ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕ
ಸುರಪುರ: ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದೆರೆ ಕಷ್ಟದ ಕೆಲಸ. ಸಾಲ ಮಾಡಿ ಮದುವೆ ಮಾಡುವುದಕ್ಕಿಂತ ಸಾಲವಿಲ್ಲದೆ ಸರಳ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುವುದು ಒಳ್ಳೆಯ ಕೆಲಸ. ಸಾಮೂಹಿಕ ಮದುವೆಗಳು ಹಣ ಉಳಿತಾಯದ ಜೊತೆಗೆ ಸಮಾಜದಲ್ಲಿ ಸಾಮಾರಸ್ಯದ ಪ್ರತೀಕವಾಗಿವೆ ಎಂದು ತಿಂಥಣಿ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ದೇವರಗೋನಾಲದಲ್ಲಿ ಹೈಯಾಳಲಿಂಗೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ಲಾಘನೀಯ: ದುಬಾರಿ ಕಾಲದಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದು ಬಹಳ ಕಷ್ಟ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ಸಾಲದ ಬಾಧೆಯಿಂದ ಎಷ್ಟೋ ಕುಟುಂಬಗಳು ವಿಘಟಿತವಾಗುತ್ತಿವೆ. ಇದನ್ನು ಮನಗಂಡು ದೇವಸ್ಥಾನ ಸಮಿತಿಯವರು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದರು.
ದೇವರ ಸಾನ್ನಿಧ್ಯದಲ್ಲಿ ಗುರುಹಿರಿಯರ, ಮಠಾದೀಶರಿಂದ ಆಶೀರ್ವಾದ ಪಡೆದ ನೀವು ಧನ್ಯರು. ನಿಮ್ಮ ನವದಾಂಪತ್ಯ ಜೀವನ ಸುಖಕರವಾಗಲಿ. ಸೌಂಸಾರದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ದುಡುಕು, ಕೋಪ ನಿಮ್ಮ ಬದುಕನ್ನು ಹಾಳುಮಾಡುತ್ತದೆ. ಇದರಿಂದ ಎಚ್ಚರವಿರಬೇಕು. ಅತ್ತೆ ಮಾವಂದಿರನ್ನು ಗೌರವದಿಂದ ಕಾಣಬೇಕು. ಸೊಸೆಯಂದಿರನ್ನು ನಿಮ್ಮ ಮಗಳೆಂದು ಭಾವಿಸಿ ಪರಸ್ಪರರು ಅನ್ಯೋನ್ಯತೆಯಿಂದ ಬದುಕು ಸುಂದರ ಮಾಡಿಕೊಳ್ಳಿ ಎಂದು ನವದಂಪತಿಗಳಿಗೂ ಹಾಗೂ ಪಾಲಕರಿಗೂ ಕಿವಿಮಾತು ಹೇಳಿದರು.
ಮಿತ ಸಂತಾನ: ದೇಶದಲ್ಲಿ ಜನಸಂಖ್ಯೆ ನಾಗಾ ಲೋಟದಲ್ಲಿ ಬೆಳೆಯುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನವದಂಪತಿಗಳು ಮಿತ ಸಂತಾನಕ್ಕೆ ಆದ್ಯತೆ ನೀಡಬೇಕು. ಇದು ನಿಮ್ಮ ಸುಖ ಸಂಸಾರಕ್ಕೂ ಕಾರಣವಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ 153 ಜೋಡಿಗಳು ಕಂಕಣ ಭಾಗ್ಯ ಪಡೆದರು. ಹರಗುರು ಚರಮೂರ್ತಿಗಳು ಇದಕ್ಕೆ ಸಾಕ್ಷಿಯಾಗಿದ್ದರು. ದೇವಸ್ಥಾನ ಸಮಿತಿಯಿಂದ ಈ ಬಾರಿ ವರರಿಗೆ ಹಾಲುಮತದ ಸಂಕೇತವಾದ ಕಂಬಳಿ ನೀಡಿರುವುದು ವಿಶೇಷತೆಯಾಗಿದೆ.
ದೇವಸ್ಥಾನದ ಮಾರ್ತಾಂಡಪ್ಪ ಮುತ್ಯಾ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಯುವ ಮುಖಂಡರಾದ ರಾಜಾ ಮೌನೇಶ್ವರ ನಾಯಕ, ರಾಜಾ ಶ್ರೀರಾಮನಾಯಕ, ತಾಪಂ ಅಧ್ಯಕ್ಷೆ ಸಾಬಮ್ಮ ದೇಸಾಯಿ, ಗ್ರಾಪಂ ಉಪಾಧ್ಯಕ್ಷೆ ಅಂಬಸ ನಾಗಪ್ಪ ಕನ್ನೆಳ್ಳಿ, ದೊಡ್ಡದೇಸಾಯಿ, ಮಾನಪ್ಪ ಸಾಹು ಹುದ್ದಾರ, ಶಿವರಾಯ ಕಾಡ್ಲೂರ, ನಾಗಪ್ಪ ಕನ್ನೆಳ್ಳಿ, ಭೀಮರಾಯ ಬೇಟೆಗಾರ, ಬಸಲಿಂಗಯ್ಯ ಹಿರೇಮಠ, ಬಸವಂತ್ರಾಯ ಮಾಸ್ಟರ್, ಪಿಐ ರಾಜಕುಮಾರ ವಾಜಂತ್ರಿ ಇತರರು ವೇದಿಕೆಯಲ್ಲಿದ್ದರು. ಗ್ರಾಪಂ ಅಧ್ಯಕ್ಷ ವೆಂಕಟೇಶ ಬೇಟೆಗಾರ ಸ್ವಾಗತಿಸಿದರು. ಸರ್ಕಾರಿ ಅಭಿಯೋಜಕ ಹೈಯಾಳಪ್ಪ ಬಳಬಟ್ಟಿ ನಿರೂಪಿಸಿದರು. ರಘುವೀರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

