ನಿರ್ಮಿತಿ ಕೇಂದ್ರದ ಅಕ್ರಮ ತನಿಖೆ ಹೊಣೆ ಸಿಬಿಐಗೆ
ರಾಯಚೂರು: ರಾಯಚೂರು ನಿರ್ಮಿತಿ ಕೇಂದ್ರದಲ್ಲಿ ನಡೆದಿರುವ ರು. 149 ಕೋಟಿ ಅವ್ಯವಹಾರದ ಬಗ್ಗೆ ಗುಲ್ಬರ್ಗದ ಹೈಕೋರ್ಟ್ ಸಿಬಿಐ ತನಿಖೆಗೆ ಸೂಚನೆ ನೀಡಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ನಿರ್ಮಿತಿ ಕೇಂದ್ರದಲ್ಲಿ ಅವ್ಯವಹಾರ ಎಸಗಿದ ಆರೋಪ ಎದುರಿಸುತ್ತಿರುವ ಈ ಹಿಂದಿನ ಯೋಜನಾ ವ್ಯವಸ್ಥಾಪಕರ ಮನೆ ಮೇಲೆ ಈಚೆಗೆ ದಾಳಿ ಮಾಡಿ ಮಹತ್ವದ ದಾಖಲೆ ವಶಕ್ಕೆ ತೆಗೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಿರ್ಮಿತಿ ಕೇಂದ್ರದ ಈ ಹಿಂದಿನ ಯೋಜನಾ ವ್ಯವಸ್ಥಾಪಕ ಅಯ್ಯೂಬ್ ಅವರ ಮನೆ ಮೇಲೆ ಮೇ 16ರಂದು ದಾಳಿ ಮಾಡಿರುವ ಸಿಬಿಐ ಅಧಿಕಾರಿಗಳು ಮನೆಯಿಂದ ಬ್ಯಾಂಕ್ ಪಾಸ್ಬುಕ್ ಮತ್ತು ಕಚೇರಿಯ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಹಿನ್ನೆಲೆ: ಇಲ್ಲಿನ ನಿರ್ಮಿತಿ ಕೇಂದ್ರದಲ್ಲಿ 2007-08ರಿಂದ ನಂತರದ ಐದು ವರ್ಷಗಳ ಅವಧಿಗೆ ವಹಿಸಿದ ಕಾಮಗಾರಿಗಳಿಗೆ ಪ್ರತಿಯಾಗಿ ಹಣ ಬಳಕೆಯಲ್ಲಿ ಭಾರೀ ಅಕ್ರಮ ನಡೆದಿವೆ ಎಂದು ಗುಲ್ಬರ್ಗದ ಪ್ರಾದೇಶಿಕ ಆಯುಕ್ತರ ಕಚೇರಿ ಅಧಿಕಾರಿಗಳು ಈ ಹಿಂದೆ ತನಿಖೆ ವರದಿ ಸಲ್ಲಿಸಿ ಆಗಿನ ಯೋಜನಾ ವ್ಯವಸ್ಥಾಪಕ ಅಯ್ಯೂಬ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಯ್ಯೂಬ್ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದರು. ಈ ವೇಳೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾಗಿದ್ದ ಅಯ್ಯೂಬ್ ಗುಲ್ಬರ್ಗ ಹೈಕೋರ್ಟ್ಗೆ ಜಾಮೀನು ಕೋರಿ ಮೊರೆ ಹೋಗಿದ್ದರು.
ತನಿಖೆ ಸಿಬಿಐಗೆ: ಏ.10ರಂದು ಈ ಬಗ್ಗೆ ವಿಚಾರಣೆ ಆರಂಭಿಸಿದ ಹೈಕೋರ್ಟ್ ಪೀಠದ ನ್ಯಾಯಾಧೀಶರಾದ ರಮೇಶ ಗುಳವಾಡಿ ಅವರು, ನಿರ್ಮಿತಿ ಕೇಂದ್ರದ ವಿಚಾರಣೆಗೆ ಆಗಿನ ಜಿಲ್ಲಾಧಿಕಾರಿಗಳು ಗೈರು ಹಾಜರಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಯ್ಯೂಬ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಲ್ಲದೇ ಒಟ್ಟಾರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ್ದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಮೇ 16ರಂದು ಹಿಂದಿನ ಯೋಜನಾ ವ್ಯವಸ್ಥಾಪಕ ಅಯ್ಯೂಬ್ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಆದರೆ ನಿರ್ಮಿತಿ ಕೇಂದ್ರದ ಕಚೇರಿ ಮೇಲೆ ದಾಳಿ ಮಾಡುವತ್ತ ನಿರಾಸಕ್ತಿ ತೋರಿದ ಸಿಬಿಐ ಅಧಿಕಾರಿಗಳು ಬೆಂಗಳೂರಿಗೆ ಮರಳಿದ್ದಾರೆ. ಈಚೆಗೆ ಪ್ರಕರಣಕ್ಕೆ ಸಂಬಂಧಿಸಿ ನಿರ್ಮಿತಿ ಕೇಂದ್ರದ ಕಚೇರಿಯಿಂದ ಸೂಕ್ತ ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆಂದು ಗೊತ್ತಾಗಿದ್ದು, 2007-08ರಿಂದ ಐದು ವರ್ಷಗಳ ಅವಧಿಯಲ್ಲಿ ನಡೆದ ರು. 