ರಾಯಚೂರು

ಎತ್ತಿನ ಬಂಡಿಯಲ್ಲಿ ನಮೋಶಿ ಮೆರವಣಿಗೆ

Published On :

ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಸಾವಳಗಿ (ಬಿ) ಗ್ರಾಮಸ್ಥರು ಜೆಡಿಎಸ್ ಅಭ್ಯರ್ಥಿ ಶಶಿಲ್ ನಮೋಶಿ ಅವರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದರು.
ಮೇ 5ರಂದು ನಡೆಯುವ ಚುನಾವಣೆಯಲ್ಲಿ ಬತ್ತದ ತೆನೆ ಹೊತ್ತ ಮಹಿಳೆ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ನಮೋಶಿ ಅವರು, ಕಳೆದ ಮೂರು ವರ್ಷಗಳಿಂದ ಸತತವಾಗಿ ಮತಕ್ಷೇತ್ರದ ಏಳಿಗೆಗೆ ಶ್ರಮಿಸಿದ್ದೇನೆ. ಆದರೆ, ಕೊನೆ ಗಳಿಗೆಯಲ್ಲಿ ಕೆಲವರ ಒಳಸಂಚಿನಿಂದ ಟಿಕೆಟ್ ತಪ್ಪಿದೆ. ಜೆಡಿಎಸ್‌ಗೆ ಮತ ನೀಡುವ ಮೂಲಕ ವಂಚಕರಿಗೆ ಪಾಠ ಕಲಿಸುವಂತೆ ಮನವಿ ಮಾಡಿದರು. ಜಿಪಂ ಸದಸ್ಯ ಸಂತೋಷ ಪಾಟೀಲ್ ದಣ್ಣೂರ್, ಸೋಮಣ್ಣ ಸೋಮಾ ಸೇರಿದಂತೆ ನೂರಾರು ಯುವಕರು ಇದ್ದರು.

ಮತದಾನ; ವೇತನ ಸಹಿತ ರಜೆಗೆ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಂದು ಮತದಾನಕ್ಕೆ ತೆರಳುವ ಕಾರ್ಮಿಕರಿಗೆ ಕಡ್ಡಾಯವಾಗಿ ಅವಕಾಶ ಕಲ್ಪಿಸುವುದು ಮತ್ತು ವೇತನ ಸಹಿತ ರಜೆ ನೀಡಲು ಕಾರ್ಮಿಕ ಇಲಾಖೆ ಸೂಚಿಸಿದೆ. ಕಾರ್ಖಾನೆ, ಅಂಗಡಿ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕ ವರ್ಗದವರಿಗೆ ಕಡ್ಡಾಯವಾಗಿ ಮತದಾನ ಮಾಡಲು ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ರಜೆ ನೀಡಿ ವೇತನ ಸಹಿತ ಅವರಿಗೆ ಅನುಕೂಲ ಕಲ್ಪಿಸಲು ಕಾರ್ಮಿಕ ಅಧಿಕಾರಿಗಳ ಕಚೇರಿ ಆದೇಶಿಸಿದೆ.

