ಅಧಿಕಾರದಾಸೆಗೆ ಚುನಾವಣಾ ವ್ಯವಸ್ಥೆ ಹಾಳು
ಕ.ಪ್ರ. ವಾರ್ತೆ ರಾಯಚೂರು ಮೇ 1
ಅಧಿಕಾರದಾಸೆಗೆ ಚುನಾವಣಾ ವ್ಯವಸ್ಥೆಯನ್ನು ಹಾಳುಗೆಡುವಲ್ಲಿ ಪ್ರಮುಖ ರಾಜಕೀಯ ಪಕ್ಷಗ ಪಾತ್ರ ಹೆಚ್ಚಿದೆ. ಅಕ್ರಮಗಳ ಮೂಲಕ ಹಣ ಸಂಪಾದನೆ ಮಾಡಿ ಚುನಾವಣೆ ವೇಳೆ ಮತದಾರನಿಗೆ ವಿವಿಧ ಆಮಿಷ ಒಡ್ಡುವ ತಂತ್ರಕ್ಕೆ ಮೊರೆ ಹೋಗುತ್ತಿರುವುದು ಸರಿಯಲ್ಲ. ಇದರಿಂದ ರಾಜಕೀಯ ವ್ಯವಸ್ಥೆ ಬಗ್ಗೆ ಪ್ರಜ್ಞಾವಂತ ಮತದಾರರಲ್ಲಿ ಬೇಸರವಿದೆ ಎಂದು ಸಿಪಿಎಂಎಲ್ ರೆಡ್ ಸ್ಟಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರನ್ ಆರೋಪಿಸಿದರು.
ಹೆಚ್ಚಿದ ಸಮಸ್ಯೆಗಳು: ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮೂಲಕ ಅಭಿವೃದ್ಧಿಯ ಮಾತಾಡಿದ್ದ ಕಾಂಗ್ರೆಸ್ನಿಂದ ದೇಶದಲ್ಲಿ ಮತ್ತಷ್ಟು ಸಮಸ್ಯೆಗಳೇ ಹೆಚ್ಚಾಗಿವೆ. ವಿದೇಶಿ ಬಂಡವಾಳ ಹೂಡಿಕೆಯಿಂದ ಸ್ಥಳೀಯ ವರ್ತಕರಿಗೆ ಹಾನಿಯಾಗಿದೆ. ಅನೇಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ. ಇಂಥ ಜನವಿರೋಧಿ ನೀತಿ ಅನುಸರಿಸುವಂಥ ಪಕ್ಷಗಳನ್ನು ದೂರವಿಡುವಂತೆ ಮನವಿ ಮಾಡಿದರು.
ರಾಜ್ಯದ ಜನತೆಗೆ ಸೇರಿದ ನೈಸರ್ಗಿಕ ಸಂಪನ್ಮೂಲ ಲೂಟಿ ಹೊಡೆದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರಿಗೆ ಸೋಲಿಸುವುದು ಮತದಾರರ ಪ್ರಮುಖ ಕರ್ತವ್ಯವಾಗಬೇಕಿದೆ. ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ರು. ಕೊಳ್ಳೆ ಹೊಡೆದವರಿಂದ ಪ್ರಸಕ್ತ ಚುನಾವಣೆಯ ನಂತರದಲ್ಲಿ ಪುನಾ ಅಭಿವೃದ್ಧಿ ನಿರೀಕ್ಷಿಸುವುದು ತಪ್ಪಾದೀತು ಎಂದು ಅವರು ಹೇಳಿದರು.
ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ಅನೇಕ ಕಡೆ ಭೂಬ್ಯಾಂಕ್ ಸ್ಥಾಪಿಸಲಾಗಿದೆ. ಆದರೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಕಾರ್ಯ ಮಾತ್ರ ನಡೆದಿಲ್ಲ. ರೈತರ ಫಲವತ್ತಾದ ಜಮೀನು ಕಬಳಿಸಿದ ಸರ್ಕಾರ ಕೈಗಾರಿಕೆಗಳ ಸ್ಥಾಪನೆಗೆ ಆಸಕ್ತಿ ತೋರದಿರುವುದು ರಿಯಲ್ ಎಸ್ಟೇಟ್ ದಂಧೆ ಮಾಡಿರುವುದು ಸ್ಪಷ್ಟ ಎಂದು ಟೀಕಿಸಿದರು.
