ರಾಯಚೂರು

ಸಹಕಾರ ಕಾಯ್ದೆ ತಿದ್ದುಪಡಿಗೆ ನಿರ್ಧಾರ: ಸಚಿವ

Published On :

ಕನ್ನಡಪ್ರಭ ವಾರ್ತೆ   ರಾಯಚೂರು   ಜೂ.27
ರಾಜ್ಯದ ಸಹಕಾರ ಸಂಸ್ಥೆಗಳಲ್ಲಿ ಸುಧಾರಣೆ ತರಲು ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆ ಸಹಕಾರ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿದೆ. ಎಲ್ಲರಿಗೆ ಒಪ್ಪಿಗೆಯಾಗುವಂಥ ಕಾಯಿದೆ ಜಾರಿಗೆ ತರುವುದಾಗಿ ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಭರವಸೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಸಹಕಾರ ಸಚಿವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಈಗಾಗಲೇ ಕಾಯಿದೆ ತಿದ್ದುಪಡಿಗೆ ಸಂಬಂಧಿಸಿ ಕರಡು ಪ್ರತಿ ಸಿದ್ಧಪಡಿಸಿ ಆಕ್ಷೇಪಣೆಗಳಿಗೆ ಆಹ್ವಾನಿಸಿದೆ. ಕಾಯಿದೆಯ ಕರಡಿನಲ್ಲಿ ಲೋಪದೋಷಗಳಿರುವುದು ಗಮನಕ್ಕೆ ಬಂದಿದೆ. ಅವುಗಳಲ್ಲಿ ಮಾರ್ಪಾಟು ಮಾಡಿ ಸಮರ್ಪಕ ಕಾಯಿದೆ ಜಾರಿಗೆ ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದರು.
ತಜ್ಞರೊಂದಿಗೆ ಚರ್ಚೆ: ಸಹಕಾರ ಇಲಾಖೆ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಸಹಕಾರಿ ಖಾತೆ ಮಾಜಿ ಸಚಿವರು ಹಾಗೂ ತಜ್ಞರೊಂದಿಗೆ ಚರ್ಚಿಸಿದ್ದು, ಉತ್ತರ ಕರ್ನಾಟಕದ ಸಹಕಾರ ಸಂಸ್ಥೆಗಳು ತಮ್ಮ ಸಮಸ್ಯೆ ಮತ್ತು ಕರಡಿನಲ್ಲಿ ಕೈಗೊಳ್ಳಬೇಕಾದ ಅಂಶಗಳನ್ನು ಸಂವಾದ ಕಾರ್ಯಕ್ರಮದ ಮೂಲಕ ತಿಳಿಸಿರುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.
ಸರ್ಕಾರವು ಸಹ ಸದಸ್ಯತ್ವ, ನಾಮಮಾತ್ರ ಸದಸ್ಯರ ಮಾಹಿತಿ ಮತ್ತು ಮೀಸಲಿನಲ್ಲಿ ಬದಲಾವಣೆ ಮಾಡಲಿದೆ. ಚುನಾವಣೆ ವಿಚಾರದಲ್ಲಿನ ಲೋಪಗಳು ಇಲಾಖೆ ಮಟ್ಟದಲ್ಲಿ ಸುಧಾರಿಸುವುದು ಅಸಾಧ್ಯ. ಈ ಕಾರ್ಯಕ್ಕೆ ಪ್ರತ್ಯೇಕ ಆಯೋಗವಿದೆ ಎಂದು ಅವರು ಹೇಳಿದರು.
ಹೊಸ ಕಾಯಿದೆ ಜಾರಿಗೆ ಯೋಜನೆ: ಸಹಕಾರ ಕ್ಷೇತ್ರದ ಏಳಿಗೆಗೆ ಸರ್ಕಾರ ಹೊಸ ಕಾಯಿದೆ ಜಾರಿಗೆ ಯೋಜಿಸಿದೆ. ಕರಡು ಪ್ರತಿಯ ಅಂಶಗಳನ್ನು ಜನರ ಮುಂದಿಟ್ಟು ಚರ್ಚಿಸಿದ ನಂತರದಲ್ಲಿ ಅದರ ಜಾರಿಗೆ ಮುಂದಾಗಲಿದೆ ಎಂದು ಭರವಸೆ ನೀಡಿದರು.
ರಾಜ್ಯ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಮನೋಹರ್ ಮಸ್ಕಿ ಮಾತನಾಡಿ, ಸರ್ಕಾರಗಳಿಂದ ಕಾರ್ಪೋರೇಟ್ ವಲಯಕ್ಕೆ ಸಿಗುತ್ತಿರುವ ಆದ್ಯತೆ ಸಹಕಾರಿ ಸಂಘಗಳಿಗೆ ದೊರೆಯುತ್ತಿಲ್ಲ. ಇಂಥ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಎ.ವೆಂಕಟೇಶ ನಾಯಕ, ಒಕ್ಕೂಟದ ನಿರ್ದೇಶಕ ವಿಶ್ವನಾಥ ಹಿರೇಮಠ, ಮಂಜುನಾಥ. ಎಸ್., ಬಿ.ಎಸ್. ಸುಲ್ತಾನಪುರೆ, ಮಂಜುಳಾ ಪಾಟೀಲ್, ರಾಜಶ್ರೀ ಅಗಸರ್, ಜಿಲ್ಲಾ ಆರ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ಮತ್ತಿತರರು ಇದ್ದರು.
ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಗಳಿಂದ ಸಹಕಾರಿ ಸಂಘಗಳ ಪದಾಧಿಕಾರಿಗಳು ಆಗಮಿಸಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.