ಕಲಂ 371(ಜೆ) ಉಪಸಮಿತಿ ಸಭೆಗೆ ಸಜ್ಜಾಗಿ: ಡಿಸಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜೂ.28
ಭಾರತ ಸಂವಿಧಾನದ ಅನುಚ್ಛೇದ 371(ಜೆ)ಯನ್ನು ಅನುಷ್ಠಾನಗೊಳಿಸುವ ಸಂಬಂಧ ಸಚಿವ ಸಂಪುಟದ ಉಪ ಸಮಿತಿಯ ಸಭೆಯು ಜು.1ರಂದು ಗುಲ್ಬರ್ಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಲಿದೆ.
ಹೈದ್ರಾಬಾದ್- ಕರ್ನಾಟಕದ ಆರು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಿ ಸಂವಿಧಾನದಲ್ಲಿ ತಿದ್ದುಪಡಿ ತಂದು 371ನೇ ವಿಧಿಗೆ (ಜೆ)ಯನ್ನು ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ.
ಈ ಭಾಗದ ಅಭಿವೃದ್ಧಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲು, ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜನರಿಗೆ ಆ ಪ್ರದೇಶದಲ್ಲಿನ ಸಾರ್ವಜನಿಕ ಹುದ್ದೆಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲು ಹಾಗೂ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮೀಸಲಾತಿಯನ್ನು ಕಲ್ಪಿಸಬೇಕು. ಅದರಂತೆ ನಿಯಮಗಳನ್ನು ಪರಿಶೀಲಿಸಿ ವರದಿ ನೀಡುವ ಸಂಬಂಧಪಟ್ಟ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದೆ.
ಜನಪ್ರತಿನಿಧಿಗಳಿಂದ ಸಲಹೆ ಸಂಗ್ರಹ: ಈ ಸಚಿವ ಸಂಪುಟದ ಉಪ ಸಮಿತಿ ಈಗಾಗಲೇ ಜೂ.27, 28ರಂದು ಸಭೆ ನಡೆಸಿ ಹೈದ್ರಾಬಾದ್- ಕರ್ನಾಟಕ ಪ್ರದೇಶದ ಜಿಲ್ಲೆಗಳ ಸಂಸದರು ಹಾಗೂ ಶಾಸಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದಿದೆ.
ಈ ಸಚಿವ ಸಂಪುಟದ ಉಪ ಸಮಿತಿಯು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ಬರುವ ಜು.1ರಂದು ಗುಲ್ಬರ್ಗದಲ್ಲಿ ಸಭೆ ನಡೆಸಲು ಉದ್ದೇಶಿಸಿದೆ.
ಜವಾಬ್ದಾರಿ ನಿರ್ವಹಿಸಿ: ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ಸಭೆಯನ್ನು ಯಶಸ್ವಿಯಾಗಿ ನಡೆಯಲು ಸಂಬಂಧಿಸಿದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಆಯೋಜಿಸಿದ್ದ ಸಚಿವ ಸಂಪುಟದ ಉಪ ಸಮಿತಿ ಸಭೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಯ ನಿಗದಿ: ಜು.1ರ ಬೆ.10ರಿಂದ ಮ. 12ರ ವರೆಗೆ ಬೀದರ್ ಜಿಲ್ಲೆಗೆ ಸಂಬಂಧಿಸಿದಂತೆ ಹಾಗೂ ಮ.12ರಿಂದ ಮಧ್ಯಾಹ್ನ 2ರವರೆಗೆ ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಹಾಗೂ ಮ.3ರಿಂದ ಸಂಜೆ 5ರವರೆಗೆ ಗುಲ್ಬರ್ಗ ಜಿಲ್ಲೆಗೆ ಸಂಬಂಧಿಸಿದ ಅಹವಾಲುಗಳನ್ನು ಸಚಿವ ಸಂಪುಟದ ಉಪಸಮಿತಿಯು ಆಲಿಸಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಗುಲ್ಬರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಜು.29 ರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಅಹವಾಲು ಸ್ವೀಕಾರ ಕೇಂದ್ರವನ್ನು ಆರಂಭಿಸಲಾಗುವುದು. ಈ ಅಹವಾಲು ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ಹಾಗೂ ಎಪಿಎಂಸಿ ಕಾರ್ಯದರ್ಶಿ ಚಂದ್ರಮೋಹನ್ ಅವರು ಅಹವಾಲುಗಳನ್ನು ಸ್ವೀಕರಿಸುವ ಹಾಗೂ ಪರಿಶೀಲಿಸುವ ಕಾರ್ಯನಿರ್ವಹಿಸುವರು.
