ರಾಯಚೂರು

ಬದ್ಧತೆ ಇದ್ದರೆ ಮಾತ್ರ ಕೃಷಿಯಲ್ಲಿ ಲಾಭ ಸಾಧ್ಯ

Published On :

ರಾಯಚೂರು: ಹೊಸ ಸಂಶೋಧನೆಗಳಿಗೆ ರೈತರ ಸ್ಪಂದನೆ, ಯೋಜನಾ ಬದ್ಧ ಕಾರ್ಯನಿರ್ವಹಣೆ ಹಾಗೂ ಪರಿಶ್ರಮದಿಂದ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯ ಎಂದು ರಾಯಚೂರು ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ಕೃಷಿ ವಿವಿಯಲ್ಲಿ ಆಯೋಜಿಸಿದ್ದ ಅಂಟಿನ ಚವಳಿಕಾಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ, ದೇಶಕ್ಕೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಪೂರಕ ಕಾರ್ಯನಿರ್ವಹಣೆ ಅವಶ್ಯಕ ಎಂದರು.
ಉತ್ಪಾದನೆ: ದೇಶದ ಜನಸಂಖ್ಯೆ ಹೆಚ್ಚಳ ಕಾಣುತ್ತಿದ್ದು, ಅದಕ್ಕೆ ಪೂರಕವಾಗಿ ಆಹಾರ ಉತ್ಪಾದನೆಯನ್ನೂ ಹೆಚ್ಚಿಸಬೇಕಿದೆ. ಲಭ್ಯವಿರುವ ಕೃಷಿ ಜಮೀನಿನಲ್ಲೇ ಎಲ್ಲರಿಗೂ ಆಹಾರ ಭದ್ರತೆ ಒದಗಿಸುವ ಬಗ್ಗೆ ಯೋಚಿಸಬೇಕಿದೆ. ಈ ನಿಟ್ಟಿನಲ್ಲಿ ಹೊಸ ಸಂಶೋಧನೆ ಗಳು ನಿರಂತರ ನಡೆಯಬೇಕಾಗಿದೆ ಎಂದರು.
ರೈತರು ಸಾಂಪ್ರದಾಯಿಕ ಬೆಳೆಗಳ ಜತೆ ಜತೆಗೆ ಕೃಷಿಯಲ್ಲಿ ಹೆಚ್ಚು ಆದಾಯ ತರುವಂಥ ಬೆಳೆಗಳನ್ನು ಬೆಳೆದು ಆರ್ಥಿಕ ಪ್ರಗತಿ ಸಾಧಿಸಬೇಕಿದೆ. ಅಂಟಿನ ಚವಳಿಕಾಳು ಬೆಳೆಯುವುದರಿಂದ ರೈತರು ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಮಾರಕ: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯಕ. ಆ ಮೂಲಕ ಹೆಚ್ಚಿನ ಆಹಾರ ಉತ್ಪಾದನೆ ಸಾಧ್ಯ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚೆಚ್ಚು ನಡೆಯಬೇಕು. ಇದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುವ ಭೀತಿಯಿದೆ. ಈ ಭಾಗದ ಒಳ ಭೂಮಿಯಲ್ಲಿ ಅಂಟಿನ ಚವಳಿಕಾಳು ಬೆಳೆಯುವುದರಿಂದ ಕಡಿಮೆ ವೆಚ್ಚದಲ್ಲಿ ಸಮೃದ್ಧ ಲಾಭ ಪಡೆಯಬಹುದು ಎಂದರು.
ವಿವಿ ವಿಸ್ತರಣಾ ನಿರ್ದೇಶಕ ಡಾ.ಕೆ.ಪಿ. ವಿಶ್ವನಾಥ ಮಾತನಾಡಿ, ದೇಶದಲ್ಲಿ ಬೆಳೆಯುವ ಬತ್ತ ಮತ್ತು ಹತ್ತಿ ಮತ್ತಿತರ ಬೆಳೆ, ಪದಾರ್ಥಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆಯಿದೆ. ಅದೇ  ರೀತಿಯಲ್ಲಿ ಅಂಟಿನ ಚವಳಿಕಾಳು ಬೆಳೆಗೂ ಹೆಚ್ಚು ಬೇಡಿಕೆಯಿದೆ. ಗಟ್ಟಿಯಾದ ಅಂಟು ಸೇರಿ ನಾನಾ ಪ್ರಯೋಜನೆಗಳುಳ್ಳ ಅಂಟಿನ ಚವಳಿಕಾಳಿನ ರಪ್ತು ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ವಿವಿ ತೋಟಗಾರಿಕೆ ಪ್ರಾಧ್ಯಾಪಕ ಡಾ. ಎಂ.ಜಿ. ಪಾಟೀಲ್, ಸಸ್ಯ ರೋಗಶಾಸ್ತ್ರದ ಹಿರಿಯ ವಿಜ್ಞಾನಿ ಡಾ. ಗುರುರಾಜ್ ಸುಂಕದ, ಪ್ರಗತಿಪರ ರೈತ ಕೆ.ವಿ. ಕೃಷ್ಣರಾವ್, ಅಮರೇಶ್ವರ್ ಅಗ್ರಿಟೆಕ್ ಲಿ., ವ್ಯವಸ್ಥಾಪಕ ನಿರ್ದೇಶಕ ಕೆ. ಪ್ರಸಾದ್, ಕಾರ್ಯಕ್ರಮ ಸಂಯೋಜಕ ಡಾ. ಲಕ್ಷ್ಮಿರೆಡ್ಡಿ ಇದ್ದರು. ವಿವಿಧೆಡೆಯಿಂದ ನೂರಾರು ರೈತರು ಪಾಲ್ಗೊಂಡಿದ್ದರು. ಡಾ. ಎಸ್.ಎನ್. ಹಂಚಿನಾಳ್, ಡಾ. ಪ್ರಮೋದ ಕಟ್ಟಿ  ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.