ರಾಯಚೂರು

ಆಧ್ಯಾತ್ಮ ಗ್ರಂಥ ಅಧ್ಯಯನದಿಂದ ಸಮಸ್ಯೆಗೆ ಪರಿಹಾರ

Published On :

ರಾಯಚೂರು: ಆಧ್ಯಾತ್ಮಿಕ ಗ್ರಂಥಗಳ ನಿರಂತರ ಅಧ್ಯಯನದಿಂದ ಮಾನವನ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಅಜ್ಞಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಗ್ರಂಥಗಳು ಪೂರಕವಾಗಿವೆ ಎಂದು ಉಡುಪಿ ಪೇಜಾವರದ ಮಠಾಧೀಶರಾದ ವಿಶ್ವೇಶತೀರ್ಥರು ನುಡಿದರು.
ಮಂತ್ರಾಲಯದಲ್ಲಿ ಶನಿವಾರ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದ ಮೊದಲ ದಿನದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಜ್ಞಾನ ಎಂಬುದು ಕತ್ತಲೆಯಾಗಿದ್ದು, ಜ್ಞಾನವು ಬೆಳಕಿದ್ದಂತೆ. ಈ ಜ್ಞಾನದಿಂದ ಸರ್ವ ಪ್ರಗತಿ ಎಂಬುದನ್ನು ಶ್ರೀಸುಧಾ ಗ್ರಂಥದಲ್ಲಿ ಆಚಾರ್ಯ ಮಧ್ವರು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಎಲ್ಲರಿಗೆ ಆಧ್ಯಾತ್ಮಿಕ ಗ್ರಂಥಗಳ ಸಾರ ಅರುಹಿ: ಅಜ್ಞಾನದಿಂದ ಜಗತ್ತು ಇಂದು ದಾರಿ ತಪ್ಪಿದ್ದು, ಜಗತ್ತನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಆಧಾತ್ಮಿಕ ಗ್ರಂಥಗಳ ಅಧ್ಯಯನ ಮತ್ತು ಗ್ರಂಥಗಳ ಸಾರವನ್ನು ಎಲ್ಲರಿಗೆ ತಿಳಿಸಿಕೊಡುವ ಕಾರ್ಯವನ್ನು ವಿದ್ವಾಂಸರು ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮಂತ್ರಾಲಯ ಮಠವು ಮೊದಲಿನಿಂದಲೂ ಶಿಕ್ಷಣ ನೀಡಿಕೆಗೆ ಹೆಚ್ಚಿನ ಮಹತ್ವ ನೀಡಿದೆ. ಆ ಕಾರಣಕ್ಕಾಗಿಯೇ ವಿದ್ಯಾಮಠ ಎಂದೂ ಪ್ರಸಿದ್ಧಿಯಾಗಿದೆ. ಸದ್ಯ ಸುಧಾ ಮಂಗಳ ಮಹೋತ್ಸವದ ಆಯೋಜನೆ ಮೂಲಕ ವಿದ್ಯಾಮಠದ ಹೆಸರು ಸಾಬೀತಾಗಿದೆ. ಅದರಲ್ಲೂ ನವರತ್ನ ಖಚಿತ ರಥವು ಸುಧಾ ಮಂಗಳ ಮಹೋತ್ಸವದ ಸಂದರ್ಭದಲ್ಲಿಯೇ ಶ್ರೀರಾಯರಿಗೆ ಅರ್ಪಣೆಯಾಗಿದ್ದು ಮೆರುಗು ಹೆಚ್ಚಿಸಿದೆ ಎಂದು ತಿಳಿಸಿದರು.
ಮಂತ್ರಾಲಯ ಮಠ ಇನ್ನೂ ಪ್ರಗತಿ ಕಾಣಲಿ: ಮಂತ್ರಾಲಯ ಮಠದ ಶ್ರೀಸುಯತೀಂದ್ರತೀರ್ಥರ ಕಾಲದಲ್ಲಿ ಶ್ರೀಮಠ ಹಾಗೂ ಮಂತ್ರಾಲಯ ಸುಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಕಂಡಿದೆ. ಬಾಹ್ಯ ಮತ್ತು ಆಂತರಿಕವಾಗಿಯೂ ಶ್ರೀಮಠ ಶ್ರೀಮಂತಿಕೆಯನ್ನು ಕಂಡಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಗತಿ ಕಾಣಲೆಂದು ಹಾರೈಸಿದರು.
ಮಂತ್ರಾಲಯದ ಶ್ರೀರಾಯರಿಗೆ ವೈಭವದಿಂದ ಪೂಜಿಸುವುದು ಎಂದರೆ ಆ ಮೂಲಕ ಅವರ ಭಕ್ತರಿಗೆ ಮುಂದಿನ ದಿನಗಳಲ್ಲಿ ಸುಖ- ಶಾಂತಿ ಮತ್ತು ನೆಮ್ಮದಿ ದೊರೆತಂತೆಯೇ ಸರಿ ಎಂದ ಅವರು, ಲೋಕ ಕಲ್ಯಾಣಕ್ಕಾಗಿಯಾದರೂ ಶ್ರೀರಾಯರನ್ನು ವೈಭವದಿಂದ ಭಜಿಸಿ ಪೂಜಿಸಬೇಕೆಂದು ಮನವಿ ಮಾಡಿದರು.
