ರಾಯಚೂರು

ಕುಡಿವ ನೀರಿನ ಸಮಸ್ಯೆ: ಶಾಸಕ ಹಂಪಯ್ಯ ಧರಣಿ

Published On :

ಕನ್ನಡಪ್ರಭ ವಾರ್ತೆ, ರಾಯಚೂರು:, ಮಾ.18
ಮಾನವಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಉಪಕಾಲುವೆಗಳ ಮೂಲಕ ನೀರು ಹರಿಸುವಂತೆ ಆಗ್ರಹಿಸಿ ಮಾನವಿಯಲ್ಲಿ ಸೋಮವಾರ ಶಾಸಕ ಹಂಪಯ್ಯ ನಾಯಕ ಉಪವಾಸ ಸತ್ಯಾಗ್ರಹ ನಡೆಸಿದರು.
ಮಾನವಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸತ್ಯಾಗ್ರಹ ನಡೆಸಿದ ಶಾಸಕರು, ಕಳೆದ ಫೆಬ್ರವರಿಯಿಂದ ತಾಲೂಕಿನ ಎಲ್ಲ ಉಪ ಕಾಲುವೆಗಳಿಗೆ ನೀರು ಬಾರದಿರುವುದರಿಂದ ತಾಲೂಕಿನ ನೀರಮಾನವಿ, ಕಲ್ಲೂರು, ಹಿರೇಕೊಟ್ನೆಕಲ್, ಸಿರವಾರ, ಕವಿತಾಳ, ಬಲ್ಲಟಗಿ ಸೇರಿ ಅನೇಕ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳ ಬಗ್ಗೆಯೇ ಅನುಮಾನ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಜನತೆ ಜನಪ್ರತಿನಿಧಿಗಳ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವಂಥ ಪರಿಸ್ಥಿತಿಯಿದೆ ಎಂದು ಸ್ಥಳಕ್ಕೆ ಆಗಮಿಸಿದ ನೀರಾವರಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಾಲುವೆಗೆ ಹರಿಸಿದರೆ ಕುಡಿಯುವ ನೀರಿಗೆ ಬಳಕೆ ಮಾಡುವ ನೀರನ್ನು ಕೆರೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ಹಾಗೆಯೇ ರೈತರು ಬೆಳೆದ ಬೆಳೆಗಳಿಗೆ ಅಲ್ಪ ನೀರು ದೊರೆಯಲಿದೆ. ಈಗಾಗಲೇ ಭೀಕರ ಬೇಸಿಗೆ ಆರಂಭಗೊಂಡಿದ್ದು, ತುಂಗಭದ್ರಾ ನದಿ ದಂಡೆಯ ಗ್ರಾಮಗಳಲ್ಲಿ ನದಿ ಬತ್ತಿರುವುದರಿಂದ ನೀರಿನ ತೀವ್ರ ಅಭಾವ ತಲೆದೋರಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬತ್ತಿದ ಕೊಳವೆಬಾವಿಗಳು: ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಿಂದ ನೀರು ದೊರೆಯುತ್ತಿಲ್ಲ. ಇದು ಗ್ರಾಮೀಣ ಪ್ರದೇಶದಲ್ಲಿ ನೀರಿನ ತೀವ್ರ ಸಮಸ್ಯೆ ಮೂಡಿಸಿದೆ. ಜಿಲ್ಲಾಧಿಕಾರಿಗಳು ಭರವಸೆಗಳನ್ನು ನೀಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಅವರಿಗೆ ಜನರ ತೊಂದರೆಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆರೋಪಿಸಿದರು.
ನೀರಿನ ದುರ್ಬಳಕೆ ತಡೆಯಿರಿ: ಕಾಲುವೆಯ ಮೇಲ್ಭಾಗದಲ್ಲಿ ನೀರು ಲಭ್ಯವಿರುವ ಸ್ಥಳದಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೆ ತರುವ ಮೂಲಕ ನೀರಿನ ದುರ್ಬಳಕೆ ತಡೆದು ಕಾಲುವೆಯ ಕೆಳಭಾಗಕ್ಕೆ ನೀರು ತರುವ ಪ್ರಯತ್ನ ಜಿಲ್ಲಾಡಳಿತ ಮಾಡುತ್ತಿಲ್ಲ. ಕಾಲುವೆಯ ನೀರಿಲ್ಲದ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೆ ತರುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ದೂರಿದರು.