ಮದ್ಯ ಮಾರಾಟ: ಇಬ್ಬರ ಬಂಧನ
ರಾಯಚೂರು: ಮಾನವಿ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಆಂಜಿನೇಯ್ಯ ಮತ್ತು ಭೀಮನಗೌಡ ಎಂದು ಗುರುತಿಸಲಾಗಿದೆ. ಇವರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ವಿವಿಧ ಕಂಪನಿಗಳ 6336 ಬೆಲೆಯ ಮದ್ಯ ಹಾಗೂ 1650 ನಗದು ಜಪ್ತಿ ಮಾಡಿದ್ದಾರೆ. ಈ ಕುರಿತು ಕವಿತಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಕ್ರಮ ಮದ್ಯ ಜಪ್ತಿ
ರಾಯಚೂರು: ತಾಲೂಕಿನ ಕಲ್ಮಲಾ ಗ್ರಾಮದ ಹೊಲದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯದ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ. ಉದಯ ಎಂಬುವವರ ಹೊಲದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ವಿವಿಧ ಕಂಪನಿಗಳ ಮದ್ಯ 67,647 ಬೆಲೆಯ ಮದ್ಯ ಜಪ್ತಿ ಮಾಡಲಾಗಿದೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಕ್ರಮ ಮದ್ಯ ದಾಳಿ
ರಾಯಚೂರು: ತಾಲೂಕಿನ ಕಟ್ಲಟ್ಕೂರು ಗ್ರಾಮದ ಮಾವಿನ ತೋಟದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದು ಪೊಲೀಸರು ಜಪ್ತಿ ಮಾಡಿದ್ದಾರೆ. ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಸಂಗ್ರಹಿಸಿಟ್ಟಿದ್ದ 85,094 ಬೆಲೆಯ ಮದ್ಯ ಜಪ್ತಿ ಮಾಡಲಾಗಿದೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

'ಜಾತಿ ಹೆಸರಲ್ಲಿ ಮತ ಒಡೆಯಬೇಡಿ'
ಸಿಂಧನೂರು: ಪಕ್ಷಗಳ ಕೆಲ ಮುಖಂಡರು ಜಾತಿಯ ಹೆಸರಿನಲ್ಲಿ ಮತಗಳನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದು ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಎಚ್. ರಾಮನಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದೊಂದು ವಾರದಿಂದ ಜಿಪಂ ಸದಸ್ಯ ಚಂದೂಸಾಬ ಮುಳ್ಳೂರು ಹಾಗೂ ಲಿಂಗರಾಜ ಪಾಟೀಲ ಹಂಚಿನಾಳ ಕ್ಯಾಂಪ್ ಅವರ ವಿರುದ್ಧ ಹಾಗೂ ಅವರು ಪಕ್ಷ ನಿಷ್ಠೆ ತೋರಿಸುತ್ತಿಲ್ಲವೆಂದು, ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಜರಿದಿದ್ದಾರೆ. ಇಂತಹ ಹಗುರ ಮಾತುಗಳಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಕಿವಿಗೊಡಬಾರದು ಎಂದು ಸಲಹೆ ನೀಡಿದರು.
ಯಾಸೀನ್ ಪರ ಮತಯಾಚನೆ
ರಾಯಚೂರು: ಕಾಂಗ್ರೆಸ್ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಸೈಯದ್ ಯಾಸೀನ್ ಅವರ ಪರ ಆರ್ಯವೈಶ್ಯ ಸಮಾಜದ ಕಾಂಗ್ರೆಸ್ ಪಕ್ಷದ ಮುಖಂಡರು ಇತ್ತೀಚೆಗೆ ಮತಯಾಚಿಸಿದರು. ಪ್ರಮುಖರಾದ ವೀರಣ್ಣ ಮುದ್ಗಲ್, ಪಲುಗುಲ ನಾಗರಾಜ್ ಮತ್ತು ಮಟಮಾರಿ ಶೇಷಯ್ಯನವರು ನಗರದ ಆರ್ಯವೈಶ್ಯ ಸಮಾಜದ ಮನೆಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಚುನಾವಣೆ; ಮದ್ಯ ಮಾರಾಟ ನಿಷೇಧ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮೇ 5ರಂದು ಹಾಗೂ ಮತ ಎಣಿಕೆ ಮೇ 8ರಂದು ನಡೆಯಲಿದೆ. ಈ ಪ್ರಯುಕ್ತ ಮೇ 3ರಂದು ಸಂಜೆ 5ರಿಂದ ಮೇ 5ರಂದು ಮಧ್ಯರಾತ್ರಿಯವರೆಗೆ ಮತ್ತು ಮತ ಎಣಿಕೆ  ಮೇ 8ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಜಿಲ್ಲೆಯಲ್ಲಿನ ಎಲ್ಲ ತರಹದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಆದೇಶ ಹೊರಡಿಸಿದ್ದಾರೆ.

