ಮತದಾನ; ಜಿಲ್ಲಾದ್ಯಂತ ನಿಷೇಧಾಜ್ಞೆ
ಮದುವೆ, ಅನುಮತಿ ಪಡೆದ ಸಮಾರಂಭ, ಮೆರವಣಿಗೆಗಳಿಗೆ ನೀತಿ ಅನ್ವಯವಲ್ಲ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 3
ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತದಾನ ಮೇ.5ರಂದು ಬೆಳಗಿನ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಗುಲ್ಬರ್ಗ ಜಿಲ್ಲಾದ್ಯಂತ ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ಪಾರದರ್ಶಕ ಮತದಾನ ಪ್ರಕ್ರಿಯೆ ನಡೆಸಲು ಅನುಕೂಲವಾಗುವಂತೆ ಹಾಗೂ ಮತದಾರರಿಗೆ ಕಿರುಕುಳವಾಗದಂತೆ ಮತ ಚಲಾಯಿಸಲು ಅನುಕೂಲ ಕಲ್ಪಿಸುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾ ದಂಡಾಧಿಕಾರಿ ಡಾ.ಕೆ.ಜಿ.ಜಗದೀಶ ಅವರು ಗುಲ್ಬರ್ಗ ಜಿಲ್ಲಾದ್ಯಂತ ಮೇ 3ರ ಸಂಜೆ 5 ಗಂಟೆಯಿಂದ ಮೇ 5ರ ರಾತ್ರಿ 7ಗಂಟೆಯವರೆಗೆ ಸಿಆರ್ಪಿಸಿ ಕಾಯ್ದೆ 1973ರ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
5 ಜನರ ಗುಂಪಿಗೆ ನಿಷೇಧ: ಈ ಆದೇಶ ಜಾರಿಗೊಳ್ಳುವ ಅವಧಿ ಮತ್ತು ಸ್ಥಳಗಳಲ್ಲಿ ಹಾಗೂ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಮತದಾರರಲ್ಲದ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೇ 5 ಜನರ ಗುಂಪು ಸೇರುವುದು ಮತ್ತು ತಿರುಗಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ 2008ರ ಕಲಂ 35ರ ಅನ್ವಯ ಆಯುಧ, ಲಾಠಿ, ಚಾಕು ಮುಂತಾದ ಮಾರಕ ಶಸ್ತ್ರಾಸ್ತಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸುವಂತಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ಮೇ 3ರಂದು ಸಂಜೆ 5ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ತದನಂತರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ನೀಡುವಂತೆ ಪ್ರಚಾರ ಮಾಡುವಾಗ ಐದು ಜನರಿಗಿಂತ ಹೆಚ್ಚು ಜನರು ಪ್ರಚಾರದಲ್ಲಿ ಭಾಗವಹಿಸುವಂತಿಲ್ಲ.
200 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ನಿಷೇಧ: ಕರ್ನಾಟಕ ಪೊಲೀಸ್ ಕಾಯ್ದೆ 2008ರ ಕಲಂ 35ರ ಅನ್ವಯ ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ಅನ್ವಯ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಹಾಗೂ ಬಳಸುವಂತಿಲ್ಲ. ಆದರೆ ಈ ಆದೇಶ ಮತಗಟ್ಟೆ ಕೇಂದ್ರದ 200 ಮೀಟರ್ ವ್ಯಾಪ್ತಿ ಒಳಪಡುವ ಮನೆಗಳಲ್ಲಿ ವಾಸಿಸುವವರಿಗೆ ಅನ್ವಯಿಸುವುದಿಲ್ಲ.
ಸಾರ್ವಜನಿಕರು ಮತದಾನದ ಅವಧಿಯಲ್ಲಿ ಅಂದರೆ ಬೆಳಗಿನ 7 ರಿಂದ ಸಂಜೆ 5 ಗಂಟೆಯವರೆಗೆ ಗುಂಪು ಗುಂಪಾಗಿ ಸೇರುವಂತಿಲ್ಲ. ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಅನ್ವಯ ಮತದಾನ ಮಾಡಲು ಬಂದ ಮತದಾರರಿಗೆ ಮತಗಟ್ಟೆ ಹತ್ತಿರ ಮತ ನೀಡುವಂತೆ ಆಸೆ ಆಮಿಷವನ್ನು ತೋರಿಸುವುದನ್ನು ಹಾಗೂ ಮತದಾರರಿಗೆ ತಮಗೆ ಮತದಾನ ಮಾಡುವಂತೆ ಒತ್ತಾಯಿಸುವಂತಿಲ್ಲ. ಇದಲ್ಲದೇ ಯಾವುದೇ ಪಕ್ಷದ ಚಿಹ್ನೆಯುಳ್ಳ ಬಾವುಟವನ್ನು ಸಹ ಪ್ರದರ್ಶಿಸುವಂತಿಲ್ಲ.
ಮದುವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಸಮಾರಂಭ ಮೆರವಣಿಗೆಗಳಿಗೆ, ಶವ ಸಂಸ್ಕಾರದ ಮೆರವಣಿಗೆಗಳಿಗೆ ಆದೇಶ ಅನ್ವಯಿಸುವುದಿಲ್ಲ.
ಬಹಿಷ್ಕಾರ; ಮತದಾರರ ಮನವೊಲಿಸಿದ ಸ್ವೀಪ್ ಸಮಿತಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 3
ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಹಾಗೂ ಬಟಗೇರಾ (ಬಿ) ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಡುವ ಬಟಗೇರಾ (ಕೆ) ಗ್ರಾಮದ ಮತದಾರರು ಮೇ 5ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನಮೊಲಿಸುವಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ನೇತೃತ್ವದ ಸಮಿತಿಯು ಶುಕ್ರವಾರ ಯಶಸ್ವಿಯಾಯಿತು.
ಮತದಾನ ಬಹಿಷ್ಕರಿಸಿದ ಬಟಗೇರಾ (ಕೆ) ಗ್ರಾಮದ ಮತದಾರರ ಸಮಸ್ಯೆ ಹಾಗೂ ಮತದಾನ ಬಹಿಷ್ಕಾರಕ್ಕೆ ಮೂಲಕಾರಣಗಳ ಬಗ್ಗೆ ಸಂವಾದ ನಡೆಸಿದ ಪಲ್ಲವಿ ಆಕುರಾತಿ ಅವರು ಮಾತನಾಡಿ, ಈ ಗ್ರಾಮದ ನಾಗರಿಕರು ಮೂಲ ಸೌಲಭ್ಯಗಳಲ್ಲೊಂದಾದ ಕುಡಿಯುವ ನೀರಿನ ತೀವ್ರ ಸಮಸ್ಯೆಯಿಂದ ನೋವಿನ ಬದುಕು ಸಾಗಿಸುತ್ತಿರುವ ಬಗ್ಗೆ ಸಂಪೂರ್ಣ ಮನವರಿಕೆಯಾಗಿದೆ. ಆದರೆ ಮತದಾನ ಬಹಿಷ್ಕಾರವೇ ಸಮಸ್ಯೆಗೆ ಪರಿಹಾರವಲ್ಲ ಎಂದರು.
ಗ್ರಾಮಸ್ಥರ ಈ ಕುಡಿಯುವ ನೀರಿನ ಸಮಸ್ಯೆ ಕುರಿತು ಎಲ್ಲರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ ಸ್ಪಷ್ಟವಾದ ಸಂದೇಶ ನೀಡಬೇಕು ಹಾಗೂ ಗ್ರಾಮಸ್ಥರಲ್ಲಿ ಯಾವುದೇ ಭೇದಭಾವ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ತಾಲೂಕು ಪಂಚಾಯತಿ ಅಧಿಕಾರಿಗೆ ಸೂಚಿಸಿದರು.
ತಾತ್ಕಾಲಿಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಬೇಕಲ್ಲದೇ ಬಿಲ್ ಕಲೆಕ್ಟರ್ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡಬೇಕೆಂದು ಎಚ್ಚರಿಸಿದರು.
ಮನವಿಗೆ ಓಗೊಟ್ಟ ಸದರಿ ಗ್ರಾಮದ ಎಲ್ಲ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಬಗ್ಗೆ ಸ್ವೀಪ್ ಅಧ್ಯಕ್ಷರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಜಿಪಂ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಜಿ. ಚಂದ್ರಕಾಂತ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಾರಕುಡೆ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕುದುರೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೇಶವರಾವ ಜಹಾಗೀರದಾರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

