ಹಟ್ಟಿ ಕಾರ್ಮಿಕರ ಸೇವೆ ಕಾಯಂಗೆ ಒಪ್ಪಿಗೆ
ಕನ್ನಡಪ್ರಭ ವಾರ್ತೆ , ರಾಯಚೂರು , ಮೇ 18
ಹಟ್ಟಿ ಚಿನ್ನದ ಗಣಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 498 ಹಂಗಾಮಿ ಕಾರ್ಮಿಕರ ಸೇವೆ ಕಾಯಮಾತಿಗೆ ಗಣಿ ಕಂಪನಿಯ ಆಡಳಿತ ಸಮ್ಮತಿಸಿದೆ. ಈ ಬಗ್ಗೆ ನ್ಯಾಯಾಲಯದ ಮುಂದೆ ಭರವಸೆ ನೀಡಿದ್ದು, ಕೂಡಲೇ ಈ ಭರವಸೆ ಜಾರಿಗೆ ತರುವಂತೆ ಹಟ್ಟಿ ಚಿನ್ನದ ಗಣಿ ಹಂಗಾಮಿ ಕಾರ್ಮಿಕರ ಸಂಘ ಆಗ್ರಹಿಸಿದೆ.
ಈ ಕುರಿತು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್. ಮಾನಸಯ್ಯ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 498 ಜನ ಹಂಗಾಮಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಕಾಯಂಗೊಳಿಸುವಂತೆ ಗುಲ್ಬರ್ಗದ ಸಂಚಾರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದ ಕಾರ್ಮಿಕರ ಪರ ನ್ಯಾಯಾಲಯ ಆದೇಶ ನೀಡಿದೆ ಎಂದು ಹೇಳಿದರು.
ಜೂ.8ರ ವೇತನ ಕಾಯಂ ನೌಕರರಿಗೆ ನೀಡಿ: ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 498 ಹಂಗಾಮಿ ಕಾರ್ಮಿಕರ ಸೇವೆ ಕಾಯಂಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಆಡಳಿತ ಮಂಡಳಿ ಮೂರು ತಿಂಗಳ ಕಾಲವಕಾಶ ಕೇಳಿದೆ. ಅದರಂತೆ ಈಗಾಗಲೇ ಒಂದೂವರೆ ತಿಂಗಳು ಗತಿಸಿದ್ದರೂ, ಆಡಳಿತ ಈಗಷ್ಟೇ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ನಿಟ್ಟಿನಲ್ಲಿ ಜೂ.8ರ ವೇತನವನ್ನು ಕಾಯಂ ನೌಕರರಿಗೆ ನೀಡುವಂತೆ ಪೂರ್ಣ ಪ್ರಮಾಣದ ವೇತನ ನೀಡಬೇಕೆಂದು ಆಗ್ರಹಿಸಿದರು.
ಸದ್ಯ ಹಂಗಾಮಿ ಕಾರ್ಮಿಕರು ತೀರಾ ಅಪಾಯಕಾರಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಕ್ಷಮತೆ ಹಾಗೂ ದುಡಿಮೆಯಿಂದಾಗಿ ಹಟ್ಟಿ ಗಣಿ ಕಂಪನಿಗೆ ಹತ್ತಾರು ಪ್ರಶಸ್ತಿಗಳು ದೊರೆತಿವೆ ಎಂಬುದನ್ನು ಗಣಿ ಕಂಪನಿ ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ಹಾಗೂ ಶ್ರಮವಹಿಸಿ ಕಳೆದ ಅನೇಕ ವರ್ಷಗಳಿಂದ ದುಡಿಯುತ್ತಿರುವ 498 ಹಂಗಾಮಿ ಕಾರ್ಮಿಕರ ಸೇವೆ ಕಾಯಂಗೆ ಕೂಡಲೇ ಆಡಳಿತ ಮುಂದಾಗುವಂತೆ ಒತ್ತಾಯಿಸಿದರು.
ದೂರು ಸಲ್ಲಿಸುವ ಎಚ್ಚರಿಕೆ: ಜೂ.8ರೊಳಗೆ ಕಾಯಂಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸದಿದ್ದಲ್ಲಿ ಹೊಸದಾಗಿ ರಚನೆಯಾಗಿರುವ ಸರ್ಕಾರದ ಮುಂದೆ ಜೂ. 10ರಂದು ಈ ಸಮಸ್ಯೆ ಪರಿಹಾರಕ್ಕೆ ಮೊರೆ ಹೋಗಲಾಗುತ್ತದೆ. ರಾಜ್ಯದ ಸಿಎಂಗೆ ಈ ಬಗ್ಗೆ ದೂರು ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈವರೆಗೆ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದ ವಿವಿಧ ಖಾಸಗಿ ಸಂಸ್ಥೆಗಳು ಕಾರ್ಮಿಕ ಭವಿಷ್ಯ ನಿಧಿ ಪಾವತಿಸದೇ ನಿರ್ಲಕ್ಷ್ಯ ತೋರಿದ್ದವು. ಆದರೆ ಹಂಗಾಮಿ ಕಾರ್ಮಿಕರ ಸಂಘದ ನಿರಂತರ ಹೋರಾಟದ ಫಲವಾಗಿ ಈಚೆಗೆ 50 ಲಕ್ಷ ಭವಿಷ್ಯನಿಧಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾಯಮಾತಿ ಪ್ರಕ್ರಿಯೆ ಚುರುಕುಗೊಳಿಸಿ: ಹಟ್ಟಿ ಚಿನ್ನದ ಗಣಿ ಕಂಪನಿಯು ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 215 ಕೋಟಿ ಲಾಭ ಗಳಿಸಿದೆ. ಲಾಭದಲ್ಲಿರುವ ಇಂಥ ಉದ್ದಿಮೆಯ ಆಡಳಿತಕ್ಕೆ 498 ಹಂಗಾಮಿ ಕಾರ್ಮಿಕರ ಸೇವೆ ಕಾಯಮಾತಿಯಿಂದ ಆರ್ಥಿಕ ಸಂಕಷ್ಟ ಎದುರಾಗದು. ಹೀಗಾಗಿ ಕೂಡಲೇ ಗಣಿ ಕಂಪನಿಯು ಹಂಗಾಮಿ ಕಾರ್ಮಿಕರ ಬಹು ನಿರೀಕ್ಷೆಯ ಸೇವೆ ಕಾಯಮಾತಿ ಪ್ರಕ್ರಿಯೆ ಚುರುಕುಗೊಳಿಸುವಂತೆ ಒತ್ತಾಯಿಸಿದರು.
ಸದ್ಯ ಗಣಿ ಕಂಪನಿಯ ಕಾಯಂ ನೌಕರರಿರುವ ಸಂಘವು ಹಂಗಾಮಿ ಕಾರ್ಮಿಕರ ಹೋರಾಟಕ್ಕೆ ಎಂದೂ ಬೆಂಬಲಿಸಲಿಲ್ಲ. ವಿರೋಧಿಸುತ್ತಲೇ ಬಂದಿತ್ತು. ಸದ್ಯ ಹಂಗಾಮಿ ಕಾರ್ಮಿಕರ ಸೇವೆ ಕಾಯಂ ನಂತರದಲ್ಲಿಯಾದರೂ ಈ ನೌಕರರೊಂದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಂಗಾಮಿ ಕಾರ್ಮಿಕರ ಸಂಘದ ಪ್ರಮುಖರಾದ ಶಿವುಕುಮಾರ್ ಮಠದ್, ಸಿದ್ರಾಮ, ಚಂದ್ರಶೇಖರ್, ಸೂಗೂರೇಶ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

