ರಾಯಚೂರು

ಮತದಾರರಿಗೆ ಬಸ್ ವ್ಯವಸ್ಥೆ: ಡಿಸಿ

Published On :

ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 3
ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಮತಗಟ್ಟೆ ದೂರವಿರುವ ಕಡೆಗಳಲ್ಲಿ ಮತದಾನ ಮಾಡಲು ಮತದಾರರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಮತಗಟ್ಟೆಗಳು ದೂರ ಇವೆ. ಅಲ್ಲಿಗೆ ಬರಲು ಮತದಾರರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇದು ಉಚಿತವಲ್ಲದಿದ್ದರೂ ಮತದಾರರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಸೌಲಭ್ಯ ಮಾಡಲಾಗುತ್ತಿದೆ. ಹಿಂದಿನ ಚುನಾವಣೆಗಳಲ್ಲಿ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಕರೆತರುತ್ತಿದ್ದರು. ಇದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಸಾಮಾನ್ಯ ದರವನ್ನು ಪಡೆದು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಮತದಾನ ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮತಗಟ್ಟೆಗಳಲ್ಲಿ ಮೂಲ ಸೌಕರ್ಯ: ಮತಗಟ್ಟೆಗಳಲ್ಲಿ ಕುಡಿವ ನೀರು, ನೆರಳು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮತದಾನ ಕೇಂದ್ರಗಳಲ್ಲಿ ಫ್ಯಾನ್‌ಗೆ ನಿರ್ಬಂಧವಿಲ್ಲ. ಮತಗಟ್ಟೆಗಳಲ್ಲಿ ಯಾವುದಾದರೂ ಪಕ್ಷದ ಚಿಹ್ನೆ ಇರುವ ಚಿತ್ರಗಳು ಇದ್ದಲ್ಲಿ ಅವುಗಳನ್ನು ತೆರವು ಮಾಡಲಾಗುವುದು. ಚುನಾವಣೆ ಪ್ರಕ್ರಿಯೆಗೆ ನಿಯೋಜಿಸಿರುವ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹೊರತುಪಡಿಸಿ ಮತಗಟ್ಟೆಯಿಂದ 200 ಮೀ. ಪ್ರದೇಶದಲ್ಲಿ ಪ್ರವೇಶಿ ನಿಷೇಧಿಸಲಾಗಿದೆ. ಮತ ಚಲಾಯಿಸುವವರಿಗೆ ಮಾತ್ರ ಬರಲು ಅವಕಾಶವಿದೆ ಎಂದು ತಿಳಿಸಿದರು.
ಶೇ.75 ಮತದಾನ ನಿರೀಕ್ಷೆ: ಪ್ರತಿ ಅಭ್ಯರ್ಥಿಗೆ ಮೂರು ವಾಹನಗಳ ಪರವಾನಗಿ ನೀಡಲಾಗಿದ್ದು, ಅದರಲ್ಲಿ ವಾಹನ ಚಾಲಕ ಸೇರಿ 5 ಜನರಿಗಿಂತ ಹೆಚ್ಚಾಗಿದ್ದರೆ ಅಂಥವರ ಮೇಲೆ ಕ್ರಮ ಜರಗಿಸಲಾಗುವುದು. ಕಳೆದ ಚುನಾವಣೆಯಲ್ಲಿ ಶೇ. 52ರಷ್ಟು ಮತದಾನವಾಗಿತ್ತು. ಈ ಸಲ ಮತದಾರರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರಿಂದ ಶೇ. 75ರಷ್ಟು ಮತ ಚಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
