ಕುಡಿವ ನೀರಿನ ಸಮಸ್ಯೆ: ಡಿಸಿ ಬಳಿಗೆ ನಿಯೋಗ
ಕನ್ನಡಪ್ರಭ ವಾರ್ತೆ,ಸಿಂಧನೂರು,ಮಾ.15
ನಗರಕ್ಕೆ ಎದುರಾಗಬಹುದಾಗ ಕುಡಿವ ನೀರಿನ ಸಮಸ್ಯೆ ನಿವಾರಣೆಗಾಗಿ ತುರ್ವಿಹಾಳ ಬಳಿ ತಾತ್ಕಾಲಿಕ ಕೆರೆ ನಿರ್ಮಾಣಕ್ಕೆ 30 ಲಕ್ಷ ಬಿಡುಗಡೆ ಮಾಡಲು ಆಗ್ರಹಿಸಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಗರಸಭೆಯ ನೂತನ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿತು.
ನಗರಸಭೆ ಸದಸ್ಯರಾದ ಪ್ರಭುರಾಜ, ಜಾಫರ್ ಜಹಗೀರದಾರ, ವೆಂಕಟರಾವ್ ಬಂಡಿ ವಕೀಲ, ನಬಿಸಾಬ, ಶರಣಯ್ಯ ವಕ್ರಾಣಿ ಮತ್ತಿತರರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯ ಗಮನ ಸೆಳೆದರು.
ಈಗಾಗಲೇ ದೊಡ್ಡಕೆರೆಗೆ 88 ಎಂಜಿ, ಸಣ್ಣಕೆರೆಗೆ 17 ಎಂಜಿ, ಅತಿ ಸಣ್ಣ ಕೆರೆಗೆ 5 ಎಂಜಿ ಸೇರಿದಂತೆ ಒಟ್ಟು 110 ಎಂಜಿ ನೀರಿನ ಸಾಮರ್ಥ್ಯದ ನೀರನ್ನು ಸಂಗ್ರಹಿಸಲಾಗಿದೆ. ಬಿಸಿಲಿನ ತಾಪಕ್ಕೆ ಶೇ.10ರಷ್ಟು ಆವಿಯಾಗಿ ಹೋಗುವುದರಿಂದ 99 ಎಂಜಿ ನೀರು ಮಾತ್ರ ಬೇಸಿಗೆ ದಿನಗಳಲ್ಲಿ ಲಭ್ಯವಾಗುತ್ತದೆ.
2 ತಾತ್ಕಾಲಿಕ ಕೆರೆಗಳ ನಿರ್ಮಾಣ: 2012- 13ನೇ ಸಾಲಿಗಾಗಿ ನಗರ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನಗರಸಭೆಗೆ ಬಿಡುಗಡೆಯಾದ 30 ಲಕ್ಷ ಅನುದಾನ ಪೈಕಿ 10 ಲಕ್ಷದಲ್ಲಿ ತುರ್ವಿಹಾಳ ಜಾಕವೆಲ್ ಬಳಿಯ ತಾತ್ಕಾಲಿಕ ಕುಡಿವ ನೀರಿನ 2 ಕೆರೆಗಳನ್ನು ಇಲಾಖೆ ವತಿಯಿಂದ ಉತ್ತಮಪಡಿಸಿ ಕುಡಿವ ನೀರನ್ನು ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.
