ರಾಯಚೂರು

ಕೈಕೊಟ್ಟ ಮಳೆ; ಮುಂಗಾರು ಬಿತ್ತನೆಗೆ ಹಿನ್ನಡೆ

Published On :

ಆಳಂದ: ಮುಂಗಾರು ಹಂಗಾಮಿನ ಮಳೆಗಾಲ ಆರಂಭಗೊಂಡು ಜೂನ್ ತಿಂಗಳು ಪೂರ್ಣಗೊಳ್ಳುತ್ತ ಬಂದರು ಸಮರ್ಪಕ ಮಳೆಯಾಗದೆ ತಾಲೂಕಿನ ಯಾವುದೇ ಕೆರೆ, ಗೋ ಕಟ್ಟೆಗಳಿಗೆ ನೀರು ಹರಿದಿಲ್ಲ.
ಇದರಿಂದಾಗಿ ನೀರಿನ ಮೂಲವಾದ ಬಾವಿ, ಬೋರ್ವೆಲ್ಗಳಿಗೆ ಅಂತರ್ಜಲ ಹೆಚ್ಚಾಗಿಲ್ಲ. ಕೃಷಿ ಹಾಗೂ ಜನತೆಗೆ ಕುಡಿಯಲು ನೀರಿಲ್ಲದೆ ಹಳ್ಳಿಗಳಲ್ಲಿನ ಸಂಕಷ್ಟ ಮುಂದುವರೆದಿದೆ.
ಇಂದಲ್ಲ ನಾಳೆ ಮಳೆ ಬಂದಿತ್ತೆಂದು ಅನೇಕ ರೈತರು ಬಿತ್ತನೆ ಕೈಗೊಂಡು ಬಿತ್ತನೆಯಾದ ನಾಟಿ ಬೆಳೆ ಉಳಿಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇನ್ನೂ ಶೇ.70ರಷ್ಟು ಜನ ಬಿತ್ತನೆ ಕೈಗೊಳ್ಳದೆ ಭೂ ತೇವಾಂಶಕ್ಕಾಗಿ ಕಾಯತೊಡಗಿದ್ದಾರೆ.
ಖಜೂರಿ ಜಿನುಗು ಕೆರೆ ಭರ್ತಿ: ಮಹಾರಾಷ್ಟ್ರ ಗಡಿಯಲ್ಲಿ ಸುರಿದ ಅಲ್ಪಸ್ವಲ್ಪ ಮಳೆಯಿಂದಾಗಿ ಖಜೂರಿ ಜಿನುಗು ಕೆರೆಗೆ ಮಾತ್ರ ನೀರು ಭರ್ತಿಯಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಆಳಂದ, ತಡಕಲ್, ಹಿರೋಳಿ, ಝಳಕಿ, ಮಾಡಿಯಾಳ, ಕಡಗಂಚಿ, ನಿಂಬಾಳ, ಕಲವಗಾ ಹೀಗೆ 11 ಜಿನುಗು ಕೆರೆ ಮತ್ತು 18 ಕೆರೆ ಸೇರಿ ಬೃಹತ್ ಅಮರ್ಜಾ ಅಣೆಕಟ್ಟೆ ಒಳಗೊಂಡು ಮಳೆಯಿಲ್ಲದಕ್ಕೆ ಯಾವ ಕಡೆಯೂ ನೀರು ಭರ್ತಿಯಾಗಿಲ್ಲ. ಕನಿಷ್ಟ ಮಟ್ಟದ ನೀರು ಸಂಗ್ರಹಗೊಂಡಿಲ್ಲ. ಇದರಿಂದ ಜನತೆಗೆ ನೀರಿನ ಸಮಸ್ಯೆ ಮುಂದುವರೆದಿದೆ.