ಮತಗಟ್ಟೆಗಳ ಮೇಲ್ವಿಚಾರಣೆ: ನೇಮಕ
ಗುಲ್ಬರ್ಗ: ಚುನಾವಣಾ ಆಯೋಗದ ನಿರ್ದೇಶನದಂತೆ ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಗುಲ್ಬರ್ಗ ವಿಧಾನಸಭೆಯ 9 ಕ್ಷೇತ್ರಗಳ ಕ್ಷೇತ್ರವ್ಯಾಪ್ತಿಯ ಮತಗಟ್ಟೆಗಳ ಮೇಲ್ವಿಚಾರಣೆಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿರುವುದನ್ನು ಬದಲಾವಣೆ ಮಾಡಿ ಪರಿಷ್ಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ. ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 21ರಡಿ ನೇಮಿಸಲಾಗಿದ್ದು, ಬದಲಾವಣೆ (ಪರಿಷ್ಕೃತ) ಮಾಡಲಾದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆ ಹಾಗೂ ಕ್ಷೇತ್ರವ್ಯಾಪ್ತಿ ಹೆಸರು ಇಂತಿದೆ. ರಾಮಕೃಷ್ಣ ಟಿ. ಪಡಗಣ್ಣನವರ ಪ್ರೋಗ್ರಾಂ ಆಫೀಸರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುಲ್ಬರ್ಗ ಮೊ. 9448139421-ಗುಲ್ಬರ್ಗ ಹೋಬಳಿಯ ಗ್ರಾಮಾಂತರ ಕ್ಷೇತ್ರ. ಸಿದ್ರಾಮೇಶ್ವರ ಕಟ್ಟಿಮನಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೆ.ಎನ್.ಎನ್.ಎಲ್. ಉಪವಿಭಾಗ, ಹೆಬ್ಬಾಳ ಮೊ. 9449155658-ಅತನೂರ ಹೋಬಳಿ. ರವಿಕುಮಾರ ಸಹಾಯಕ ಕೃಷಿ ನಿರ್ದೇಶಕರು ಚಿತ್ತಾಪುರ- ಚಿತ್ತಾಪುರ ತಾಲೂಕಿನ ನಾಲವಾರ ಗೇಟ್ ಚೆಕ್ ಪೋಸ್ಟ್. ಕನಕ ಸಹಾಯಕ ಕೃಷಿ ನಿರ್ದೇಶಕರು ಚಿತ್ತಾಪುರ ಮೊ. 7259005315-ಗುಲ್ಬರ್ಗ ನಗರದ ತಾಜ್‌ನಗರ (ಹಾಗರಗಾ ರೋಡ್) ಚೆಕ್ ಪೋಸ್ಟ್. ಸುರೇಶ ಬಿರಾದಾರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ಚಿತ್ತಾಪುರ ಮೊ. 9448145645-ಚಿತ್ತಾಪುರ ತಾಲೂಕಿನ ಟೇಂಗಳಿ ಕ್ರಾಸ್ ಚೆಕ್ ಪೋಸ್ಟ್. ಡಾ. ಭಾವುರಾವ ಸಂಗ್ಮೆ ಸಹಾಯಕ ನಿರ್ದೇಶಕರು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಗುಲ್ಬರ್ಗ, ಮೊ. 9448577580- ಗುಲ್ಬರ್ಗ ತಾಲೂಕಿನ ಮಹಾಗಾಂವ ಚೆಕ್ ಪೋಸ್ಟ್. ಡಾ. ಎಚ್.ಎನ್. ಶ್ರೀನಿವಾಸ ಸಹಾಯಕ ನಿರ್ದೇಶಕರು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಗುಲ್ಬರ್ಗ, ಮೊ. 9448224815- ಗುಲ್ಬರ್ಗ ತಾಲೂಕಿನ ಹೈಕೋರ್ಟ್ (ಅಫಜಲ್ಪುರ ರಸ್ತೆ) ಚೆಕ್ ಪೋಸ್ಟ್.