ಸಂಗ್ರಹಿಸಲ್ಪಟ್ಟ ನೀರಿನ ಸಾಮರ್ಥ್ಯ ತಾತ್ಕಾಲಿಕ ಕೆರೆಗೆ 8 ಎಂಜಿ, ಮತ್ತೊಂದು ತಾತ್ಕಾಲಿಕ ಕೆರೆಗೆ 8 ಎಂಜಿ ಒಟ್ಟು 16 ಎಂಜಿ ನೀರು ಲಭ್ಯವಾಗುತ್ತದೆ. ಆದರೆ ಒಟ್ಟು ಲಭ್ಯವಾಗುವ ನೀರಿನ ಸಂಗ್ರಹ 115 ಎಂಜಿ ಇರುತ್ತದೆ. ಕುಡಿವ ನೀರು ಸರಬರಾಜಿಗೆ ನಗರದಲ್ಲಿ ಓವರ್ಹೆಡ್ ಟ್ಯಾಂಕ್ಗಳಿದ್ದು ಎಪಿಎಂಸಿ ಟ್ಯಾಂಕ್ಗೆ 2 ಲಕ್ಷ ಗ್ಯಾಲನ್, ಮಹಿಬೂಬ ಕಾಲೋನಿ ಟ್ಯಾಂಕಿಗೆ 3 ಲಕ್ಷ ಗ್ಯಾಲನ್ ಮತ್ತು ಐಬಿ ಟ್ಯಾಂಕ್ ನಿರ್ಮಾಣಕ್ಕೆ 0.50 ಲಕ್ಷ ಗ್ಯಾಲನ್ ಒಟ್ಟು 5.50 ಲಕ್ಷ ಗ್ಯಾಲನ್ ಸಾಮರ್ಥ್ಯ ಇರುತ್ತದೆ.
ಓವರ್ಹೆಡ್ ಟ್ಯಾಂಕ್ ಮೂಲಕ ನೀರು: ನಗರದಲ್ಲಿ 76 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಪ್ರಸ್ತುತ ಇರುವ ಓವರ್ಹೆಡ್ ಟ್ಯಾಂಕ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರಕ್ಕೆ ಪೂರ್ಣ ಪ್ರಮಾಣದ ನೀರು ಸರಬರಾಜು ಮಾಡಬೇಕಾದರೆ ಮೂರು ದಿನ ಬೇಕಾಗುತ್ತದೆ. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಲಭ್ಯವಿದ್ದಾಗಲೂ ವಾರಕ್ಕೆರಡು ಬಾರಿ ಸರಬರಾಜು ಮಾಡಲಾಗುತ್ತಿತ್ತು ಎಂದರು.
ಇದೇ ರೀತಿ ನಿರ್ವಹಣೆ ಮಾಡಿದರೆ ಎರಡು ತಿಂಗಳು ಮಾತ್ರ ನಗರಕ್ಕೆ ನೀರು ಕೊಡಬಹುದಾಗಿದೆ. ಇನ್ನು ಒಂದೂವರೆ ತಿಂಗಳು ಆಗುವ ನೀರಿನ ತೊಂದರೆ ತಪ್ಪಿಸಲು ಬೇಸಿಗೆ ಮಧ್ಯದ ದಿನದಲ್ಲಿ ಎಡದಂಡೆ ಕಾಲುವೆಗೆ ನೀರನ್ನು ಹರಿಸುವಂತೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತಿತರರು ಮನವಿ ಮಾಡಿದರು.
ಬೇಸಿಗೆ ದಿನಗಳಲ್ಲಿ ಸಮರ್ಪಕ ನೀರು ಸರಬರಾಜಿಗೆ ಮುಂಜಾಗ್ರತಾ ಕ್ರಮವಾಗಿ ತುರ್ವಿಹಾಳ ಬಳಿ ನಗರಸಭೆಯ 4 ಎಕರೆ ಜಮೀನಿನಲ್ಲಿ 20 ಎಂ.ಜಿ.ಯಷ್ಟು ನೀರನ್ನು ಸಂಗ್ರಹಿಸಲು ತಾತ್ಕಾಲಿಕ ಕೆರೆ ನಿರ್ಮಾಣಕ್ಕೆ ತಕ್ಷಣ ನೀರು ಅಭಾವ ನಿಧಿಯಿಂದ ನಗರಸಭೆಗೆ 30 ಲಕ್ಷ ಬಿಡುಗಡೆ ಮಾಡುವಂತೆ ನಗರಸಭೆ ಪೌರಾಯುಕ್ತ ನಾಸೀರ್ ಅಲಿ ಡಿಸಿ.ಗೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

