ರಾಯಚೂರು

ಸಿಗದ 'ಖಾತ್ರಿ'; ಗೇಣು ಹೊಟ್ಟೆಗಾಗಿ ಗುಳೆ

Published On :

ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ   ಮುದಗಲ್   ಮಾ.29
ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ದುಡಿಯಲು ಕೆಲಸವಿಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಊರುಗಳಿಗೆ ಗುಳೆ ಹೋಗದೇ ಗತಿಯಿಲ್ಲ. ಹೀಗಂತ ಗ್ರಾಮೀಣ ಪ್ರದೇಶದ ಜನರ ಗೋಳು ಕೇಳುವವರೂ ಯಾರೂ ಇಲ್ಲ..
- ಈಗ ತಾಲೂಕಿನಲ್ಲಿ ಇರುವುದು ವಿಧಾನಸಭೆ ಚುನಾವಣೆ ಬಿರುಗಾಳಿ ಮಾತ್ರ. ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚುನಾವಣೆಯಲ್ಲಿ ಬ್ಯೂಸಿ ಆಗಿದ್ದಾರೆ. ಅವರು ತಮ್ಮ ಮೂಗಿನ ನೇರಕ್ಕೆ ಮಾತ್ರ ಚಿಂತನೆ ನಡೆಸಿದ್ದಾರೆ. ನಿತ್ಯದ ತುತ್ತಿನ ಚೀಲಕ್ಕಾಗಿ ಪರದಾಡುತ್ತಿರುವ ಬಡ ಕೂಲಿ ಕಾರ್ಮಿಕರ ದಯನೀಯ ಸ್ಥಿತಿ ಕಾಣಿಸುತ್ತಿಲ್ಲ.
ತಾಲೂಕಿನಲ್ಲಿ ಬರಗಾಲದ ತೀವ್ರತೆ ಹೇಚ್ಚಾಗಿದ್ದು ಕೆರೆ, ಹಳ್ಳ, ಬಾವಿಗಳು ಬರಿದಾಗಿವೆ. ಕೊಳವೆಬಾವಿಗಳಲ್ಲಿನ ಅಂತರ್ಜಲವೂ ಕುಸಿದಿದ್ದರಿಂದ ಕುಡಿಯಲೂ ನೀರಿಲ್ಲದೆ ಜನರು ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವುದು ಸಾಮಾನ್ಯವಾಗಿದೆ.
'ಖಾತ್ರಿ' ಕೂಲಿ ಸಿಗುತ್ತಿಲ್ಲ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಗ್ರಾಮೀಣ ಕೂಲಿಕಾರರಿಗೆ ಕೂಲಿ ಕೆಲಸ ನೀಡಲೆಂದು ಸರ್ಕಾರ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದ್ದರೂ ಕೂಲಿಕಾರರಿಗೆ ಕೆಲಸ ನೀಡದೆ ಯಂತ್ರಗಳ ಮೂಲಕ ಕೆಲಸ ಮಾಡುತ್ತಿರುವುದು ನಿಂತಿಲ್ಲ.
ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಸಾಲಕ್ಕಾಗಿ ಎತ್ತು, ಎಮ್ಮೆ, ಮುಂತಾದ ಜಾನುವಾರುಗಳನ್ನು ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಸಾಲ ತೀರಿಸಿ ಹೊಟ್ಟೆಪಾಡಿಗೆ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ಅನೇಕ ಪಟ್ಟಣಗಳಿಗೆ ಗುಳೆ ಹೋರಟಿದ್ದಾರೆ. ಇಷ್ಟಿದ್ದರೂ ತಾಲೂಕಿನ ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗುಳೆ ಹೊರಟವರು ಶಾಪ ಹಾಕುತ್ತಿದ್ದಾರೆ.
'ಕೂಲಿ'ಕಾರರಿಗಿಲ್ಲ 'ಖಾತ್ರಿ': ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದ್ದರೆ, ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಇದುವರೆಗೂ ಕೂಲಿ ಹಣ ನೀಡದೆ ಸತಾಯಿಸಲಾಗುತ್ತಿದೆ. ಕೂಲಿಕಾರರು ಕೆಲಸ ಮಾಡಿ ಆರು ತಿಂಗಳು ಗತಿಸಿದರೂ ಹಣ ಪಾವತಿಸದೆ ಇದ್ದುದರಿಂದ ಜನರು ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲದೆ ಇದ್ದುದರಿಂದ ಮಾರಾಟ ಮಾಡವುದಾಗಿ ರೈತರು ತಿಳಿಸಿದ್ದಾರೆ.
ನಿಜವಾದ ಬಡ, ಕೂಲಿಕಾರರಿಗೆ, ರೈತರಿಗೆ ಸರ್ಕಾರದಿಂದ ಇದುವರೆಗೂ ಯಾವುದೇ ಸಹಾಯ, ಸಹಕಾರ ಸಿಕ್ಕಿಲ್ಲ. ಬರಗಾಲದ ನೆಪದಲ್ಲಿ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಗುಂಗಿನಲ್ಲಿ ರಾಜಕೀಯ ಮುಖಂಡರಿದ್ದಾರೆ. ಇತ್ತ ಗ್ರಾಮೀಣ ಜನರ  ಗೋಳು ಕೇಳುವವರಾರು ಎನ್ನುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.