ಶಾಸಕರ ಪಟ್ಟು: ಕಳೆದ ತಿಂಗಳಿಂದ ಮೈಲ್ 69ರಲ್ಲಿ ಸರಿಯಾಗಿ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮೈಲ್ 69ರಲ್ಲಿ 9.1 ಅಡಿ ನೀರಿರಬೇಕಿತ್ತು.
  ಆದರೆ ಅಲ್ಲಿ ಐದು ಅಡಿಗಿಂತ ಕಡಿಮೆ ನೀರಿದೆ. ಹೀಗಾದರೆ ಕಾಲುವೆಯ ಕೆಳಭಾಗದಲ್ಲಿರುವ ರೈತರು ಹಾಗೂ ಜನತೆಗೆ ನೀರು ತಲುಪುವುದಾದರೂ ಹೇಗೆ ಎಂದು ಪ್ರಶ್ನಿಸಿ, ಮಾನವಿ ತಾಲೂಕಿಗೆ ನೀರು ಹರಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಶಾಸಕರು ಪಟ್ಟು ಹಿಡಿದರು.
ಈ ವೇಳೆ ಸ್ಥಳಕ್ಕೆ ಧಾವಿಸಿದ ತುಂಗಭದ್ರಾ ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜುನ ಮುಂಗಿ, ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ 12 ಟಿಎಂಸಿಯಷ್ಟು ನೀರು ಕಡಿಮೆಯಿದೆ. ಹೀಗಾಗಿ ಕಾಲುವೆಗಳಿಗೆ ಹೆಚ್ಚಿನ ನೀರು ಹರಿಸುವುದು ಸಾಧ್ಯವಾಗುತ್ತಿಲ್ಲ ಎಂದು ಶಾಸಕರಿಗೆ ತಿಳಿಸಿದರು.
ಎಲ್ಲ ಉಪಕಾಲುವೆಗಳಿಗೆ ನೀರು ಹರಿಸಿ: ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಿಕೊಳ್ಳಲು 7 ದಿನಗಳವರೆಗೆ ಮೈಲ್ 69ರಲ್ಲಿ 6.5 ಅಡಿ ನೀರು ಕಾಯ್ದುಕೊಂಡು ತಾಲೂಕಿನ ಎಲ್ಲ ಉಪ ಕಾಲುವೆಗಳಿಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಸಿಇ ಭರವಸೆ ನೀಡಿದ ನಂತರ ಶಾಸಕ ಹಂಪಯ್ಯ ನಾಯಕ ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರೆಡ್ಡೆಪ್ಪಗೌಡ, ಅಯ್ಯನಗೌಡ, ಮುಖಂಡರಾದ ಗಫೂರ್ ಸಾಬ್, ಜಿಪಂ ಸದಸ್ಯರಾದ ಅಸ್ಲಂ ಪಾಷಾ, ಹನುಮೇಶ ಮದ್ಲಾಪುರು, ಚಂದ್ರಶೇಖರ ಕುರ್ಡಿ, ಬಿ.ಕೆ. ಅಮರೇಶಪ್ಪ, ಬಾಲಸ್ವಾಮಿ ಕೊಡ್ಲಿ, ತಿಪ್ಪಣ್ಣ ಬಾಗಲವಾಡ, ಶ್ರೀರಾಮುಲು ನೀರಮಾನ್ವಿ, ನಾಗರಾಜ ನಾಯಕ, ಸಿದ್ರಾಮಪ್ಪಗೌಡ ನುಗಡೋಣಿ, ಖಾಲಿದ್ ಖಾದ್ರಿ, ಮಹಾಂತೇಶ ಸ್ವಾಮಿ, ಅರಣಕುಮಾರ ಚಂದಾ, ಪುರಸಭೆ ಸದಸ್ಯೆ ಲಕ್ಷ್ಮೀದೇವಿ ನಾಯಕ, ಹುಸೇನ್ ಬೇಗ್, ಸಬ್ಜಲಿಸಾಬ್, ಯಲ್ಲಯ್ಯ ನಾಯಕ, ಸಾಬಿರ್ ಷಾಷಾ, ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ, ತಹಸೀಲ್ದಾರ್ ಗಂಗಪ್ಪ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.