ಮುಷ್ಕರಕ್ಕೆ ಇನ್ನೂ ದೊರಕಿಲ್ಲ ಪರಿಹಾರ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.30
ಆರನೇ ವೇತನ ಆಯೋಗ ಜಾರಿಗೊಳಿಸಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ಇತರೆ 9 ಬೇಡಿಕೆಗಳನ್ನಿಟ್ಟುಕೊಂಡು ಸಾಗಿರುವ ಇಲ್ಲಿನ ಹೈಕಶಿ ಸಂಸ್ಥೆಯ ರಾಂಪುರೆ ವೈದ್ಯ ವಿದ್ಯಾಲಯದ ಬೋಧಕೇತರ ಸಿಬ್ಬಂದಿ ಮುಷ್ಕರ ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಇದರೊಂದಿಗೆ ಬೋಧಕೇತರ ಸಿಬ್ಬಂದಿ ಗುರಣ್ಣ ಪಾಕೀನ್ ಉಪವಾಸ ಸತ್ಯಾಗ್ರಹವೂ ಹಾಗೆಯೇ ಮುಂದುವರಿದಿದೆ.
ಏತನ್ಮಧ್ಯೆ ರಾಂಪುರೆ ವಿದ್ಯಾಲಯದ ಬೋಧಕೇತರ ಸಿಬ್ಬಂದಿ ಮುಷ್ಕರಕ್ಕೆ ಸಂಸ್ಥೆಯ ಇತರೆ ಅಂಗ ಸಂಸ್ಥೆಗಳ ಸಿಬ್ಬಂದಿ ಸಂಘಗಳಿಂದಲೂ ವ್ಯಾಪಾಕ ಬೆಂಬಲ ದೊರಕಲಾರಂಭಿಸಿದೆ. ಈಗಾಗಲೇ ಶುಕ್ರವಾರ 6 ಸಂಸ್ಥೆಗಳ ಸಿಬ್ಬಂದಿ ಕಪ್ಪುಪಟ್ಟಿ ಕಟ್ಟಿಕೊಂಡು ಮುಷ್ಕರಕ್ಕೆ ಬೆಂಬಲಿಸಿದ್ದಾರೆ.
ಒಡೆದು ಆಳುವ ನೀತಿ: ಬೇಡಿಕೆ ಈಡೇರುವವರೆಗೂ ಮುಷ್ಕರದಿಂದ ಯಾವುದೇ ಕಾರಣಕ್ಕು ಹಿಂದೆ ಸರಿಯಲಾಗದು. ಪ್ರಸಂಗ ಬಂದಲ್ಲಿ ಸೋಮವಾರದಿಂದ ಸಂಸ್ಥೆಯ ಎಲ್ಲಾ 45 ಸಂಸ್ಥೆಗಳ ಬೋಧಕೇತರರು ಕೂಡಿಕೊಂಡು ಹೋರಾಟ ನವೀಕರಿಸೋಣ ಎಂಬ ಸಂಕಲ್ಪ ಸಹಿತ ಚರ್ಚೆಯೂ ಸಿಬ್ಬಂದಿ ಸಮೂಹದಲ್ಲಿ ಆಗಿದೆ ಎಂದು ತಿಳಿದು ಬಂದಿದೆ. 2012 ರಿಂದಲೇ 6ನೇ ವೇತನ ಆಯೋಗದ ಶ್ರೇಣಿ ತಮಗೆಲ್ಲರಿಗೂ ಅನ್ವಯವಾಗಬೇಕಿತ್ತು. ಬೋಧಕ ಸಿಬ್ಬಂದಿಗೆ ಈಗಾಗಲೇ ಈ ಶ್ರೇಣಿ ಅನ್ವಯವಾಗಿದೆ. ತಮಗೇಕಿಲ್ಲ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ. ನೌಕರರ ಮುಷ್ಕರದಿಂದ ಕಂಗೆಟ್ಟಿರುವ ಹೈಕಶಿ ಸಂಸ್ಥೆ ಆಡಳಿತ ಮಂಡಳಿ ಮುಷ್ಕರ ನಿರತರಲ್ಲಿ ಅನುದಾನಿತ, ಅನುದಾನ ರಹಿತ ಎಂದು ಒಡೆದು ಆಳುವ ನೀತಿಗೆ ಮುಂದಾಗಿದೆ ಎನ್ನಲಾಗಿದೆ.
ಆದಾಗ್ಯೂ ಸಂಸ್ಥೆಯ ಈ ಭಯ ಮೂಡಿಸುವ ಪ್ರಯತ್ನವನ್ನು ನೌಕರರೆಲ್ಲರೂ ಒಟ್ಟಾಗಿ ಖಂಡಿಸಿದ್ದಾರಲ್ಲದೆ ಏನೇ ಪರಿಸ್ಥಿತಿ ಬರಲಿ ಎಲ್ಲರೂ ಸೇರಿಕೊಂಡು ಎದುರಿಸುತ್ತೇವೆಯೇ ಹೊರತು ನ್ಯಾಯ ಸಮ್ಮತ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.