ನೀರು ಸರಬರಾಜು ಇಂದು ವ್ಯತ್ಯಯ
ಗುಲ್ಬರ್ಗ: ನಗರದ ತಾಜ್ ಸುಲ್ತಾನಪುರ ರಸ್ತೆಯಲ್ಲಿರುವ ಹಳೆಯ ಜಲಶುದ್ಧೀಕರಣ ಕೇಂದ್ರದಲ್ಲಿರುವ 50 ಎಚ್‌ಪಿ ಮೋಟಾರ್ ಸುಟ್ಟಿದ್ದು, ದುರಸ್ತಿ ಕಾರ್ಯವನ್ನು ಮೇ 4ರಂದು ಕೈಗೆತ್ತಿಕೊಳ್ಳಲಾಗುವುದು. ಈ ಪ್ರಯುಕ್ತ ಮೇ 4ಮತ್ತು 5ರಂದು ಈ ಮುಂದೆ ತೋರಿಸಿರುವ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರ ಸಹಕರಿಸುವಂತೆ ಕೋರಲಾಗಿದೆ.
ಶಹಾಬಜಾರ್ ಬಡಾವಣೆ: ಸ್ವಾದಿ ಗಲ್ಲಿ, ಚನ್ನಮಲ್ಲೇಶ್ವರ ನಗರ, ಕಬಾಡಗಲ್ಲಿ, ರೇವುನಾಯಕ ತಾಂಡಾ, ಮಡ್ಡಿತಾಂಡಾ, ಚಿಂಚೋಳಿ ರೋಡ್.
ಫಿಲ್ಟರ್‌ಬೆಡ್ ಬಡಾವಣೆ: ತಾಜನಗರ, ಮುಸ್ಲಿಂ ಸಂಘ, ಶಿವಶಕ್ತಿನಗರ, ಸುವರ್ಣನಗರ, ಚೆನ್ನವೀರನಗರ ಮತ್ತು ಆಶ್ರಯ ಕಾಲೋನಿ.

ಮಹಿಳೆ ಶವ ಪತ್ತೆಗೆ ಮನವಿ
ಗುಲ್ಬರ್ಗ: ಸೇಡಂ ತಾಲೂಕಿನ ಮಳಖೇಡ ರೋಡ್ ರೇಲ್ವೆ ನಿಲ್ದಾಣದ ವೇದಿಕೆ ನಂ.2ರ ಓವರ್ ಬ್ರಿಡ್ಜ್ ಕಾಲಂಗಳ ನಡುವೆ ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ಹೆಣ್ಣುಮಗಳ ಶವ ಪತ್ತೆಯಾಗಿದೆ. ಈ ಕುರಿತು ವಾಡಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಏ.30 ಪ್ರಕರಣ ದಾಖಲಿಸಲಾಗಿದೆ. ಕೊಲೆಯಾದ ಮಹಿಳೆ 4.7 ಅಡಿ ಎತ್ತರ, ಕಪ್ಪು ಮೈಬಣ್ಣ, ಬಡಕಲು ದೇಹ, ಅಗಲವಾದ ಹಣೆ, 10 ಇಂಚು ಕೂದಲು, ಎಡಗಡೆ ಕಿವಿಯೊಲೆ ತೂತು ಹರಿದಿದ್ದು, ಮೃತಳ ಎರಡು ಕೈಗಳ ಮೇಲೆ ಹಚ್ಚೆಯ ಗುರುತು ಇರುತ್ತದೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ವಾಡಿ ರೇಲ್ವೆ ಪೊಲೀಸ್ ಸ್ಟೇಷನ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.