ಶುದ್ಧ ನೀರು ಪೂರೈಸಲು ಬಾದರ್ಲಿ ಗಮನ ಹರಿಸಲಿ
ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ: ಎಂ. ಲಿಂಗಪ್ಪ
ಸಿಂಧನೂರು: ಸಿಂಧನೂರು ನಗರಸಭೆ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಆಡಳಿತ ಪಕ್ಷದ ಶಾಸಕರೇ ಇಲ್ಲಿ ಇರುವರು. ಸರ್ಕಾರ ಸಹ ಕಾಂಗ್ರೆಸ್ನದ್ದೇ. ಆದರೆ ಹಳ್ಳದ ನೀರನ್ನು ಶುದ್ಧೀಕರಿಸದೆ ನೇರವಾಗಿ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಕಲುಷಿತ ನೀರನ್ನು ನೂತನ ಶಾಸಕ ಹಂಪನಗೌಡ ಬಾದರ್ಲಿ ಕುಡಿಸುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಎಂ. ಲಿಂಗಪ್ಪ ಆರೋಪಿಸಿದರು.
ಅವರು ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ನಿವಾಸದಲ್ಲಿ ಶನಿವಾರ ಜೆಡಿಎಸ್ ತಾಲೂಕಾಧ್ಯಕ್ಷ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಬಾರಿ ಜೆಡಿಎಸ್ ನೇತೃತ್ವದಲ್ಲಿನ ನಗರಸಭೆ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿತ್ತು ಎಂದು ಪ್ರಚಾರ ಮಾಡಿ ಹಂಪನಗೌಡರು ಜನರಿಂದ ಓಟು ಹಾಕಿಸಿಕೊಂಡು ಗೆದ್ದರು. ಈಗ 18 ಜನ ಸದಸ್ಯರು ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದಾರೆ.
ಅಶುದ್ಧ ನೀರು ಸರಬರಾಜು: ಆದರೆ ಇವರೆಲ್ಲರೂ ಕಳೆದ ಎರಡು ತಿಂಗಳಿಂದ ನಗರದ ಜನತೆಗೆ ಐದು ದಿನಕ್ಕೊಮ್ಮೆ ನೀರು ಕುಡಿಸುತ್ತಿದ್ದಾರೆ. ಕಳೆದ ಎರಡು ವಾರದಿಂದ ಹಳ್ಳದ ನೀರನ್ನು ಶುದ್ಧೀಕರಿಸದೆ ನೇರವಾಗಿ ಸರಬರಾಜು ಮಾಡುತ್ತಿರುವುದರಿಂದ ಅನೇಕ ವಾರ್ಡ್ಗಳಲ್ಲಿ ಜನರು ಹೊಟ್ಟೆ ನೋವು, ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ ಎಂದು ಟೀಕಿಸಿದರು.
ನಾಡಗೌಡರ ಅವಧಿಯಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು. ಕಳೆದ ವರ್ಷ ಕುಡಿವ ನೀರಿನ ಸಮಸ್ಯೆ ತಾಲೂಕಿನಾದ್ಯಂತ ಉಲ್ಬಣಿಸಿದಾಗ ಬಿಜೆಪಿ ಸರ್ಕಾರವಿದ್ದರೂ ಮುನಿರಾಬಾದ್ನಿಂದ ಕುಡಿವ ನೀರನ್ನು ಬಿಡಿಸಿಕೊಂಡು ಇತಿಹಾಸವನ್ನೇ ಸೃಷ್ಟಿಸಿದ್ದರು. ನಗರ ಸೇರಿದಂತೆ ಹಳ್ಳಿ, ಕ್ಯಾಂಪ್ಗಳಲ್ಲಿ ಕುಡಿವ ನೀರಿನ ಸಮಸ್ಯೆಯಿಂದ ಆಗ ಜನ ಜಾನುವಾರುಗಳು ಮುಕ್ತಿ ಪಡೆದಿದ್ದವು. ಆದರೆ ಗ್ರಾಪಂನಿಂದ ಹಿಡಿದು ದೆಹಲಿವರೆಗೆ ಕಾಂಗ್ರೆಸ್ ಸರ್ಕಾರವೇ ಇದೆ. ಆದರೂ ನಗರದ ಜನತೆ ಕುಡಿಯುವ ನೀರಿನಿಂದ ಬಳಲುತ್ತಿರುವುದು ದುರ್ದೈವದ ಸಂಗತಿ ಎಂದು ವ್ಯಂಗ್ಯವಾಡಿದರು.
