ಕಾಲುವೆಗೆ ನೀರು ಭರವಸೆ: ರೈತರ ಉಪವಾಸ ಅಂತ್ಯ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮಾ.2
ರಾಜ್ಯ ಸರ್ಕಾರದ ಸಂಪುಟ ಸಮಿತಿಯ ತೀರ್ಮಾನದಂತೆ ಯಾವುದೇ ಜಲಾಶಯದಿಂದ ನೀರು ಹರಿಸಕೂಡದು ಎಂಬ ಸುತ್ತೋಲೆ ಹೊರಡಿಸಿದ್ದರೂ, ರೈತರ ಹಿತಾಸಕ್ತಿ ಅರಿತು ನಾರಾಯಣಪುರ ಬಲದಂಡೆ ಕಾಲುವೆಗೆ ಬೆಳಗ್ಗೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರು ಭರವಸೆ ನೀಡಿದ್ದಾರೆ. ರೈತರು ಅಮರಣಾಂತ ಉಪವಾಸ ಕೈಬಿಡುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಮನವಿ ಮಾಡಿದರು.
ತಾಲೂಕಿನ ಜಾವೂರ್ ಕ್ರಾಸ್ನಲ್ಲಿ (ನಾರಾಯಣಪುರ ಜಲಾಶಯದ ಪ್ರವೇಶ ದ್ವಾರದ ಹತ್ತಿರ) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ಬಂಜಾರ ಸಂಘದಿಂದ ಶನಿವಾರದಿಂದ ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕರಾದ ಶಿವನಗೌಡ ನಾಯಕ, ರಾಜುಗೌಡ ನಾಯಕ ಹಾಗೂ ಮಾನಪ್ಪ ವಜ್ಜಲ್ ಭೇಟಿ ನೀಡಿ ರೈತರ ಜೊತೆ ಚರ್ಚಿಸಿದರು.
ಬೆಳೆ ಮನವರಿಕೆ: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಮಾತನಾಡಿ, ಕಾಲುವೆಗೆ ನೀರು ಸ್ಥಗಿತಗೊಳಿಸಿದ್ದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗುವ ಸಾಧ್ಯತೆ ಕುರಿತು ಕಳೆದ ಒಂದು ವಾರದಿಂದ ದೂರವಾಣಿ ಮೂಲಕ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರ ಗಮನಕ್ಕೆ ತರಲಾಗಿತ್ತು. ಆದರೆ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಕುಡಿಯುವ ನೀರಿಗೆ ಹೊರತು ಪಡಿಸಿ ಹೆಚ್ಚಿನ ನೀರು ಹರಿಸಲು ಸಾಧ್ಯವಿಲ್ಲ ಮತ್ತು ಯಾವುದೆ ಜಲಾಶಯದಿಂದ ಕಾಲುವೆಗೆ ನೀರು ಹರಿಸದಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಯಿತು.
ಭರವಸೆ: ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಮತ್ತು ಸುರಪುರ ಶಾಸಕ ರಾಜುಗೌಡ ನಾಯಕ ಮಾತನಾಡಿ, ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ನೀರು ಸ್ಥಗಿತಗೊಳಿಸಿದ್ದರಿಂದ ರೈತರು ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿ ಅರಿತು ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಿರ್ಧರಿಸಿ ನಾವುಗಳು ಬೆಂಗಳೂರಿಗೆ ತೆರಳಿದೆವು. ಅಕಸ್ಮಾತ್ ಸರ್ಕಾರ ನೀರು ಬಿಡಲು ಒಪ್ಪದಿದ್ದರೆ ರಾಜೀನಾಮೆ ನೀಡಿ ರಾಜ್ಯಪಾಲರನ್ನು ಭೇಟಿ ಮಾಡಿ ಅವರ ಮೂಲಕ ನೀರು ಬಿಡುಗಡೆಗೊಳಿಸಲು ನಿರ್ಧರಿಸಿದ್ದೆವು. ಆದರೆ ಸರ್ಕಾರ ತಮ್ಮ ಮನವಿಗೆ ಸ್ಪಂದನೆ ನೀಡಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಗಮನದಲ್ಲಿಟ್ಟುಕೊಂಡು ಕಾಲುವೆಗೆ ನೀರು ಹರಿಸಲಾಗುವುದಾಗಿ ಸರ್ಕಾರ ಭರವಸೆ ನೀಡಿದೆ.
