ಮಾನವಿ ಎಪಿಎಂಸಿ: ಅಕ್ರಮ ಕಟ್ಟಡ ತೆರವಿಗೆ ಸೂಚನೆ
ಕ.ಪ್ರ. ವಾರ್ತೆ, ರಾಯಚೂರು, ಮಾ.31
ಮಾನವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ತೆರವಿಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೈಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಪ್ರಭುರಾಜ್ ಕೊಡ್ಲಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಎಪಿಎಂಸಿ ನಿರ್ದೇಶಕ ಎಸ್.ಶಂಕರ ನಾರಾಯಣ ಅವರು ಜೈಕರ್ನಾಟಕ ರಕ್ಷಣಾ ವೇದಿಕೆ ಮಾನವಿ ಎಪಿಎಂಸಿಯಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಅಕ್ರಮ ಕಟ್ಟಡಗಳ ತೆರವಿಗೆ ಸೂಚಿಸಿದ್ದಾರೆಂದು ತಿಳಿಸಿದರು.
ಠರಾವು ರದ್ದುಗೊಳಿಸಲು ಆದೇಶ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಮತ್ತು ನಿವೇಶನಗಳ ಹಂಚಿಕೆಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಕುರ್ಡಿ ಹಾಗೂ ಕಾರ್ಯದರ್ಶಿ ಶಿವರಾಂಸಿಂಗ್ ಅವಕಾಶ ಮಾಡಿಕೊಟ್ಟಿದ್ದರು. ಅದಕ್ಕೆ ಎಪಿಎಂಸಿ ಸಭೆಯ ಮೂಲಕ ಅನುಮೋದನೆ ನೀಡಲಾಗಿತ್ತು. ಆದರೆ ರಾಜ್ಯ ಮಹಾಮಂಡಳಿಯು ಮಾನವಿ ಎಪಿಎಂಸಿ ಸಭೆಯಲ್ಲಿ ಅನುಮೋದಿಸಿದ್ದ ವಸತಿ ಕಟ್ಟಡಗಳ ನಿರ್ಮಾಣ ಮತ್ತು ನಿವೇಶನಗಳ ಹಂಚಿಕೆಯ ಠರಾವು ರದ್ದುಗೊಳಿಸುವಂತೆ ಆದೇಶಿಸಿದೆ ಎಂದು ತಿಳಿಸಿದರು.
ಮಾನವಿಯ ಎಪಿಎಂಸಿ ಪ್ರದೇಶದಲ್ಲಿ ಅಕ್ರಮವಾಗಿ ವಾಣಿಜ್ಯ ಬಳಕೆಗೆ ಕಟ್ಟಡ ನಿರ್ಮಿಸಲಾಗುತ್ತಿದೆ. ಹಾಗೆಯೇ ದನದ ಸಂತೆಗೆ ಮೀಸಲಿಟ್ಟ ಜಾಗವನ್ನು ಎಪಿಎಂಸಿ ನಿವೇಶನವಾಗಿ ಹಂಚಿಕೆ ಮಾಡಲು ಯತ್ನಿಸುತ್ತಿರುವ ಬಗ್ಗೆ ಸಂಘಟನೆಯು ನಡೆಸಿದ ಹೋರಾಟದ ಫಲವಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಕಟ್ಟಡ ತೆರವಿಗೆ 15 ದಿನಗಳ ಗಡುವು ನೀಡಿದ್ದಾರೆ ಎಂದು ತಿಳಿಸಿದರು.
ಆಸ್ತಿ ಹಂಚಿಕೆ ನಿಯಮ ಉಲ್ಲಂಘನೆ: ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿ ಮತ್ತು ಗೋದಾಮುಗಳ ಮೇಲೆ ಮನೆಗಳನ್ನು ನಿರ್ಮಿಸಿ ಅವುಗಳನ್ನು ಬಾಡಿಗೆ ನೀಡಿರುವುದು ಇಲ್ಲವೇ ವರ್ತಕರೇ ವಾಸವಾಗಿರುವುದು ಆಸ್ತಿ ಹಂಚಿಕೆಯ ನಿಯಮಗಳ 2004ರ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂಥವರಿಗೆ ನೋಟೀಸ್ ಜಾರಿ ಮಾಡಿ ಕಟ್ಟಡ ತೆರವಿಗೆ ಸೂಚನೆ ನೀಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ನಿವೇಶನ ಸಂಖ್ಯೆ 52ರಲ್ಲಿ ಮೊಬೈಲ್ ಗೋಪುರ ನಿರ್ಮಾಣಕ್ಕೆ ಅವಕಾಶ ಮಾಡಿದ್ದು, ಈ ಗೋಪುರ ನಿರ್ಮಾಣಕ್ಕೆ ನೀಡಿದ ಅನುಮತಿ ಕೂಡಲೇ ಹಿಂಪಡೆಯಬೇಕು. ಗೋಪುರ ತೆರವಿಗೆ ಸೂಚನೆ ನೀಡುವಂತೆ ಮಾನವಿ ಎಪಿಎಂಸಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ವ್ಹೇ ಬ್ರಿಡ್ಜ್ ಜಾಗದಲ್ಲಿ ಸರ್ವಿಸ್ ಸೆಂಟರ್: ವೇ ಬ್ರಿಡ್ಜ್ ನಿರ್ಮಾಣಕ್ಕಾಗಿ ಒದಗಿಸಿದ ಜಾಗದಲ್ಲಿ ವಾಹನಗಳನ್ನು ತೊಳೆಯುವ ಕಾರ್ಯಕ್ಕೆ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದೂ ಸಹ ಕಾಯಿದೆಯ ಉಲ್ಲಂಘನೆಯಾಗಿದೆ. ಈ ನಿಟ್ಟಿನಲ್ಲಿ ಎಪಿಎಂಸಿ ಮಂಡಳಿಯ 2012ರ ಸೆ.6ರ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಹಿಂಪಡೆಯಲು ಆದೇಶಿಸಿದ್ದಾರೆಂದು ಹೇಳಿದರು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸದ್ಯ ಮಾನವಿ ಎಪಿಎಂಸಿ ಕಾರ್ಯದರ್ಶಿಗಳಾಗಿರುವ ಡಿ.ರಂಗಪ್ಪ ಅವರು 15 ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ದಕ್ಷ ಹಾಗೂ ಪ್ರಾಮಾಣಿಕರಾಗಿರುವ ರಂಗಪ್ಪ ಅವರ ಭರವಸೆ ಮನ್ನಿಸಿ ಸಂಘಟನೆಯು ಸಹಕಾರ ನೀಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರಸ್ವಾಮಿ, ಪ್ರಶಾಂತ ಕಪಗಲ್, ತಿಮ್ಮಾರೆಡ್ಡಿ, ಕುತುಬುದ್ದೀನ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

