಅವಿರೋಧ ಆಯ್ಕೆ
ರಾಯಚೂರು: ತಾಲೂಕಿನ ಭೋವಿ(ವಡ್ಡರ) ಸಮಾಜದ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಈರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಈರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

