ಜ್ವಲಂತ ಸಮಸ್ಯೆಗಳ ಕಡೆಗಣನೆ; 'ಕೈ' ತಿರಸ್ಕರಿಸಲು ಬಿಎಸ್ಪಿ ಕರೆ
ಕನ್ನಡಪ್ರಭ ವಾರ್ತೆ ರಾಯಚೂರು ಮೇ.2
ರಾಯಚೂರು ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜಾರಾಯಪ್ಪ ನಾಯಕ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರ ಮಾಡುವಲ್ಲಿ ವಿಫಲರಾಗಿದ್ದಾರೆ. ಗ್ರಾಮೀಣ ಭಾಗಕ್ಕೆ ನಿರಂತರ ಭೇಟಿ ನೀಡದೇ ಚುನಾವಣೆಯ ಈ ಸಂದರ್ಭದಲ್ಲಿ ಪುನಾ ಕಣಕ್ಕಿಳಿದಿದ್ದು ಅವರಿಗೆ ತಕ್ಕಪಾಠ ಕಲಿಸುವಂತೆ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ವಿಜಯಲಕ್ಷ್ಮಿ ಕರೆ ನೀಡಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆಯಿಂದ ಗ್ರಾಮೀಣ ಕ್ಷೇತ್ರದ ಅನೇಕ ರೈತರು ನೀರು ದೊರೆಯದೇ ಬೆಳೆ ಹಾನಿ ಅನುಭವಿಸಿದ ಅನೇಕ ಉದಾಹರಣೆಗಳಿವೆ. ಆದರೆ ಅಂಥ ಸಂದರ್ಭದಲ್ಲಿ ಕ್ಷೇತ್ರದತ್ತ ಮುಖಮಾಡದ ಕಾಂಗ್ರೆಸ್ ಅಭ್ಯರ್ಥಿಯು ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೆ ಪ್ರಚಾರಕ್ಕೆ ತೊಡಗಿದ್ದಾರೆ. ಆದ್ದರಿಂದ ಅವರಿಗೆ ಮತದಾರರು ತಕ್ಕಪಾಠ ಕಲಿಸುವಂತೆ ಮನವಿ ಮಾಡಿದರು.
ಚುನಾವಣೆ ಬಂದಾಗ ಮತ ಗಳಿಕೆ: ಈ ವೇಳೆ ಮಾತನಾಡಿದ ಮುಖಂಡ ನೀಲಕಂಠ ಬೇವಿನ್, ಚುನಾವಣೆ ಸಂದರ್ಭದಲ್ಲಿ ಕುರುಬ ಸಮಾಜದ ವೋಟುಗಳ ಮೇಲೆ ಕಣ್ಣಿರಿಸಿ ರಾಜಕೀಯಕ್ಕೆ ಕುರುಬ ಸಮಾಜದ ಮುಖಂಡ ಸಿದ್ದರಾಮಯ್ಯ ಅವರ ಹೆಸರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಕುರುಬ ಸಮಾಜಕ್ಕೆ ಚುನಾವಣೆ ವೇಳೆ ಪ್ರಾಶಸ್ತ್ಯ ನೀಡದ ಪಕ್ಷದವರು ಸದ್ಯ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದಾಗಿ ಹೇಳುವ ಮೂಲಕ ಸಮಾಜದ ಮತ ಸೆಳೆಯಲು ಕುತಂತ್ರ ನಡೆಸಿವೆ ಎಂದು ಆರೋಪಿಸಿದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಕುರುಬ ಸಮಾಜಕ್ಕೆ ಟಿಕೆಟ್ ಸಮರ್ಪಕವಾಗಿ ನೀಡದೇ ಅನ್ಯಾಯ ಮಾಡಿವೆ. ಕೇವಲ ಚುನಾವಣೆ ಬಂದಾಗ ಮತ ಗಳಿಕೆಗೆ ಕುರುಬ ಸಮಾಜದವರನ್ನು ನೆನಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರು ದಕ್ಷ ಹಾಗೂ ಪ್ರಾಮಾಣಿಕ ಆಡಳಿತಗಾರನಾಗಿದ್ದು, ಗ್ರಾಮೀಣ ಕ್ಷೇತ್ರದಲ್ಲಿ ಬಿಎಸ್ಪಿಗೆ ಬೆಂಬಲಿಸಿ ಚುನಾವಣೆಯಲ್ಲಿ ಗೆಲವು ತಂದುಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳು ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೇರಲು ಪೂರಕ ಪರಿಸರ ನಿರ್ಮಿಸಲಾಗುತ್ತದೆಂದು ಹೇಳಿದರು. ಈ ಸಂದರ್ಭದಲ್ಲಿ ಬಿಎಸ್ಪಿ ಮುಖಂಡ ಬೂದೆಪ್ಪ ಬೇವಿನ್ ಮತ್ತಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

