ರಾಯಚೂರು

ಪಂಚಾಂಗಮಠದಲ್ಲಿ ನಾಳೆ ಬಸವ ಜಯಂತಿ

Published On :

ಸುರಪುರ: ಇಲ್ಲಿಯ ಪಂಚಾಂಗಮಠದಲ್ಲಿ ಮೇ 13, ಸೋಮವಾರ 90ನೇ ಬಸವ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.   ರುದ್ರಾಭಿಷೇಕ, ರುದ್ರಪಠಣ, ಧ್ವಜಾರೋಹಣ, ತೊಟ್ಟಿಲು ಮಹೋತ್ಸವ, ವಚನ ಗಾಯನ, ಭಜನಾ ಸಮ್ಮಿಲನೆ ಮತ್ತು ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.   ಇದೇ ಸಂದರ್ಭದಲ್ಲಿ ನೂತನ ಶಾಸಕ ರಾಜಾ ವೆಂಕಟಪ್ಪನಾಯಕ, ಪುರಸಭೆ ಸದಸ್ಯರಾದ ದೇವಿಂದ್ರಪ್ಪ ಕಳ್ಳಿಮನಿ ಮತ್ತು ಗುರುಬಾಯಿ ವಾಲಿ ಸನ್ಮಾನಿತಗೊಳ್ಳಲಿದ್ದಾರೆ ಎಂದರು.

ತಹಸೀಲ್ದಾರ್ ಕಚೇರಿ: ಬಸವ ಜಯಂತಿ
ಸುರಪುರ: ಇಲ್ಲಿಯ ತಹಸೀಲ್ ಕಚೇರಿಯಲ್ಲಿ ಮೇ 13, ಸೋಮವಾರ ಬೆಳಗ್ಗೆ 10 ಗಂಟೆಗೆ ಜಗಜ್ಯೋತಿ ಬಸವೇಶ್ವರರ 882ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಶಾಸಕ ರಾಜಾ ವೆಂಕಟಪ್ಪನಾಯಕ ಕಾರ್ಯಕ್ರಮ ಉದ್ಘಾಟಿಸುವರು.  ಚಿಗರಿಹಳ್ಳ ಕ್ರಾಸ್‌ನ ಮರುಳು ಶಂಕರದೇವರ ಗುರುಪೀಠದ ಸಿದ್ದಬಸವ ಕಬೀರಾನಂದ ಸ್ವಾಮೀಜಿ ಉಪನ್ಯಾಸ ನೀಡವರು. ತಹಸೀಲ್ದಾರ್ ಮೊಹ್ಮದ್ ಗೌಸುದ್ದೀನ್ ಅಧ್ಯಕ್ಷತೆ ವಹಿಸುವರು. ತಾಪಂ ಅಧ್ಯಕ್ಷೆ ಸಾಬವ್ವ ದೇಸಾಯಿ, ಎಪಿಎಂಸಿ ಅಧ್ಯಕ್ಷ ಬಸಣ್ಣ ಬಾಳಪ್ಪ ಬಂಗಿ, ಪಿಐ ರಾಜಕುಮಾರ ವಾಜಂತ್ರಿ, ತಾಪಂ ಇಒ ಪ್ಯಾರೆ ಮಹ್ಮದ ಕುತುಬುದ್ದೀನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಆಡಳಿತ ತಿಳಿಸಿದೆ.

'ಆರ್‌ವಿಎನ್‌ಗೆ ಸಚಿವ ಸ್ಥಾನ ನೀಡಿ'
ಸುರಪುರ: ತಾಲೂಕಿನ ನೂತನ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂದು ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘ ಆಗ್ರಹಿಸಿದೆ.
ವೆಂಕಟಪ್ಪ ನಾಯಕರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರ ತಂದೆ ರಾಜಾ ಕುಮಾರ ನಾಯಕ ಶಾಸಕರಾಗಿ ಮತ್ತು ಅಜ್ಜ ರಾಜಾ ವೆಂಕಟಪ್ಪನಾಯಕ ಬ್ಯಾರಿಷ್ಟರ್ ಸಂಸದರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಅವರು ಸಚಿವ ಸ್ಥಾನಕ್ಕೆ ಅರ್ಹ ಶಾಸಕರಾಗಿದ್ದಾರೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಫ್ಯಾಕ್ಸ್ ಮೂಲಕ ಸಲ್ಲಿಸಿದ ಮನವಿ ಪತ್ರದಲ್ಲಿ ಸಂಘ ತಿಳಿಸಿದೆ.
ತಾಲೂಕಿನ ಎಲ್ಲ ಜಾತಿ- ಜನಾಂಗಗಳ ಮತ್ತು ಹಿಂದುಳಿದ ವರ್ಗಗಳ ಬೆಂಬಲ ಆರ್‌ವಿಎನ್‌ಗೆ ಇದ್ದು, ಸ್ಥಳೀಯ ಸಂಸ್ಥೆ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಪಂ ಮತ್ತು ಎಪಿಎಂಸಿ ಚುನಾವಣೆಗಳಲ್ಲಿ ಇವರ ನಾಯಕತ್ವದಲ್ಲಿ ಕಾಂಗ್ರೆಸ್ ಜಯಸಾಧಿಸಿದೆ.  ಕಾರಣ ಆರ್‌ವಿಎನ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಸಂಘದ ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ, ಕಾರ್ಯದರ್ಶಿ ಗಂಗಾಧರ ನಾಯಕ ಒತ್ತಾಯಿಸಿದ್ದಾರೆ.
ಅಲಬನೂರು ಶಾಲೆಗೆ

