ಬಿಸಿಲಿಗೆ ಬೆಚ್ಚಿದ ಮತದಾರ; ನೆರಳಿಗೆ ಹುಡುಕಾಟ
ರಾಯಚೂರು: ರಾಜ್ಯದಲ್ಲಿಯೇ ಬಿಸಿಲನಾಡು ಎಂದು ಕರೆಯಿಸಿಕೊಂಡ ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಎಂದರೆ ಕೇಳುವುದೇ ಬೇಡ. ಅಂಥದ್ದರಲ್ಲಿ ಚುನಾವಣೆಯ ಕಾವು ಬೇರೆ.ಪರಿಣಾಮ ಮತದಾರರು ಮತಗಟ್ಟೆಯ ಮುಂದೆ ಸಾಲಾಗಿ ನಿಲ್ಲದೇ ವಿವಿಧೆಡೆ ಸಮೀಪದಲ್ಲಿನ ಮರಗಳ ನೆರಳನ್ನು ಆಶ್ರಯಿಸಿದ್ದು ಕಂಡುಬಂದಿತು. ಕಳೆದ ಏಪ್ರಿಲ್ ತಿಂಗಳಿನಿಂದಲೇ ಜಿಲ್ಲೆಯಲ್ಲಿ ಬಿಸಿಲ ಪ್ರಕೋಪ ಹೆಚ್ಚಿದೆ. ಸರಾಸರಿ ತಾಪಮಾನ 41ರಿಂದ 42 ಡಿಗ್ರಿಯಷ್ಟಿದೆ. ಬಿಸಿಲ ತಾಪದಿಂದ ಬೇಸತ್ತಿರುವ ಜನತೆಗೆ ಚುನಾವಣೆಯ ಮತದಾನ ಮತ್ತಷ್ಟು ಬಿಸಿ ಮುಟ್ಟಿಸಿತು. ಬಿರುಬಿಸಿಲನ್ನೂ ಲೆಕ್ಕಿಸದೇ ಬೆಳಗ್ಗೆ 7ರಿಂದಲೇ ಜನತೆ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಆದರೆ ಮಧ್ಯಾಹ್ನ 12ರ ನಂತರದಲ್ಲಿ ಬಿಸಿಲ ತಾಪ ಏರಿಕೆಯಾಗಿದ್ದರಿಂದ ಮತದಾನ ಮಾಡಲು ತೆರಳಿದವರಿಗೆ ಸಾಲಾಗಿ ನಿಲ್ಲಲು ಸಾಧ್ಯವಾಗದೇ ಅನೇಕರು ಮತಗಟ್ಟೆಯ ಮುಂದಿನ ಗಿಡ ಮರಗಳ ನೆರಳಲ್ಲಿಯೇ ಕುಳಿತು ತಮ್ಮ ಸರದಿಗೆ ಕಾದಿದ್ದು ಕಂಡುಬಂದಿತು. ಮತ್ತೆ ಕೆಲವೆಡೆ ಮತಗಟ್ಟೆ ಮುಂದಿದ್ದ ಸಾಲಿನಲ್ಲಿ ಜನತೆ ಕಡಿಮೆಯಾದ ನಂತರದಲ್ಲಿ ಮತದಾನ ಮಾಡುವುದು ಕ್ಷೇಮ ಎಂದು ಮರದ ಕೆಳಗೆ ಕುಳಿತ ಅನೇಕರು ಕಂಡುಬಂದರು.
ಮತದಾನಕ್ಕೆ ಯುವಶಕ್ತಿಯ ಅತ್ಯಾಸಕ್ತಿ
ರಾಯಚೂರು: ನಗರದಲ್ಲಿ ಭಾನುವಾರ ನಡೆದ ನಗರ ವಿಧಾನಸಭೆ ಕ್ಷೇತ್ರದ ಮತದಾನ ಪ್ರಕ್ರಿಯೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಯುವ ಮತದಾರರು ಅತ್ಯಾಸಕ್ತಿಯಿಂದ ಮತದಾನ ಮಾಡಿದ್ದು ಕಂಡುಬಂದಿತು. ನಗರದ ಬಹುತೇಕ ಮತಗಟ್ಟೆಗಳ ಮುಂದೆ ಬೆಳಗಾಗುತ್ತಿದ್ದಂತೆಯೇ ಅನೇಕ ಯುವಕ, ಯುವತಿಯರು ತಮ್ಮ ಕುಟುಂಬದವರೊಂದಿಗೆ ಕಂಡುಬಂದರು. ಪಾಲಕರೊಂದಿಗೆ ಆಸಕ್ತಿಯಿಂದ ಆಗಮಿಸಿದ್ದ ಯುವ ಮತದಾರರು ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಯುವ ಮತದಾರರಾದ ಪೂಜಾ ಮಲ್ಲಿಕಾರ್ಜುನ ಸ್ವಾಮಿ, ಮೊದಲ ಬಾರಿಗೆ ಮತದಾನದ ಹಕ್ಕು ದೊರೆತಿದ್ದು, ಸಹಜವಾಗಿಯೇ ಮತದಾನ ಒಟ್ಟಾರೆ ಪ್ರಕ್ರಿಯೆ ಬಗ್ಗೆ ಕುತೂಹಲವಿತ್ತು. ಮೊದಲ ಮತದಾನ ಖುಷಿ ತಂದಿದೆ ಎಂದು ಅನುಭವ ಹಂಚಿಕೊಂಡರು. ನಗರ ಸೇರಿದಂತೆ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಯುವ ಜನಾಂಗ ಮತದಾನಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದು ಅಲ್ಲಲ್ಲಿ ಕಂಡುಬಂದಿತು.
ಬಂದೋಬಸ್ತ್ ನಡುವೆ ಮತದಾನ
ಮಸ್ಕಿ: ಮಾಜಿ ಶಾಸಕ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಭಾನುವಾರ ಬೆಳಿಗ್ಗೆ ಮತ ಚಲಾಯಿಸಿದರು. ಪಟ್ಟಣದ ಕಿಲ್ಲಾ ಒಣಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಅವರು ತಮ್ಮ ಪತ್ನಿ ಪದ್ಮಾವತಿ ಪಾಟೀಲ್ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಅದೇ ರೀತಿ ಕೆಜೆಪಿ ಅಭ್ಯರ್ಥಿ ಮಹದೇವಪ್ಪಗೌಡ ಪೊಲೀಸ್ ಪಾಟೀಲ್ ತಮ್ಮ ಮತ ಚಲಾಯಿಸಿದರು. ಒಟ್ಟಾರೆಯಾಗಿ ಮಸ್ಕಿ ಕ್ಷೇತ್ರದಾದ್ಯಂತ ಮತದಾನ ಎಲ್ಲೆಡೆ ಶಾಂತಿಯುತವಾಗಿತ್ತು. ಮತದಾನ ವೇಳೆ ಪೊಲೀಸ್ ಬಿಗಿ ಕಾವಲು ಹಾಕಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