ದ್ವೇಷದ ರಾಜಕಾರಣ: ಹಂಪನಗೌಡರು ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ತಾವು ಹಾಗೂ ತಮ್ಮ ಪಕ್ಷ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ. ಆದರೆ ನಾಡಗೌಡರ ಅವಧಿಯಲ್ಲಿ ಜಾರಿಯಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದರೆ, ತಮ್ಮ ಒಪ್ಪಿಗೆ ಪಡೆದೆ ಅಧಿಕಾರಿಗಳು ಮುಂದುವರೆಯಬೇಕು ಎಂದು ತಾಪಂ, ಜಿಪಂ, ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಿರುವುದು ಸರಿಯಲ್ಲ. ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಹರಿಸಿದರೆ ತಾವು ಬೆಂಬಲಿಸುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಲಿಂಗಪ್ಪ ಉತ್ತರಿಸಿದರು.
ಮೊದಲು ಶುದ್ಧ ನೀರು ಕೊಡಿ: ನಗರಸಭೆ ಮಾಜಿ ಉಪಾಧ್ಯಕ್ಷ ಕೆ. ಜಿಲಾನಿ ಪಾಷಾ ಮಾತನಾಡಿ, ಬಾದರ್ಲಿಯವರು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ರಾಜಕೀಯದಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಎಲ್ಲಾ ವಾರ್ಡ್ಗಳ ಮಾಹಿತಿಗಳು ಅವರಿಗೆ ಸಂಪೂರ್ಣ ತಿಳಿದಿವೆ. ಆದರೆ ಏಕೋ ವಾರ್ಡ್ಗಳಿಗೆ ಭೇಟಿ ನೀಡಿ ಜನರ ಕಷ್ಟ-ಸುಖಗಳನ್ನು ಕೇಳಲು ಹೋಗುತ್ತಿದ್ದಾರೆ. ಮೊದಲು ಶುದ್ಧ ಕುಡಿಯುವ ನೀರನ್ನು ಕೊಡಲಿ. ನಾಡಗೌಡರ ಮೇಲೆ ವಿನಾ-ಕಾರಣ ದ್ವೇಷದ ರಾಜಕಾರಣ ಮಾಡದಿರಲಿ. ಈಗಲಾದರೂ ದೆವ್ವದ ಮನೆಯಂತಿರುವ ಸರ್ಕ್ಯೂಟ್ ಹೌಸ್ಗೆ ಮುಕ್ತಿ ನೀಡಲಿ. ಬಸ್ ನಿಲ್ದಾಣವನ್ನು ಉದ್ಘಾಟಿಸಲಿ. ಜೆಡಿಎಸ್ ಕಾರ್ಯಕರ್ತ ಸಲೀಂ ಎಂಬುವವರ ಮೇಲೆ ಸಂಬಂಧವಿಲ್ಲದ ಮೈಬೂಬಿಯಾ ಕಾಲೋನಿಯ ನಾಗರಿಕರ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೂರು ಕೊಡದಂತೆ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ಶರಣಬಸವ ನಟೇಕಲ್, ಜೆಡಿಎಸ್ ಮುಖಂಡರಾದ ಬಿ. ವೆಂಕೋಬ, ಪಾಲಾಕ್ಷಗೌಡ, ಧರ್ಮನ ಗೌಡ, ದಾಸರಿ ಸತ್ಯನಾರಾಯಣ, ಜಹೀರುಲ್ಲಾ ಹಸನ್, ವೆಂಕಟೇಶ ನಂಜಲದಿನ್ನಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