ಶೇ.95.87 ಫಲಿತಾಂಶ
ಸಿಂಧನೂರು: ತಾಲೂಕಿನ ಒಳಬಳ್ಳಾರಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆಯು ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95.87ರಷ್ಟು ಫಲಿತಾಂಶ ಪಡೆದಿದೆ ಎಂದು ಮುಖ್ಯಗುರು ಸುರೇಶ ಕೆ.ಎಂ. ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 97 ವಿದ್ಯಾರ್ಥಿಗಳಲ್ಲಿ 93 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನೇತ್ರಾವತಿ ಶಿವಪ್ಪ ಭಜಂತ್ರಿ ಶೇ.85.28 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

16ರಂದು ಬಸವಲಿಂಗ ಶ್ರೀ ಮೂರ್ತಿ ಪ್ರತಿಷ್ಠಾಪನೆ
ಸಿಂಧನೂರು: ತಾಲೂಕಿನ ಅಲಬನೂರಲ್ಲಿ ಮೇ 16ರಂದು ಉಟಕನೂರು ಬಸವಲಿಂಗ ದೇಶಿಕೇಂದ್ರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಕಳಸಾರೋಹಣ ಅಲಬನೂರಿನ ಕಂಬಾಳಿಮಠ ಮರಿಬಸವರಾಜ ದೇಶೀ ಕೇಂದ್ರ ಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಗನ್ನಾಥರಾವ್ ಕುಲ್ಕಣರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 13ರಂದು ಉಟಕನೂರಿನಿಂದ ಆಹ್ವಾನ, ಕುಂಭ, ಕಳಸ, ಭಜನೆ, ಮಂಗಳವಾದ್ಯಗಳೊಂದಿಗೆ ಶ್ರೀಗಳ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು. 14ರಂದು ಸುಪ್ರಭಾತ, ಕರ್ತೃ ಗದ್ದುಗೆಗೆ ಅಭಿಷೇಕ, ಜಲಾಧಿವಾಸ, ಪುಷ್ಪಾದಿವಾಸ ಹಾಗೂ ಪ್ರವಚನ, 15ರಂದು ಧಾನಾಧಿವಾಸ, ವಸ್ತ್ರಾದಿವಾಸ ಹಾಗೂ ಹೋಮ ಮಾಡಲಾಗುವುದು. 16ರಂದು ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಡೆಯಲಿದೆ. ತೆಕ್ಕಲಕೋಟೆಯ ಕಂಬಳಿಮಠದ ವೀರಭದ್ರ ಶಿವಾಚಾರ್ಯರು ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದಾರೆ. ವಳಬಳ್ಳಾರಿಯ ಸಿದ್ದಲಿಂಗ ಸ್ವಾಮೀಜಿ, ನಿಲೋಗಲ್ ಬೃಹನ್ಮಠದ ಶಿವಾಚಾರ್ಯ ಸ್ವಾಮೀಜಿ, ವೀರಾಪುರದ ಮರುಳಸಿದ್ಧ ಶಿವಾಚಾರ್ಯ, ರೌಡಕುಂದಾದ ಮರಿಸಿದ್ಧಲಿಂಗ ಸ್ವಾಮಿ, ಕರಿಬಸವನಗರದ ಸೋಮನಾಥ ಶಿವಾಚಾರ್ಯ, ದೇವರ ಭೂಪೂರದ ಗಜದಂಡ ಮಹಾಸ್ವಾಮಿ, ಅಮರೇಶ್ವರದ ಶಾಂತಮಲ್ಲ ಮಹಾಸ್ವಾಮಿ, ಮಹಾಂತಸ್ವಾಮಿ, ಹಳೇಕೋಟೆಯ ಮಲ್ಲಿಕಾರ್ಜುನ ಮಹಾಸ್ವಾಮಿ, ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿ, ಅಂಕಲಿಮಠದ ವೀರಭದ್ರ ಮಹಾಸ್ವಾಮಿ ಭಾಗವಹಿಸಲಿದ್ದಾರೆ ಎಂದರು. ಅಲಬನೂರು ಗ್ರಾಮದ ವಿರುಪಾಕ್ಷಪ್ಪ ಸ್ವಾಮಿ, ಪಂಪಯ್ಯ ಸ್ವಾಮಿ, ಆರ್.ಪಂಪಾಪತಿ ಪಾಟೀಲ್, ಕೆ.ಶರಣಪ್ಪ, ಆರ್.ಚನ್ನಬಸವ, ಕೆ.ಚನ್ನಬಸವ, ಹಾಲೇಶ, ಹನುಮೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.