ರಾಯಚೂರು

ಸಿಎಂ ಸಿದ್ದು ಬಗ್ಗೆ ಅತಿ ನಿರೀಕ್ಷೆ ಸಲ್ಲದು

Published On :

ಕ.ಪ್ರ. ವಾರ್ತೆ, ರಾಯಚೂರು, ಮೇ 15
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಂದ ಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಳ್ಳುವಂತಿಲ್ಲ ಎಂದು ಟೀಕಿಸಿರುವ ಜನಸಂಗ್ರಾಮ ಪರಿಷತ್ ಸಂಘಟನೆಯು, ರಾಜ್ಯ ಸಚಿವ ಸಂಪುಟದಲ್ಲಿ ಅಕ್ರಮಗಳ ಆರೋಪ ಎದುರಿಸುತ್ತಿರುವವರಿಗೆ ಸ್ಥಾನ ನೀಡಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.
ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಈಗಾಗಲೇ ಗಣಿ ಅಕ್ರಮ, ಭೂ ಹಗರಣ ಸೇರಿದಂತೆ ನಾನಾ ರೀತಿಯ ಅಕ್ರಮಗಳಲ್ಲಿ ತೊಡಗಿರುವವರಿಗೆ ಟಿಕೆಟ್ ನೀಡಿದ್ದು, ಶಾಸಕರಾಗಿಯೂ ಅವರು ಆಯ್ಕೆಯಾಗಿದ್ದಾರೆ. ಸದ್ಯ ಸಚಿವ ಸ್ಥಾನಕ್ಕೆ ಅಕ್ರಮದ ಆರೋಪ ಎದುರಿಸುತ್ತಿರುವವರೇ ಪೈಪೋಟಿ ನಡೆಸಿದ್ದಾರೆಂದು ದೂರಿದರು.
ಆರೋಪಿತರಿಗೆ ಸಚಿವ ಸ್ಥಾನ ಬೇಡ: ಅಕ್ರಮಗಳ ಆರೋಪ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಸಂತೋಷ ಲಾಡ್, ಅನಿಲ್ ಲಾಡ್ ಸೇರಿದಂತೆ ಅನೇಕರು ಅಕ್ರಮಗಳಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿದ್ದು ಅಂಥವರಿಗೆ ಸಚಿವ ಸ್ಥಾನ ನೀಡದಂತೆ ಒತ್ತಾಯಿಸಿದರು.
ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತದ ಭರವಸೆ ನೀಡಿದ್ದಾರೆ. ಅವರು ನೀಡಿದ ಭರವಸೆ ಕೇವಲ ರಾಜಕೀಯ ಘೋಷಣೆಯಾಗಬಾರದು. ಅವರು ಕ್ರಿಯಾತ್ಮಕವಾಗಿ ತಮ್ಮ ಭರವಸೆ ಜಾರಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಕ್ರಮ ಕೈಗೊಳ್ಳಲಿ: ನ್ಯಾ. ಸಂತೋಷ ಹೆಗ್ಡೆ ಅವರು ನೀಡಿದ ಗಣಿ ಅಕ್ರಮ ಕುರಿತ ವರದಿಯಲ್ಲಿ 700 ಅಧಿಕಾರಿಗಳ ಹೆಸರಿದೆ. ಈ ಪೈಕಿ 200ಕ್ಕೂ ಹೆಚ್ಚಿನ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವ ಗುರುತರ ಆರೋಪ ಎದುರಿಸುತ್ತಿದ್ದು, ಅಂಥ ಅಧಿಕಾರಿಗಳ ವಿರುದ್ಧ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳುವ ಮೂಲಕ ಅವರು ನೀಡಿದ ಭ್ರಷ್ಟಾಚಾರ ಮುಕ್ತ ಆಡಳಿತದ ಸಾಕ್ಷಿ ನೀಡಬೇಕಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಪ್ರಾಮಾಣಿಕರು, ದಕ್ಷರು