ಶೇಂಗಾ ಬೆಲೆ ಕುಸಿತ ಉಡುಗಿದ ರೈತರ ಉತ್ಸಾಹ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.25
ತಾಲೂಕಿನಲ್ಲಿ ನೆರೆ, ಬರದಿಂದ ತತ್ತರಿಸಿದ ರೈತರು ಬೇಸಿಗೆ ಹಂಗಾಮಿನಲ್ಲಿ ಸಾಕಷ್ಟು ಖರ್ಚು ಮಾಡಿ ನೀರಿನ ಅಭಾವದ ಮಧ್ಯೆಯೂ ಶೇಂಗಾ ಬಿತ್ತನೆ ಮಾಡಿದ್ದು, ಆದರೆ ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಗೆ ಉತ್ತಮ ಬೆಲೆ ಸಿಗದೆ ರೈತರ ಉತ್ಸಾಹ ಕಳೆದುಕೊಂಡಿದ್ದಾರೆ.
ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ರಾಂಪೂರ ಏತನೀರಾವರಿ ವ್ಯಾಪ್ತಿಯಲ್ಲಿ ಮತ್ತು ಪಂಪ್ಸೆಟ್ ಮೂಲಕ ಬೇಸಿಗೆ ಹಂಗಾಮಿನಲ್ಲಿ ಬಹುತೇಕ ರೈತರು ಪ್ರತಿ ಕ್ವಿಂಟಲ್ಗೆ 10 ಸಾವಿರ ಕೊಟ್ಟು ಶೇಂಗಾ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು.
ಆದರೆ ಬಿತ್ತನೆ ಮಾಡಿ ಕಾಳು ಕಟ್ಟುವ ಸಮಯದಲ್ಲಿ ಬಲದಂಡೆ ಮತ್ತು ರಾಂಪೂರ ಕಾಲುವೆಗಳಿಗೆ ಫೆ. 20ರಿಂದ ನೀರು ಹರಿಸುವಿಕೆ ಸ್ಥಗಿತಗೊಳಿಸಲಾಯಿತು. ಇದರಿಂದ ಜಮೀನಿನಲ್ಲಿ ತೇವಾಂಶದ ಕೊರತೆ ಉಂಟಾಗಿ ಬೆಳೆ ಕೀಳಲು ತೀವ್ರ ತೊಂದರೆ ಅನುಭವಿಸುವಂತಾಯಿತು.
ನೀರಿಗಾಗಿ ಹೋರಾಟ: ಕಾಲುವೆಗಳಿಗೆ ಮಾ. 30ರ ವರೆಗೆ ನೀರು ಹರಿಸುವಂತೆ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ನಂತರ ರೈತ ಸಂಘದ ನೇತೃತ್ವದಲ್ಲಿ ಜಾವೂರ್ ಕ್ರಾಸ್ ಬಳಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಇದರಿಂದ ಎಚ್ಚೆತ್ತ ಶಾಸಕರು ಮುಖ್ಯಮಂತ್ರಿಗಳ ಬಳಿ ತೆರಳಿ ನಾಲ್ಕಾರು ದಿನಗಳ ಕಾಲ ಕಾಲುವೆಗೆ ನೀರು ಹರಿಸುವಲ್ಲಿ ಯಶಸ್ವಿಯಾದರು. ಆದರೆ ಕಾಲುವೆಗೆ ನೀರು ಹರಿಸಿದರೂ ಜಮೀನುಗಳಿಗೆ ಸಮರ್ಪಕವಾಗಿ ನೀರು ಸಿಗದೆ ಇರುವ ತೇವಾಂಶದಲ್ಲಿ ಶೇಂಗಾ ಬೆಳೆ ಕೀಳುವಲ್ಲಿ ನಿರತರಾದರು.
ರೈತರು ಅನುಭವಿಸಿದ ಇಷ್ಟೆಲ್ಲ ತೊಂದರೆಗಳ ಮಧ್ಯೆಯೂ ಬೆಳೆದ ಅಲ್ಪ ಶೇಂಗಾ ಬೆಳೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಂದರೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ನಿರಾಶೆಗೀಡು ಮಾಡಿತು.
ಖರೀದಿದಾರರ ಒಳಒಪ್ಪಂದ: ಕಳೆದ ಬಾರಿ ಪ್ರತಿ ಕ್ವಿಂ.ಗೆ 6ರಿಂದ 8 ಸಾವಿರ ಇದ್ದ ಶೇಂಗಾ ಪ್ರಸಕ್ತ ವರ್ಷ ಪ್ರತಿ ಕ್ವಿಂ.ಗೆ 4,200ರಿಂದ 4800ರವರಗೆ ಬೆಲೆ ನಿಗದಿಪಡಿಸಲಾಗಿದೆ. ಖರೀದಿದಾರರ ಒಳಒಪ್ಪಂದದಿಂದ ಶೇಂಗಾ ಬೆಳೆಗೆ ಪೈಪೋಟಿ ನಡೆಯದೆ ಖರೀದಿದಾರರು ಕೇಳಿದ ಬೆಲೆಗೆ ಮಾರಾಟ ಮಾಡಿ ಬರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಅಮೆರಿಕ, ಚೀನಾ, ಮಲೇಶಿಯಾ ಸೇರಿದಂತೆ ವಿದೇಶಗಳಿಗೆ ರಪ್ತು ಮಾಡುವುದನ್ನು ನಿಲ್ಲಿಸಿದ ಪ್ರಯುಕ್ತ ಶೇಂಗಾ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂಬುದು ದಲ್ಲಾಳಿ ಅಂಗಡಿಕಾರರ ಅನಿಸಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

