ರಾಯಚೂರು

ಶಾಂತಿಯುತ ಮತದಾನಕ್ಕೆ ಸಿದ್ಧತೆ: ಐಜಿಪಿ

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮಾ.6
ಈಶಾನ್ಯ ವಲಯ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತವಾಗಿ ನಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಈಶಾನ್ಯ ವಲಯ ಆರಕ್ಷಕ ಮಹಾನಿರೀಕ್ಷಕ (ಐಜಿಪಿ) ಮಹ್ಮದ್ ವಜೀರ ಅಹ್ಮದ್ ತಿಳಿಸಿದರು.
ನೇಮಕ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆ ಅಂಗವಾಗಿ ಈಶಾನ್ಯ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡ ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ ಹೆಚ್ಚುವರಿ ಕೆಎಸ್‌ಆರ್‌ಪಿ ತುಕಡಿ ನೇಮಕ ಮಾಡಲಾಗಿದೆ. ಬೀದರ್ ಜಿಲ್ಲೆಗೆ 3, ಗುಲ್ಬರ್ಗ 5, ರಾಯಚೂರು 4, ಯಾದಗಿರಿ 2, ಕೊಪ್ಪಳ 3 ಸೇರಿದಂತೆ ಒಟ್ಟು 17 ಕೆಎಸ್‌ಆರ್‌ಪಿ ತುಕಡಿ ಚುನಾವಣೆಗೆ ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ ಎಂದರು.
ತೀವ್ರ ನಿಗಾ: ಈಗಾಗಲೇ ಕೊಪ್ಪಳ ಜಿಲ್ಲೆಯ ಚುನಾವಣೆಗೆ ಪೊಲೀಸ್ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ ಬಂದಿದ್ದು, ರಾಯಚೂರು ಜಿಲ್ಲೆಯ ರಾಯಚೂರು, ಮಾನವಿ, ದೇವದುರ್ಗ, ಲಿಂಗಸ್ಗೂರು ಹಾಗೂ ಸಿಂಧನೂರು ತಾಲೂಕುಗಳಲ್ಲಿ ಚುನಾವಣೆ ಕರ್ತವ್ಯಕ್ಕೆ ನೇಮಕ ಮಾಡಿದ ಪೊಲೀಸ್ ವ್ಯವಸ್ಥೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಎಸ್ಪಿ ಅವರಿಗೆ ಸೂಚನೆ ನೀಡಲಾಗಿದ್ದು, ಅದರಲ್ಲೂ ಸಿಂಧನೂರು ತಾಲೂಕಿನಲ್ಲಿ ಎಸ್ಪಿ ಅವರೆ ಖುದ್ದಾಗಿ ಭೇಟಿ ನೀಡಿ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಹೈದ್ರಾಬಾದ್ ನಗರದಲ್ಲಿ ಜರುಗಿದ ಸ್ಫೋಟದಿಂದ ಈಶಾನ್ಯ ವಲಯದ ಜಿಲ್ಲೆಗಳಲ್ಲಿ ತೀವ್ರ ಎಚ್ಚಿರಿಕೆ ಕ್ರಮ ಕೈಗೊಳ್ಳಲಾಗಿದ್ದು, ಹೈದ್ರಾಬಾದ್ ನಗರದಿಂದ ಕರ್ನಾಟಕ ರಾಜ್ಯದ ಈಶಾನ್ಯ ವಲಯದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ (ಹೆದ್ದಾರಿ) ರಸ್ತೆಗಳಲ್ಲಿ ಚೆಕ್ ಪೋಟ್ಸ್ ತೆರೆಯಲಾಗಿದೆ. ಕೆಲ ಮುಖ್ಯ ರಸ್ತೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ.
ಅಲ್ಲದೆ ಗುಪ್ತಚರ ಮತ್ತು ತನಿಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದ್ದು, ಬೈಕ್ ಪಾರ್ಕ್, ಸೈಕಲ್ ಪಾರ್ಕ್ ಮತ್ತು ಜನನಿಬಿಡ ಪ್ರದೇಶದಲ್ಲಿ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದ ಅವರು, ಈ ಭಾಗದ ಜಲಾಶಯಗಳಿಗೆ ಸೂಕ್ತ ಭದ್ರತೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸೂರ್ಯವಂಶಿ, ಸಿಪಿಐ ಪಂಚಾಕ್ಷರಯ್ಯ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.