ಎಂಬುದು ಸುಳ್ಳಲ್ಲ. ಆದರೆ ಅವರು ಕೇಂದ್ರ ಸರ್ಕಾರದ ಮಾರಕ ವಿದೇಶಿ ನೇರ ಬಂಡವಾಳ ಹೂಡಿಕೆಯಂಥ ನೀತಿಗಳನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಜತೆಗೆ ಭ್ರಷ್ಟರಾದವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದರೆ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಅವರ ಭರವಸೆ ಈಡೇರಲಾರದು ಎಂದರು.
ಸ್ವಾರ್ಥ ಬಿಟ್ಟು ಹೈ.ಕ. ಅಭಿವೃದ್ಧಿಗೆ ಮುಂದಾಗಿ: ರಾಜ್ಯದ ಹೈ.ಕ. ಭಾಗದ ಎಲ್ಲ ಕಾಂಗ್ರೆಸ್ ಶಾಸಕರು ಸ್ವಾರ್ಥ ಸಾಧನೆ ಇನ್ನಾದರೂ ಬದಿಗಿರಿಸಿ ಒಗ್ಗಟ್ಟಿನಿಂದ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಪಡೆಯುವತ್ತ ಗಮನಹರಿಸಬೇಕು. ಆ ಮೂಲಕ ಹೈ.ಕ. ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕ ಪರಿಸರ ನಿರ್ಮಿಸುವಂತೆ ಅವರು ಸಲಹೆ ನೀಡಿದರು.
ಹೈ.ಕ. ಭಾಗಕ್ಕೆ 371ನೇ ಕಲಂ(ಜೆ) ತಿದ್ದುಪಡಿಗೆ ಈಗಾಗಲೇ ಕೇಂದ್ರ ಸರ್ಕಾರ ಸಮ್ಮತಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಕಾರ್ಯ ಮಾಡಬೇಕಿದೆ. ಈಗಾಗಲೇ ಕಾನೂನು ರೂಪಿಸುವ ವೇಳೆ ಅನುಸರಿಸಬಹುದಾದ ಮಾನದಂಡಗಳ ಬಗ್ಗೆ ಕೆಲ ವಿಚಾರಗಳನ್ನು ಹೈ.ಕ. ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಈ ಹಿಂದೆಯೇ ಸಲ್ಲಿಸಲಾಗಿದೆ. ಅಂಥ ಅಂಶಗಳ ಬಗ್ಗೆ ಚರ್ಚೆ ನಡೆಸಿ ಸಿಎಂ ಸಿದ್ದರಾಮಯ್ಯ ಮುಂದುವರಿಯಬೇಕೆಂದು ಆಗ್ರಹಿಸಿದರು.
ಪರಿಷತ್‌ನಿಂದ ಜಾಗೃತಿ: ಜನಸಂಗ್ರಾಮ ಪರಿಷತ್ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಷನ್, ಅಕ್ರಮ ಭೂಸ್ವಾಧೀನ ಸೇರಿದಂತೆ ಬಿಜೆಪಿ ಸರ್ಕಾರದ ಸಚಿವರು ನಡೆಸಿದ್ದ ನಾನಾ ರೀತಿಯ ಅಕ್ರಮಗಳ ಬಗ್ಗೆ ಜನರಲ್ಲಿ ಜಾಥಾಗಳ ಮೂಲಕ ಜಾಗೃತಿ ಕಾರ್ಯ ಮಾಡಿದ್ದರಿಂದ ಮತದಾರರು ಅಕ್ರಮಗಳಿಗೆ ಕಾರಣರಾಗಿದ್ದ ಬಿಜೆಪಿ, ಕೆಜೆಪಿ ಮತ್ತು ಬಿಎಸ್ಸಾರ್ ಪಕ್ಷಗಳ ನಾಯಕರನ್ನು ಸೋಲಿಸಿದ್ದಾರೆ ಎಂದು ಹೇಳಿದರು. ಸಂಘಟನೆಯ ಪ್ರಮುಖರಾದ ಖಾಜಾ ಅಸ್ಲಂ ಪಾಷಾ, ಬಂದಪ್ಪಗೌಡ ಐರೆಡ್ಡಿ, ಇಬ್ರಾಹಿಂ, ವೆಂಕಟೇಶ್ ಯಾದವ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.