ಇಬ್ಬರಿಂದ ಅಹವಾಲು ಸ್ವೀಕಾರ: ಈ ಇಬ್ಬರು ಅಧಿಕಾರಿಗಳು ಬೆ.10ರಿಂದ ಸಂಜೆ 5.30ರವರೆಗೆ ಅಹವಾಲು ಕೇಂದ್ರದಲ್ಲಿದ್ದು ಸಾರ್ವಜನಿಕರ, ಸಂಘ- ಸಂಸ್ಥೆಗಳ ಅಹವಾಲುಗಳನ್ನು ಸ್ವೀಕರಿಸುವಂತೆ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಸೂಚಿಸಿದರು.
ಸಚಿವ ಸಂಪುಟ ಉಪಸಮಿತಿಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಉಮಾಶ್ರೀ, ಖಮರುಲ್ ಇಸ್ಲಾಂ, ಡಾ. ಶರಣಪ್ರಕಾಶ ಪಾಟೀಲ್, ಬಾಬುರಾವ ಚಿಂಚನಸೂರ ಹಾಗೂ ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಧರಂಸಿಂಗ್ ಅವರು ಭಾಗವಹಿಸಲಿದ್ದಾರೆ ಎಂದ ಜಿಲ್ಲಾಧಿಕಾರಿ, ಸಭೆ ನಡೆಯುವ ಸಭಾಂಗಣವನ್ನು ಅಂದವಾಗಿ ಅಲಂಕೃತಗೊಳಿಸುವುದು ಹೂ-ದಾನಿ ಸೇರಿದಂತೆ ಇತರೆ ಏರ್ಪಾಡುಗಳನ್ನು ಮಾಡುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅವರಿಗೆ ತಿಳಿಸಿದರು.
ಸಚಿವರು, ಅಧಿಕಾರಿಗಳಿಗೆ ವಾಸ್ತವ್ಯ ವ್ಯವಸ್ಥೆ: ಬೆಂಗಳೂರಿನಿಂದ ಆಗಮಿಸುವ ವಿವಿಧ ಸಚಿವರ ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಐವಾನ್-ಇ-ಶಾಹಿ ಪ್ರವಾಸಿ ಮಂದಿರ ಹಾಗೂ ಖಾಸಗಿ ಹೊಟೇಲ್ಗಳಲ್ಲಿ ಏರ್ಪಾಡು ಮಾಡುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಮಹಾಗಾಂವಕರ್ ಹಾಗೂ ಗುಲ್ಬರ್ಗ ಉಪವಿಭಾಗಾಧಿಕಾರಿ ಹರ್ಷಾ ಶೆಟ್ಟಿ ಅವರಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಗಳನ್ನು ತಪಾಸಣೆ ನಡೆಸಿ ಸ್ವಚ್ಛವಾಗಿರಿಸುವಂತೆ ಇದೇ ಸಂದರ್ಭದಲ್ಲಿ ಹೇಳಿದರು. ಉಪಹಾರ ಹಾಗೂ ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯ ಆಯುಕ್ತ ರವೀಂದ್ರ ಅವರಿಗೆ ವಹಿಸಿದ ಜಿಲ್ಲಾಧಿಕಾರಿಗಳು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.
ಡಿಸಿಯಿಂದ ಅನುಮತಿ ಪಡೆಯಬೇಕು: ಅಹವಾಲು ಸಲ್ಲಿಸುವ ಸಂಘ ಸಂಸ್ಥೆಗಳು ಒಂದು ತಂಡದಲ್ಲಿ 3- 4 ಜನ ಮಾತ್ರ ಇರಬೇಕು. ಇದರಲ್ಲಿ ಹೆಚ್ಚಿನ ಜನರಿಗೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ಪಾಸುಗಳನ್ನು ಪಡೆದುಕೊಂಡರೆ ಜು.1ರ ಮ.3 ಗಂಟೆಗೆ ಅಹವಾಲು ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು, ವೈಯಕ್ತಿಕವಾಗಿ ನೀಡುವ ಮನವಿಗಳನ್ನು ಸಮಿತಿಗೆ ಸಲ್ಲಿಸಲಾಗುವುದು. ಆದರೆ ವೈಯಕ್ತಿಕವಾಗಿ ಮನವಿ ಸಲ್ಲಿಸುವವರಿಗೆ ಸಮಿತಿ ಮುಂದೆ ಹಾಜರಾಗಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಎಸ್ಪಿ ಸತೀಶಕುಮಾರ್, ಜಿಪಂ ಸಿಇಒ ಪಲ್ಲವಿ ಆಕುರಾತಿ, ಡಿಎಚ್ಒ ಡಾ. ಸಜ್ಜನಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮಹಾಗಾಂವಕರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