ಗ್ರಂಥಗಳ ಅಧ್ಯಯನ ಮಾಡದಿದ್ರೆ ಬದುಕು ವ್ಯರ್ಥ: ಫಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಅನುಗ್ರಹ ಸಂದೇಶ ನೀಡಿ, ಜ್ಞಾನದ ಪ್ರಸಾರ ಕಾರ್ಯದಿಂದ ಸಕಲರಿಗೆ ಜ್ಞಾನ ಪ್ರಾಪ್ತಿಯಾಗಿ ಸುಖ, ನೆಮ್ಮದಿ ದೊರೆಯಲಿದೆ. ಕಲಿತ ವಿದ್ಯೆಯನ್ನು ಪಾಠ ಪ್ರವಚನಗಳ ಮೂಲಕ ಎಲ್ಲರಿಗೂ ತಿಳಿಸಿಕೊಡುವ ಕಾರ್ಯವನ್ನು ಸುಧಾ ಪಂಡಿತರು ಮಾಡಬೇಕಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಆಧುನಿಕ ವಿಜ್ಞಾನಕ್ಕಿಂತ ಆಧ್ಯಾತ್ಮಿಕ ಗ್ರಂಥ ವಿಜ್ಞಾನವು ಸರ್ವಶ್ರೇಷ್ಠವಾಗಿದೆ. ಗ್ರಂಥಗಳ ಚಿಂತನ, ಮಂಥನ ಕಾರ್ಯ ನಿರಂತರವಾಗಿ ಸಾಗಬೇಕು. ಗ್ರಂಥಗಳ ಅಧ್ಯಯನ ಕೈಗೊಳ್ಳದಿದ್ದರೆ ಬದುಕು ವ್ಯರ್ಥ ಎಂದು ಹೇಳಿದರು.
ಪೇಜಾವರ ಮಠದ ಕಿರಿಯಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು, ವಿದ್ಯಾಪೀಠವು ಜ್ಞಾನಾರ್ಜನೆಗೆ ಪೂರಕ ಪರಿಸರ ಹೊಂದಿದ್ದು, ನೂರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಗ್ರಂಥಗಳ ಬಗ್ಗೆ ಬೋಧಿಸುವ ಮೂಲಕ ಜ್ಞಾನ ಪ್ರಸಾರ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಕಾಣಿಕೆ: ಈ ಸಂದರ್ಭದಲ್ಲಿ ಮಂತ್ರಾಲಯ ಶ್ರೀಮಠದಿಂದ ಸುಧಾಮಂಗಳ ಪೂರೈಸಿದ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ಕಾಣಿಕೆ ನೀಡಲಾಯಿತು. ಶ್ರೀಸುಧಾ ಮಂಗಳ ಮಹೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ರಾಜಾ ಗಿರಿಯಾಚಾರ್ಯ ಸೇರಿದಂತೆ ಪಂಡಿತರು ವಿದ್ವಾಂಸರು ಪಾಲ್ಗೊಂಡಿದ್ದರು.
ಈ ವೇಳೆ ಶ್ರೀಮಠದ ಪರವಾಗಿ ಪೇಜಾವರ ಶ್ರೀಗಳನ್ನು ಸುಧಾ ಮಂಗಳ ಪೂರೈಸಿದ ಕರಣಂ ವೆಂಕಟೇಶಾಚಾರ್ಯ ಗೌರವಿಸಿದರು.
ಅದೇ ರೀತಿ ಇನ್ನುಳಿದ ಮಠಾಧೀಶರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.
ಶ್ರೀಮನ್ನ್ಯಾಯ ಸುಧಾ ಮಂಗಳಮಹೋತ್ಸವದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ಶ್ರೀಸುಯತೀಂದ್ರತೀರ್ಥರು, ಮುಳಬಾಗಿಲು ಮಠದ ಶ್ರೀಕೇಶವನಿಧಿ ತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ರಾಮೋಹಳ್ಳಿಯ ಶ್ರೀವಿಶ್ವಭೂಷಣ ತೀರ್ಥರು ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿದ್ದರು.
ಶ್ರೀಮಠದ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ, ರಾಜಾ ಪವಮಾನಾಚಾರ್ಯ, ವಿ.ಆರ್. ಪಂಚಮುಖಿ, ಆಡಳಿತಾಧಿಕಾರಿ ಆರ್.ಪ್ರಭಾಕರರಾವ್, ಶ್ರೀಪತಿ ಸೇರಿದಂತೆ ಅನೇಕ ಹಿರಿಯರು ಹಾಗೂ ಪ್ರಮುಖರು ಭಾಗವಹಿಸಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಜನತೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.