ಸದ್ಬಳಕೆ ಅಗತ್ಯ: ಅಲ್ಲದೆ ನೀರಾವರಿ ಸಲಹಾ ಸಮಿತಿ ಸಭೆ ಅಕ್ಟೋಬರ್ನಲ್ಲಿ ನಡೆಸಬೇಕು ಮತ್ತು ಸಮಿತಿ ಸಭೆಗೆ ಈ ಭಾಗದ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರನ್ನು ಆಹ್ವಾನಿಸಿ ಅವರಿಂದ ಸಲಹೆ ಸೂಚನೆ ಪಡೆದು ನೀರು ಸ್ಥಗಿತಗೊಳಿಸುವ ಕುರಿತು ದಿನಾಂಕ ನಿಗದಿಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ರೈತರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಬೇಕು. ನಾಲೆಗೆ ನೀರು ಬಿಡುಗಡೆ ಮಾಡಿದ ನಂತರ ರೈತರು ಬರುವ ನೀರನ್ನು ಅನಗತ್ಯ ಪೋಲು ಮಾಡದೆ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಶಾಸಕರು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸುವ ಮುನ್ನ ಉಪವಾಸ ನಿರತ ಕರ್ನಾಟಕ ರಾಜ್ಯ ರೈ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಬಂಜಾರ ಸಮಾಜದ ಮುಖಂಡ ಪಾಂಡುರಂಗ ಪಮ್ಮಾರ ಮತ್ತು ರೈತ ಮುಖಂಡ ಸಂಗಣ್ಣ ಶನಿವಾರದಿಂದ ಉಪವಾಸ ನಡೆಸಿದ ಪ್ರಯುಕ್ತ ಅಸ್ವಸ್ಥಗೊಂಡರು. ಸ್ಥಳಕ್ಕೆ ಧಾವಿಸಿದ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಸೂಕ್ತ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ನಂತರ ಆಗಮಿಸಿದ ಶಾಸಕರು ಕಾಲುವೆಗೆ ನೀರು ಹರಿಸುವ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿ ಮುಖಂಡರಿಗೆ ಎಳೆನೀರು ಕುಡಿಸುವ ಮೂಲಕ ಉಪವಾಸ ಅಂತ್ಯಗೊಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ, ಬಿಎಸ್ಆರ್ ಕಾಂಗ್ರೆಸ್ ಮುಖಂಡ ಸಿದ್ದುಬಂಡಿ, ಮುಖಂಡರಾದ ಜೀವಲಪ್ಪ ನಾಯಕ, ಬಸನಗೌಡ ಬಲ್ಲಟಗಿ, ವೆಂಕಟರಾವ್, ಅಮರೇಶ ಆಲ್ದಾಳ, ಕುಪ್ಪಣ್ಣ ಗೋನವಾಟ್ಲ, ನರಸಿಂಹರಾವ್, ಲಾಲಪ್ಪ ರಾಠೋಡ, ದೊಡ್ಡಬಸಪ್ಪ ಅಂಗಡಿ, ಹುಲ್ಲಪ್ಪ ಕರಕೂರ, ಖಾಜಾವಲಿ, ಹನುಮಂತ ವಂದಲಿ, ಲಕ್ಷ್ಮಣ, ಶಂಕ್ರಪ್ಪ ನವಲಿ, ಹರಿಶ್ಚಂದ್ರ ಚೌಹಾಣ, ಗ್ಯಾನಪ್ಪ ಗುಡಿಹಾಳ, ಹೊಳಿಯಪ್ಪ ಕನ್ನಾಪೂರಹಟ್ಟಿ, ಬೋಧುನಾಯಕ, ವರ್ತಕರಾದ ಶಂಕರಗೌಡ ಅಮರಾವತಿ, ಶಂಭುಲಿಂಗಪ್ಪ ಫೂಲಬಾವಿ, ಮಹಾಂತೇಶ, ನಾಗರಾಜ ಸೇರಿದಂತೆ ನೂರಾರು ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