172 ಮತಗಟ್ಟೆ: ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ 955 ಮಟಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ 172 ಅತಿಸೂಕ್ಷ್ಮ ಮತ್ತು 190 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಉಳಿದ 553 ಸಾಮಾನ್ಯ ಮತಗಟ್ಟೆಗಳಾಗಿವೆ.  ಈ ಎಲ್ಲ ಕೇಂದ್ರಗಳಲ್ಲಿ ಕೇಂದ್ರ ಮೀಸಲು ಪಡೆ ಸಿಬ್ಬಂದಿ, ಸ್ಥಳೀಯ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
34 ಪ್ರಕರಣ ದಾಖಲು: ಈ ಬಾರಿ ಜಿಲ್ಲೆಯಲ್ಲಿ 8,01,900  ಜನರು ಮತದಾನದ ಹಕ್ಕು ಪಡೆದಿದ್ದಾರೆ. 4,03,198 ಪುರುಷರು, 3,98,66 ಮಹಿಳಾ ಹಾಗೂ ಇತರೆ 36 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಉಪ ಮುಖ್ಯಮಂತ್ರಿ ಈಶ್ವರಪ್ಪ ಸೇರಿದಂತೆ ಒಟ್ಟು 34 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 33.60 ಲಕ್ಷ ನಗದು, 1,110 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಬಹಿರಂಗ ಪ್ರಚಾರ ಶುಕ್ರವಾರ ಸಂಜೆ 5ಕ್ಕೆ ಮುಕ್ತಾಯವಾಗಿದ್ದು, ಶನಿವಾರ ಯಾವ ಅಭ್ಯರ್ಥಿಯೂ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಮನೆಮನೆ ಭೇಟಿಗೆ ಅವಕಾಶವಿದ್ದು, 5 ಜನರಿಗಿಂತ ಹೆಚ್ಚು ಜನರು ಹೋಗುವಂತಿಲ್ಲ. ಮತದಾನದ ಹಿಂದಿನ ದಿನ ಹೆಚ್ಚು ಅಕ್ರಮ ನಡೆಯುವ ಸಾಧ್ಯತೆ ಇರುವುದರಿಂದ ಸೂಕ್ತ ನಿಗಾ ವಹಿಸಲಾಗಿದೆ. ಕಟ್ಟುನಿಟ್ಟಿನ ಭದ್ರತಾ ಕ್ರಮ ಜರುಗಿಸಲಾಗುತ್ತಿದೆ. ಮತದಾನ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ರಾಜೇಂದ್ರ ಚೋಳನ್ ತಿಳಿಸಿದರು.
ಸಕಲ ಸಿದ್ಧತೆ: ಮತಯಂತ್ರಗಳೊಂದಿಗೆ ಮತಗಟ್ಟೆಗೆ ತೆರಳುವ ಚುನಾವಣಾ ಸಿಬ್ಬಂದಿಗಾಗಿ ಸಾರಿಗೆ ಸಂಸ್ಥೆಯ 138 ಬಸ್ಸುಗಳು, 118 ಜೀಪಿನ ವ್ಯವಸ್ಥೆ ಮಾಡಲಾಗಿದೆ. 955 ಎಲೆಕ್ಟ್ರಾನಿಕ್ ಮತಯಂತ್ರಗಳು ಹಾಗೂ ಹೆಚ್ಚುವರಿಯಾಗಿ 500ರಷ್ಟು ಮತಯಂತ್ರಗಳನ್ನು ಸಿದ್ಧವಾಗಿಡಲಾಗಿದೆ. ಮತಯಂತ್ರದಲ್ಲಿ ತಾಂತ್ರಿಕ ತೊಂದರೆಯಾದಲ್ಲಿ ತಕ್ಷಣ ಬದಲಿಸಲಾಗುವುದು. ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.
ಯಾದಗಿರಿ ಮತ್ತ ಗುರುಮಠಕಲ್ ಕ್ಷೇತ್ರಗಳಿಗೆ ಯಾದಗಿರಿಯ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಮಸ್ಟರಿಂಗ್ ಕೇಂದ್ರ ತೆರೆಯಲಾಗಿದೆ. ಶಹಾಪುರದಲ್ಲಿ ಮೊರಾರ್ಜಿ ದೇಸಾಯಿ, ಸುರಪುರದಲ್ಲಿ ಪ್ರಭು ಕಾಲೇಜಿನಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಎಲ್ಲಾ ಕ್ಷೇತ್ರಗಳ ಮತ ಎಣಿಕೆಯು ಯಾದಗಿರಿಯ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ಕಟ್ಟಡದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.