149 ಕೋಟಿ ಅಕ್ರಮದ ಜತೆಜತೆಗೆ ಸಿಬಿಐ ಅಧಿಕಾರಿಗಳು ನಿರ್ಮಿತಿ ಕೇಂದ್ರದ ಆರಂಭದಿಂದ ಇದುವರೆಗಿನ ಎಲ್ಲ ಅಕ್ರಮಗಳ ತನಿಖೆ ನಡೆಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಅದರಂತೆ 1995ರಿಂದ ಈವರೆಗೆ ನಿರ್ಮಿತಿ ಕೇಂದ್ರಕ್ಕೆ ವಹಿಸಿದ ಎಲ್ಲ ಕಾಮಗಾರಿಗಳು, ಬಿಡುಗಡೆಯಾದ ಅನುದಾನ ಸೇರಿದಂತೆ ಎಲ್ಲ ಅಗತ್ಯ ಮಾಹಿತಿ ಕಲೆಹಾಕಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ನಿರ್ಮಿತಿ ಕೇಂದ್ರದಿಂದ ದಾಖಲೆ ಒದಗಿಸಲು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿರುವುದು ಅಧಿಕಾರಿಗಳ ವಲಯದಲ್ಲಿ ಆತಂಕ ತಂದಿದೆ.
ಪತ್ತೆಗೆ ನಿರ್ಧಾರ: ಇದುವರೆಗೆ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಎಲ್ಲ ಜಿಲ್ಲಾಧಿಕಾರಿಗಳ ಅವಧಿಯಲ್ಲಿ ನಡೆದ ಅನುದಾನದ ಬಳಕೆಯ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸಿಬಿಐ ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ.
ಗುಲ್ಬರ್ಗದ ಪ್ರಾದೇಶಿಕ ಆಯುಕ್ತರ ಕಚೇರಿಯು ಕೇವಲ ಅಕ್ರಮಕ್ಕೆ ಸಂಬಂಧಿಸಿ ಯೋಜನಾ ವ್ಯವಸ್ಥಾಪಕರು ಹಾಗೂ ಕಿರಿಯ ಎಂಜಿನಿಯರ್ರನ್ನು ಹೊಣೆಯಾಗಿಸಿದೆ. ಆದರೆ ಸಿಬಿಐ ಅಧಿಕಾರಿಗಳು ಅಕ್ರಮದ ಹಿಂದಿನ ಕಾಣದ ಕೈಗಳ ಪತ್ತೆಗೂ ನಿರ್ಧರಿಸಿರುವುದು ಬಯಲಾಗಿದೆ.
ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಕಚೇರಿಯು 7 ಅಂಶಗಳ ಆಧಾರದಲ್ಲಿ ತನಿಖೆ ನಡೆಸಿದ್ದು, ಆ ವೇಳೆ ರು. 32ಕೋಟಿ ಮುಂಗಡ ಹಣ ನೀಡುವ ಮೂಲಕ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದು, ಅಕ್ರಮವಾಗಿ 21 ಬ್ಯಾಂಕ್ ಖಾತೆಗಳ ನಿರ್ವಹಣೆ, ದೂರವಾಣಿ ವೆಚ್ಚ, ಪ್ರವಾಸಕ್ಕೆ ನಿಗದಿಗಿಂತ ಹೆಚ್ಚಿನ ಮೊತ್ತದ ಬಳಕೆ, ಸಿಬ್ಬಂದಿ ಹೆಸರಿನಲ್ಲಿ ಕೋಟ್ಯಂತರ ರು. ಮುಂಗಡ ಹಣ ಪಾವತಿ, ಪ್ರವಾಹ ಸಂದರ್ಭದಲ್ಲಿ ಸ್ವಂತ ಖಾತೆಯಿಂದ ಆಸರೆ ಮನೆ ನಿರ್ಮಾಣ ಕಾಮಗಾರಿಗೆ ಮಂಜೂರಾದ ರು. 14ಕೋಟಿ ನಿರ್ವಹಣೆಯಂಥ ಅಕ್ರಮಗಳು ಸೇರಿ ಒಟ್ಟು ರು. 149 ಕೋಟಿ ಅಕ್ರಮ ಬಯಲಾಗಿದ್ದವು.
ಸ್ಥಗಿತ: ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ನಡೆದಿರುವ ಅಕ್ರಮದ ಹಿನ್ನೆಲೆ ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಕಚೇರಿಯು ನಿರ್ಮಿತಿ ಕೇಂದ್ರದ ಸಿಬ್ಬಂದಿಗೆ ವೇತನ ಪಾವತಿಸದಂತೆ ಆದೇಶಿಸಿದೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ವೇತನವಿಲ್ಲದೇ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪರದಾಡುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

