'ನನ್ನ ಸೋಲಿಗೆ ಬಿಜೆಪಿ ದುರ್ಬಲ ಅಭ್ಯರ್ಥಿ ಕಾರಣ'
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 9
ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು ಆ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದ್ದು, ತಮ್ಮ ಸೋಲಿಗೆ ಕಾರಣವಾಯಿತು. ಜತೆಗೆ ಕಾಂಗ್ರೆಸ್ನಲ್ಲಿನ ಕೆಲವರು ಚುನಾವಣೆಯಲ್ಲಿ ತಮ್ಮ ವಿರುದ್ಧವೇ ಕಾರ್ಯನಿರ್ವಹಿಸಿದ್ದು ಪಕ್ಷದ ಹಿನ್ನಡೆಗೆ ದಾರಿಯಾಯಿತು ಎಂದು ನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೈಯದ್ ಯಾಸೀನ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಅದರದ್ದೇ ಆದ ಸಾಂಪ್ರದಾಯಿಕ ಮತಗಳಿವೆ. ಆದರೆ ಪಕ್ಷವು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಆ ಮತಗಳು ಜೆಡಿಎಸ್ ಪರ ಹಂಚಿ ಹೋಗಲು ಕಾರಣವಾಯಿತು ಎಂದು ಹೇಳಿದರು.
ಕೆಲ ನಾಯಕರ ಕಾರ್ಯವೈಖರಿಯೂ ಕಾರಣ: ಕ್ಷೇತ್ರದ ಮತದಾರರು ನೀಡಿದ ತೀರ್ಪನ್ನು ಗೌರವಿಸುವುದಾಗಿ ತಿಳಿಸಿದ ಯಾಸೀನ್, ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ತಮ್ಮ ಪರವಾಗಿ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಪಕ್ಷದಲ್ಲಿನ ಕೆಲ ಗ್ರಾಮೀಣ ಪ್ರದೇಶದ ನಾಯಕರ ಕಾರ್ಯವೈಖರಿಯಿಂದಾಗಿ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದರು.
ಚುನಾವಣೆಯಲ್ಲಿನ ಸೋಲು ತಮ್ಮನ್ನು ಅಧೀರರಾಗಿಸಿಲ್ಲ. ಬದಲಿಗೆ ಪಕ್ಷದ ಕಾರ್ಯಕ್ರಮಗಳು, ಚಟುವಟಿಕೆಗಳಲ್ಲಿ ತೊಡಗಲು ಅವಕಾಶ ಮಾಡಿದೆ. ಜತೆಗೆ ಪಕ್ಷದ ಸಂಘಟನೆಗೆ ತೊಡಗುವುದಾಗಿ ಹೇಳಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದರಿಂದ ನಗರದ ಜನತೆಯ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಕೆಪಿಸಿಸಿಗೆ ಶೀಘ್ರವೇ ದೂರು: ಈಗಾಗಲೇ ನಗರ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾಗಿರುವ ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಸೇರಿದಂತೆ ಹಲವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಶೀಘ್ರದಲ್ಲಿಯೇ ಕೆಪಿಸಿಸಿಗೆ ಅವರ ಬಗ್ಗೆ ದೂರು ಸಲ್ಲಿಸಿ ಶಿಸ್ತುಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಹೇಳಿದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ 7 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲವಿನ ವಿಶ್ವಾಸವಿತ್ತು.
ಆದರೆ ಪಕ್ಷದ ಕೆಲ ನಾಯಕರ ವಿರೋಧಿ ಚಟುವಟಿಕೆಯಿಂದಲೇ ಪಕ್ಷಕ್ಕೆ ಹಾನಿಯಾಗಿದೆ. ಆ ಬಗ್ಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಂದ ಮಾಹಿತಿ ತರಿಸಿಕೊಳ್ಳಲಾಗುತ್ತಿದ್ದು, ಅಂಥವರ ವಿರುದ್ಧ ಶಿಸ್ತು ಕ್ರಮ ನಿಶ್ಚಿತ ಎಂದು ಹೇಳಿದರು.
ಸೋಲಿಗೆ ಬಷೀರುದ್ದೀನ್ ಮತ್ತಿತರರು ಕಾರಣ: ನಗರ ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಮತ್ತಿತರರು ಅಭ್ಯರ್ಥಿ ಯಾಸೀನ್ ಸೋಲಿಗೆ ಕಾರಣರಾಗಿದ್ದಾರೆ.
ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ಕೆಪಿಸಿಸಿಗೆ ಶೀಘ್ರದಲ್ಲಿಯೇ ದೂರಲಾಗುತ್ತದೆ. ಲಿಂಗಸ್ಗೂರು ಕ್ಷೇತ್ರದಲ್ಲಿ ಅಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿದ್ದಾರೆಂಬ ಆರೋಪದ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು. ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲ ವ್ಯಕ್ತಿಯನ್ನು ಕಣಕ್ಕಿಳಿಸಿದ್ದು, ಆ ಪಕ್ಷದ ಸಾಂಪ್ರದಾಯಿಕ ಮತಗಳ ಪೈಕಿ ಶೇ. 32ರಷ್ಟು ಮತಗಳು ಜೆಡಿಎಸ್ ಪರ ವಾಲಿದ್ದರಿಂದ ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದಿದ್ದರೂ ಸೋಲುಣ್ಣುವಂತಾಯಿತು ಎಂದು ವಿವರಿಸಿದರು.
ತ್ರಿಕೋನ ಸ್ಪರ್ಧೆಯಿರಬೇಕಿತ್ತು: ನಗರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದಲ್ಲಿ ಕಾಂಗ್ರೆಸ್ ಪಕ್ಷವೇ ಕ್ಷೇತ್ರದಲ್ಲಿ ಗೆಲವು ದಾಖಲಿಸುತ್ತಿತ್ತು. ಬಿಜೆಪಿ ದುರ್ಬಲ ವ್ಯಕ್ತಿಯನ್ನು ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್ಗೆ ಸೋಲಾಯಿತು ಎಂದು ವಿಶ್ಲೇಷಿಸಿದರು. ಈ ವೇಳೆ ಪಕ್ಷದ ಪ್ರಮುಖರಾದ ಪಾರಸಮಲ್ ಸುಖಾಣಿ, ಬಸವರಾಜ ರೆಡ್ಡಿ, ಪಾಪಾರೆಡ್ಡಿ, ರುದ್ರಪ್ಪ ಅಂಗಡಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