ನಂಬುವ ಸ್ಥಿತಿಯಿಲ್ಲ: 3 ಬಾರಿ ಹೈಕಶಿ ಸಂಸ್ಥೆ ಅಧ್ಯಕ್ಷ ಶಶಿಲ್ ನಮೋಶಿ ಸಭೆ ನಡೆಸಿ ಆಗಸ್ಟ್ನಿಂದ ವೇತನ ಶ್ರೇಣಿ ಜಾರಿಗೆ ಭರವಸೆ ನೀಡಿದ್ದರೂ ಸಿಬ್ಬಂದಿ ಅಧ್ಯಕ್ಷರ ಈ ಭರವಸೆಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಹೋರಾಟ ನಿಲ್ಲಿಸಲು ಇಂತಹ ಭರವಸೆ ನೀಡಲಾಗುತ್ತದೆ. ನಂತರ ಯಾರೂ ಕ್ಯಾರೆ ಎನ್ನುವುದಿಲ್ಲ ಎಂದು ಇಂತಹ ಅನೇಕ ಭರವಸೆಗಳನ್ನು ಕೇಳಿದ್ದೇವೆ. ಈ ಬಾರಿ ಎಲ್ಲವೂ ಲಿಖಿತವಾಗಿರಬೇಕು, ಭರವಸೆಗಳಿಗೆ ಬೆಲೆ ಇಲ್ಲ ಎಂದು ನೌಕರರು ಮುಷ್ಕರ ಮುಂದುವರಿಸಿದ್ದಾರೆ.
ಶುಕ್ರವಾರ ನೌಕರರ ಹೋರಾಟದ ಸ್ಥಳಕ್ಕೆ ಆಡಳಿತ ಮಂಡಳಿ ಸದಸ್ಯ ಆರ್.ಎಸ್. ಹೊಸಗೌಡ, ಸಂಸ್ಥೆಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಸದಸ್ಯರಾದ ಶಿವಶರಣಪ್ಪ ಸಿರಿ, ಶಿವಶರಣಪ್ಪ ಮಂಠಾಳೆ ಸೇರಿದಂತೆ ಹಲವರು ಭೇಟಿ ನೀಡಿ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಹೈಕಶಿ ಆಡಳಿತ ಮಂಡಳಿ ತುರ್ತು ಸಭೆ: ಮುಷ್ಕರ ನಿರತ ನೌಕರರೊಂದಿಗೆ 3 ಬಾರಿ ಮಾತುಕತೆ ನಡೆದರೂ ಪ್ರತಿ ಬಾರಿಯೂ ಅವು ವಿಫಲವಾಗಿದ್ದರಿಂದ ಕಂಗಾಲಾಗಿರುವ ಸಂಸ್ಥೆಯ ಆಡಳಿತ ಮಂಡಳಿ ಶುಕ್ರವಾರ ಸಂಜೆ ತುರ್ತು ಸಭೆ ಸೇರಿದೆ ಎನ್ನಲಾಗಿದೆ. ಅಧ್ಯಕ್ಷ ನಮೋಶಿ ನೇತೃತ್ವದ ಈ ಸಭೆಯಲ್ಲಿ ಬೋಧಕೇತರ ಸಿಬ್ಬಂದಿ ಬೇಡಿಕೆ, ಅದರ ಸಾಧಕ- ಬಾಧಕಗಳ ಬಗ್ಗೆ ವಿವರವಾಗಿ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಸಭೆಯಲ್ಲಿಯೂ ಅಂತಿಮ ನಿರ್ಣಯ ಮೂಡುವುದೆ ಎಂಬುದೇ ಅನುಮಾನ. ಅಧ್ಯಕ್ಷರು, ಉಪಾಧ್ಯಕ್ಷರು ಮೊದಲ್ಗೊಂಡು ಅನೇಕರು ನೌಕರರೊಂದಿಗೆ ನೇರವಾಗಿ ಮಾತುಕತೆಗೆ ಬಂದರೂ ಬಗೆಹರಿಯದ ಸಮಸ್ಯೆ ದಿನಗಳೆದಂತೆ ಕಗ್ಗಂಟಾಗುತ್ತಲೇ ಸಾಗಿದೆ. ರಾಂಪುರೆ ವೈದ್ಯ ವಿದ್ಯಾಲಯದ ಡೀನ್ ಡಾ. ಭಂಡಾರಿ ಮಲ್ಲಿಕಾರ್ಜುನ ಶುಕ್ರವಾರ ಕಾಲೇಜಿಗೆ ಬಂದು ತಾವೇ ಬೀಗ ತೆರೆಯಲು ಮುಂದಾದಾಗ ಮುಷ್ಕರ ನಿರತ ನೌಕರರು ಅದನ್ನು ಪ್ರತಿಭಟಿಸಿದರಲ್ಲದೆ ಮುಷ್ಕರಕ್ಕೆ ಬೆಂಬಲಿಸುವಂತೆ ಆಗ್ರಹಿಸಿದರು ಎನ್ನಲಾಗಿದೆ. ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಬೋದೇನಗೌಡ, ಕಾರ್ಯದರ್ಶಿ ಶಿವಶಂಕರ ಬಳೆಗಾರ್ ಸೇರಿದಂತೆ 180 ಸಿಬ್ಬಂದಿ ಭಾಗವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