ಜಮೀನಿಲ್ಲ: ಪಕ್ಷದ ಪ್ರಮುಖ ಆರ್.ಮಾನಸಯ್ಯ ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಇದುವರೆಗೆ 1.12ಲಕ್ಷ ಎಕರೆ ಜಮೀನು ನೀಡಲಾಗಿದೆ. ಆದರೆ ಕೈಗಾರಿಕೆಗಳನ್ನು ಮಾತ್ರ ನಿರೀಕ್ಷಿಸಿದಂತೆ ಸ್ಥಾಪಿಸಿಲ್ಲ. ಅದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಸರ್ಕಾರಿ ಜಮೀನು ಶ್ರೀಮಂತರ ಕೈವಶದಲ್ಲಿದೆ. ಬಡವರಿಗೆ ವಸತಿಗೂ ಜಮೀನಿಲ್ಲದಂಥ ಸ್ಥಿತಿಯಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಒಟ್ಟು 3418ಟಿಎಂಸಿ ಜಲಸಂಪನ್ಮೂಲ ಲಭ್ಯವಿದೆ. ಈ ಪೈಕಿ ಇದುವರೆಗೆ ಕೇವಲ 1697ಟಿಎಂಸಿ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ. 1721 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವಲ್ಲಿ ಇದುವರೆಗೆ ರಾಜ್ಯವನ್ನಾಳಿದವರು ವಿಫಲರಾಗಿದ್ದಾರೆಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಅಸಮರ್ಪಕ ವಿದ್ಯುತ್: ರಾಜ್ಯದಲ್ಲಿ 24 ವಿದ್ಯುತ್ ಸ್ಥಾವರಗಳಿದ್ದು, ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಸಾಧ್ಯವಾಗಿಲ್ಲ. 11300ಮೆವ್ಯಾ ವಿದ್ಯುತ್ ಅವಶ್ಯಕತೆಯಿದ್ದು, ಇದುವರೆಗೆ ವಾರ್ಷಿಕ ವಿದ್ಯುತ್ ಉತ್ಪಾದನೆಯು 5975.91ಮೆವ್ಯಾ ಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆ ಸಾಧ್ಯವಾಗಿಲ್ಲ. ಇದು ಸರ್ಕಾರಗಳ ಜನರ ಪರ ಕಾರ್ಯನಿರ್ವಹಣೆಯನ್ನು ಬಯಲು ಮಾಡಿದೆ ಎಂದು ದೂರಿದರು.
ವಿದ್ಯುತ್ ಸ್ಥಳೀಯವಾಗಿ ಉತ್ಪಾದಿಸಿದರೆ ಪ್ರತಿ ಯೂನಿಟ್ ಗೆ 6 ರು. ವೆಚ್ಚವಾಗುತ್ತದೆ. ಆದರೆ ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮೂಲಕ ಕಮೀಷನ್ ಪಡೆಯಲು ರಾಜಕೀಯ ಪಕ್ಷಗಳು ವಿದ್ಯುತ್ ಖರೀದಿ ತಂತ್ರಕ್ಕೆ ಮುಂದಾಗುತ್ತಿವೆ ಎಂದು ಆರೋಪಿಸಿದರು.
ಹೀಗೆ ಹತ್ತು ಹಲವು ರೀತಿಯಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿರುವ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳನ್ನು ಪ್ರಸಕ್ತ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಬೇಕಿದೆ. ಹಾಗೆಯೇ ವಿಧಾನಸೌಧದಲ್ಲಿ ಜನರ ಬೇಡಿಕೆಗಳ ಈಡೇರಿಕೆಗೆ ಹೋರಾಡುವಂಥ ಸಿಪಿಎಂಎಲ್ ರೆಡ್ ಸ್ಟಾರ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರಾಜಶೇಖರ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