ಮಳೆ ವಿವರ: ತಾಲೂಕಿನ ವಾರ್ಷಿಕ ಸರಾಸರಿ ಜೂನ್ ತಿಂಗಳಲ್ಲಿ 100.2 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಏಳು ಮಳೆಮಾಪನ ಕೇಂದ್ರ ವ್ಯಾಪ್ತಿಯಲ್ಲಿ ಜೂನ್ 25ರವರೆಗೆ ಬಿದ್ದ ಮಳೆ ವಿವರ ಗಮನಿಸಿದರೆ ಖಜೂರಿ ಹೋಬಳಿ ಹೊರತು ಪಡಿಸಿ ಆಳಂದ, ಮಾದನಹಿಪ್ಪರಗಾ, ನಿಂಬರಗಾ, ಕೊರಳ್ಳಿ, ಸರಸಂಬಾ ವಲಯದಲ್ಲಿ ಬಿತ್ತನೆಗೆ ಮಳೆ ಪೂರಕವಾಗಿಲ್ಲ ಬಂದಿರುವುದಿಲ್ಲ ಎನ್ನಲಾಗಿದೆ.
ಆಳಂದ ವ್ಯಾಪ್ತಿಯಲ್ಲಿ 80 ಮಿ.ಮೀಟರ್, ಖಜೂರಿ 129 ಮಿ.ಮೀ, ನರೋಣಾ 34 ಮಿ.ಮೀ, ನಿಂಬರಗಾ 79 ಮಿ.ಮೀ, ಮಾದನಹಿಪ್ಪರಗಾ 76.7ಮಿ.ಮೀ, ಸರಸಂಬಾ 43 ಮಿ.ಮೀ, ಕೊರಳ್ಳಿ ವ್ಯಾಪ್ತಿಯಲ್ಲಿ 41.2 ಮಿ.ಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಚಂದ್ರಕಾಂತ ರುದ್ರಾ ವಿವರಣೆ ನೀಡಿದ್ದಾರೆ.
ಬಿತ್ತನೆ ಕ್ಷೇತ್ರ: ತಾಲೂಕಿನ ನರೋಣಾ, ಖಜೂರಿ, ಮಾದನಹಿಪ್ಪರಗಾ, ನಿಂಬರಗಾ ಮತ್ತು ಆಳಂದ ವಲಯದಲ್ಲಿ ಈಗಾಗಲೇ ತೇವಾಂಶ ನೋಡಿಕೊಂಡು ರೈತರು ಬಿತ್ತನೆ ಆರಂಭಿಸಿದ್ದಾರೆ. ಗೊಬ್ಬರ ಬೀಜ ಸಂಗ್ರಹಿಸಿಕೊಂಡಿದ್ದಾರೆ. 2 ದಿನಗಳಿಂದ ಅಲ್ಪಕಾಲಿಕ ಸುರಿದ ಮಳೆಯಿಂದ ನಿಂಬರಗಾ, ನರೋಣಾ, ಮಾದನಹಿಪ್ಪರಗಾ ಕಡೆ ಬಿತ್ತನೆ ಆರಂಭಗೊಂಡಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಪಕಾಲಿಕ ಬೆಳೆ ಬೆಳೆಯುವುದು ಕೈಬಿಟ್ಟು ದೀರ್ಘಕಾಲಿಕ ಬೆಳೆ ಮೊರೆ ಹೋಗುವಂತಾಗಿದೆ. ಕಳೆದ ಸಾಲಿನಲ್ಲಿ ಸೋಯಾಬಿನ್ 350 ಹೆಕ್ಟೇರ್ ಕ್ಷೇತ್ರ ಗುರಿ ಪೈಕಿ 7411 ಹೆಕ್ಟೇರ್ ಬಿತ್ತನೆ ಕೈಗೊಳ್ಳಲಾಗಿತ್ತು. ಈ ಸಲದ ಮಳೆಯ ಹಿನ್ನೆಡೆಯಿಂದಾಗಿ ಸೋಯಾಬಿನ್ 10 ಸಾವಿರ ಹೆಕ್ಟೇರ್ ಬಿತ್ತನೆಯಾಗುವ ಅಂದಾಜಿದೆ. ಜೂನ್ ಅಂತ್ಯಕಂಡರು 42 ಹಳ್ಳಿಗಳಲ್ಲಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.