ಕನ್ನಡಪ್ರಭ ವಾರ್ತೆ ರಾಯಚೂರು ಮಾ.29
ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳ ಸರಮಾಲೆಯಿಂದ ರೋಸಿ ಹೋದ ಅನೇಕ ರೈತರು ವ್ಯವಸಾಯದಿಂದಲೇ ವಿಮುಖರಾಗಿದ್ದಾರೆ. ಅಲ್ಲದೆ ಕೈ ಸುಟ್ಟುಕೊಂಡು ಅನೇಕರು ಹಾನಿ ಅನುಭವಿಸಿದ್ದೂ ಇದೆ. ಆದರೆ ಇದಕ್ಕೆ ವಿಪರ್ಯಾಸ ಎನ್ನುವಂತೆ ಈ ಇಬ್ಬರು ಕೃಷಿಯ ಮೂಲಕ ಆರ್ಥಿಕ ಪ್ರಗತಿ ಕಂಡು ವಿಶೇಷ ಸಾಧನೆಗೈದಿದ್ದಾರೆ.
- ಹೌದು, ಕೊಪ್ಪಳ ಜಿಲ್ಲೆಯ ರೈತ ದೇವೇಂದ್ರಪ್ಪ ಬಳೂಟಗಿ ಹಾಗೂ ಗುಲ್ಬರ್ಗ ಜಿಲ್ಲೆಯ ಶರಣಬಸಪ್ಪ ಪೀರಪ್ಪ ಪಾಟೀಲ್ ಅವರ ಸಾಧನೆಗೀಗ ರಾಯಚೂರು ಕೃಷಿ ವಿಶ್ವವಿದ್ಯಾಲಯ ಕೊಡಮಾಡುವ ರೈತ ವಿಜ್ಞಾನಿಗಳು ಪುರಸ್ಕಾರ ಲಭಿಸಿದೆ.
ಲಭ್ಯವಿರುವ ಜಮೀನಿನಲ್ಲಿಯೇ ಬಂಗಾರ ಬೆಳೆಯುವಂಥ ಛಲ. ಕೃಷಿಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲವಿದ್ದೇ ಇದೆ ಎಂಬ ನಂಬಿಕೆ. ಪರಿಣಾಮ ಅನೇಕ ಕೃಷಿ ಉಪಕರಣಗಳ ಆವಿಷ್ಕಾರ ಮತ್ತು ಅಳವಡಿಕೆಯಿಂದಲೇ ಇವರು ಯಶಸ್ಸು ಕಂಡಿದ್ದಾರೆ.
ದೇವೇಂದ್ರಪ್ಪ ಬಳೂಟಗಿ
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ ಅವರದ್ದು ಒಟ್ಟು 150 ಎಕರೆ ಜಮೀನಿದೆ. ಕೊಳವೆಬಾವಿಗಳ ಮೂಲಕ ನೀರಾವರಿ ಮಾಡಿಕೊಂಡಿರುವ ಇವರು ತಮ್ಮ ಜಮೀನಿನಲ್ಲಿ ತೋಟಗಾರಿಕೆ ಮತ್ತು ಅರಣ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಯಶಸ್ಸು ಕಂಡಿದ್ದಾರೆ.
ಈ ರೈತ ತೋಟದಲ್ಲಿ 1,400 ಮಾವಿನ ಮರಗಳು, 2,300 ಸಪೋಟ ಗಿಡಗಳು, 400 ತೆಂಗಿನ ಮರಗಳು, 100 ಹುಣಸೆ ಮರಗಳು, 150 ನೇರಳೆ ಮರಗಳು, 100 ಅಂಜೂರ ಹಣ್ಣಿನ ಗಿಡಗಳು, 100 ಲಿಂಬೆ, 80 ಶ್ರೀಗಂಧದ ಮರಗಳನ್ನು ಬೆಳೆದಿದ್ದಾರೆ.
ಇದರ ಜತೆಗೆ ದೇವೇಂದ್ರಪ್ಪ ಅವರು 45 ಎಕರೆ ಪ್ರದೇಶದಲ್ಲಿ ದಾಳಿಂಬೆ, 13 ಎಕರೆ ಮೋಸಂಬಿ, 8 ಎಕರೆ ಕಿನೋ, 8 ಎಕರೆ ಪಪ್ಪಾಯಿ, 13 ಎಕರೆ ಕರಿಬೇವು ಸೇರಿದಂತೆ ತೊಗರಿ, ಜೋಳ ಮತ್ತಿತರೆ ಆಹಾರಧಾನ್ಯ ಬೆಳೆಯುತ್ತಿದ್ದಾರೆ. ಈ ಎಲ್ಲ ಬೆಳೆಗಳಿಗೆ ಅವರು ಅನುಸರಿಸಿದ್ದು, ಸಾವಯವ ಕೃಷಿ ಪದ್ಧತಿ.
ರೈತ ಸ್ನೇಹಿ ಈತ: ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣದ ಮೂಲಕ ನೀರಾವರಿ ವ್ಯವಸ್ಥೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಆದ್ಯತೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಗೆ ದಾಳಿಂಬೆ ಬೆಳೆಯನ್ನು ಪರಿಚಯಿಸಿದ ಖ್ಯಾತಿ ಇವರದ್ದು. ತಾವು ದಾಳಿಂಬೆ ಬೆಳೆ ಬೆಳೆದಿದ್ದಲ್ಲದೆ, ಇನ್ನುಳಿದ ರೈತರಿಗೆ ಈ ಬೆಳೆಯ ಕುರಿತು ಸಮಗ್ರ ಮಾಹಿತಿ ಒದಗಿಸುವ ಮೂಲಕ “ರೈತ ಸೇಹಿ ’ಯಾಗಿ ಕಾರ್ಯನಿರ್ವಹಿಸಿದ್ದರಿಂದ ಸದ್ಯ ಕೊಪ್ಪಳ ಜಿಲ್ಲೆಯಲ್ಲಿ 4,500 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಯುರೋಪ್, ಗಲ್ಫ್ ದೇಶಗಳಿಗೆ ದಾಳಿಂಬೆ ರಫ್ತು ಮಾಡಲಾಗುತ್ತಿದೆ.
ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಮೂಲಕ ಇನ್ನುಳಿದ ರೈತರಿಗೆ ಲಾಭ ದೊರಕಿಸಿಕೊಡುವ ಕಾರ್ಯ ಮಾಡುತ್ತಿದ್ದಾರೆ. ದೇವೇಂದ್ರಪ್ಪ ಬಳೂಟಗಿ ಅವರ ಸಾಧನೆಗೆ ರಾಯಚೂರು ಕೃಷಿ ವಿವಿ ಕೊಡಮಾಡುವ “ರೈತ ವಿಜ್ಞಾನಿ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಶರಣಬಸಪ್ಪ ಪೀರಪ್ಪ ಪಾಟೀಲ್: ಗುಲ್ಬರ್ಗ ಜಿಲ್ಲೆಯ ಹಾಲಸುಲ್ತಾನಪುರ ಗ್ರಾಮದ ರೈತರಾಗಿರುವ ಇವರು ಒಟ್ಟು 18 ಎಕರೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ, ಮೇವಿನ ಬೆಳೆ, ಎರೆಗೊಬ್ಬರ ತಯಾರಿಕೆ ಸೇರಿದಂತೆ ಅನೇಕ ಕೃಷಿ ಸಂಬಂಧಿ ಚಟುವಟಿಕೆ ನಡೆಸಿರುವುದು ಗಮನಾರ್ಹ ಸಂಗತಿ.
ತೊಗರಿ, ಜೋಳ, ಕಬ್ಬು, ಉದ್ದು, ಈರುಳ್ಳಿ, ನಿಂಬೆ ಇವರು ಬೆಳೆಯುವ ಪ್ರಮುಖ ಬೆಳೆಗಳು. ಐಟಿಐ ವ್ಯಾಸಂಗ ಮಾಡಿರುವ ಇವರು ಸರ್ಕಾರಿ ನೌಕರಿಗೆ ಕಾಯದೇ ನೇರವಾಗಿ ಕೃಷಿ ಕ್ಷೇತ್ರಕ್ಕಿಳಿದು ಸಾಧನೆ ಮಾಡಿದ್ದಾರೆ. ಪ್ರಯೋಗಶೀಲರಾಗಿರುವ ಇವರು ತೊಗರಿ ಸಸಿಯ ಕುಡಿ ಚಿವುಟುವ ಯಂತ್ರವನ್ನು ಲಭ್ಯವಿರುವ ಸಾಮಗ್ರಿಗಳನ್ನೇ ಬಳಸಿ ಸ್ವತಃ ಆವಿಷ್ಕರಿಸಿದ್ದಾರೆ. ಅಂತರ ಬೇಸಾಯ ಮಾಡುವ ಉಪಕರಣ, ಸೌರಶಕ್ತಿಯ ವಿದ್ಯುತ್ ತಂತಿ ಬೇಲಿ ಅಳವಡಿಕೆ, ನಳ ನೀರಾವರಿ ಪದ್ಧತಿಯ ಮೂಲಕ ಸಸಿಗಳಿಗೆ ನೀರೊದಗಿಸುವುದು, ಪಂಪಸೆಟ್‌ಗೆ ಟೈಮರ್ ಅಳವಡಿಕೆಯಂಥ ತಂತ್ರಜ್ಞಾನವನ್ನು ಅವರೇ ಆವಿಷ್ಕರಿಸಿ ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಸಿ ಯಶಸ್ಸು ಕಂಡಿದ್ದಾರೆ.
ನೀರು ಸಂರಕ್ಷಣೆಗೆ ಕ್ರಮ: ಅವರು ಅಳವಡಿಸಿಕೊಂಡಿರುವ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು ಇನ್ನುಳಿದ ರೈತರಿಗೆ ಮಾದರಿಯಾಗಿವೆ. ಮಳೆ ನೀರು ಕೊಯ್ಲು, ಇಂಗುಗುಂಡಿ, ಕೃಷಿ ಹೊಂಡ, ಹನಿ ನೀರಾವರಿ ಸೇರಿದಂತೆ ವಿವಿಧ ನೀರು ಸಂರಕ್ಷಣೆ ಕ್ರಮಗಳು ಬರಗಾಲದಲ್ಲಿಯೂ ಒಂದು ಹಂಗಾಮಿನ ಬೆಳೆಗೆ ಬೇಕಾಗುವ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದು ಸಾಧನೆ. ಈ ಸಾಧನೆಯನ್ನು ಮೆಚ್ಚಿ ರಾಯಚೂರು ಕೃವಿವಿ ಶರಣಬಸಪ್ಪ ಪಾಟೀಲ್ ಅವರಿಗೆ ರೈತ ವಿಜ್ಞಾನಿ ಪುರಸ್ಕಾರ ನೀಡಲು ನಿರ್ಧರಿಸಿದೆ.
ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಈ ಇಬ್ಬರೂ ಕೃಷಿಕರಿಗೆ ಮಾ. 30ರಂದು ನಡೆಯಲಿರುವ ರಾಯಚೂರು ಕೃಷಿ ವಿವಿ ಘಟಿಕೋತ್ಸವದಲ್ಲಿ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ರೈತ ವಿಜ್ಞಾನಿ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
- ಜಗನ್ನಾಥ ಆರ್. ದೇಸಾಯಿ