ವಿವಿಧ ಪ್ರಸ್ತಾವನೆಗಳ ಜಾರಿಗೆ ಸಿಎಂಗೆ ಒತ್ತಾಯ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 21
ಕುಲಕಸುಬಿನಲ್ಲಿ ತೊಡಗಲು ನೀಡುವ ಸಾಲದ ಮೊತ್ತವನ್ನು 25 ಸಾವಿರದಿಂದ 50 ಸಾವಿರಕ್ಕೆ ಏರಿಕೆ, ಮಡಿವಾಳ ಸಮಾಜದವರಿಗೆ ವೃತ್ತಿ ಕೈಗೊಳ್ಳಲು ಉಚಿತ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳ ಜಾರಿಗೆ ಪ್ರಾಶಸ್ತ್ಯ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಗಮನ ಸೆಳೆಯುವುದಾಗಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಗಸ್ತಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ವಿವಿಧ ಹೊಸ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ ಮೂಲಕ ಪ್ರಸ್ತಾವನೆಗಳ ಜಾರಿಗೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಇಲಾಖೆ ಮುಂದಿದೆ ಪ್ರಸ್ತಾವನೆ: ಇದುವರೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕುಲಕಸುಬಿನಲ್ಲಿ ತೊಡಗುವವರಿಗೆ 25 ಸಾವಿರವರೆಗೆ ಸಾಲ ನೀಡಲಾಗುತ್ತಿದ್ದು, ಈ ಪ್ರಮಾಣವನ್ನು 50 ಸಾವಿರಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹಣಕಾಸು ಇಲಾಖೆಯ ಮುಂದೆ ಪ್ರಸ್ತಾವನೆಯಿದೆ. ಅದರ ಮಂಜೂರಾತಿ ಮತ್ತು ಜಾರಿಗೆ ಸಿಎಂ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಅದೇ ರೀತಿ ಮಡಿವಾಳ ಸಮಾಜಕ್ಕೆ ಉಚಿತವಾಗಿ ಇಸ್ತ್ರಿ ಪೆಟ್ಟಿಗೆ, ಟೇಬಲ್ ಹಾಗೂ ಕುರ್ಚಿ ವಿತರಿಸುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ನೆರವಾಗಬೇಕು. ಹಾಗೆಯೇ ಸಾಲ ನೀಡಿಕೆ ಮೂಲಕ ಅವರಿಗೆ ಮೊಪೆಡ್ ಖರೀದಿಗೆ ನೆರವಾಗಬೇಕೆಂದು ಅವರು ಒತ್ತಾಯಿಸಿದರು.
ಸವಿತಾ ಸಮಾಜಕ್ಕೆ ನೆರವಾಗಿ: ಸವಿತಾ ಸಮಾಜದ ಗ್ರಾಮೀಣ ಭಾಗದ ಜನತೆಗೆ ಕುಟೀರ ನಿರ್ಮಿಸಿ ಕೊಟ್ಟು ಅವರ ಕುಲಕಸುಬು ಮುಂದುವರಿಸಲು ಅವಕಾಶ ಕಲ್ಪಿಸಬೇಕು. ಅದೇ ರೀತಿ ಪಟ್ಟಣ ಮತ್ತು ನಗರ ಪ್ರದೇಶದಲ್ಲಿನ ಸವಿತಾ ಸಮಾಜದವರಿಗೆ ಕುರ್ಚಿ ಒದಗಿಸುವ ಮೂಲಕ ಕ್ಷೌರಿಕ ವೃತ್ತಿಯಲ್ಲಿ ಬದುಕು ಕಂಡುಕೊಳ್ಳಲು ನೆರವಾಗುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.
ತಾವು ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ದೇವರಾಜು ಅರಸ್ ಭವನ ನಿರ್ಮಾಣ, ಆಧುನಿಕ ವೃತ್ತಿ ಕೌಶಲ್ಯ ತರಬೇತಿ ನೀಡಿಕೆ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಅಂಥ ಎಲ್ಲ ಮಹತ್ವಾಕಾಂಕ್ಷೆ ಯೋಜನೆಗಳ ಜಾರಿಗೆ ಹಾಲಿ ಕಾಂಗ್ರೆಸ್ ಸರ್ಕಾರ ಮುಂದಾಗುವ ಮೂಲಕ ಹಿಂದುಳಿದವರ ಏಳಿಗೆಗೆ ಶ್ರಮಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು.
ತರಬೇತಿ ಕೇಂದ್ರ ತೆರೆಯಲು ಒತ್ತಾಯ: ಜಿಲ್ಲಾ ಕೇಂದ್ರಗಳಲ್ಲಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳನ್ನು ತೆರೆದು ಹಿಂದುಳಿದ ವರ್ಗಗಳಿಗೆ ಸೇರಿದವರ ಪ್ರತಿಭಾವಂತರನ್ನು ಪರೀಕ್ಷೆಗೆ ಅಣಿಗೊಳಿಸುವುದು ತಮ್ಮ ಆಶಯವಾಗಿತ್ತು. ಆ ಬಗ್ಗೆ ನಿಗಮದಿಂದ ಜಾರಿಗೆ ತರಬೇಕಾದ ಕಾರ್ಯಕ್ರಮದ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ಅವರು ಸ್ಥಾನ ಅಲಂಕರಿಸುತ್ತಿದ್ದಂತೆಯೇ ಸಾಲ ಮನ್ನಾ ಘೋಷಿಸಿದ್ದಾರೆ, ಅದಕ್ಕೆ ಸ್ವಾಗತವಿದೆ. ಆದರೆ ಕಳೆದ ಸರ್ಕಾರದ ಅವಧಿಯಲ್ಲಿ ಆಗಿನ ಸಿಎಂ ಜಗದೀಶ್ ಶೆಟ್ಟರ್ ಅವರು ಬಜೆಟ್ನಲ್ಲಿಯೇ ಹಿಂದುಳಿದ ವರ್ಗದವರು ಪಡೆದಿದ್ದ ಒಟ್ಟು 140 ಕೋಟಿ ಸಾಲ ಮನ್ನಾ ಪ್ರಕಟಿಸಿದ್ದರು ಎಂದು ತಿಳಿಸಿದರು.
ಸಿಬ್ಬಂದಿ ಕೊರತೆ: ತಾವು ನಿಗಮದ ಅಧ್ಯಕ್ಷರಾಗಿ ನಾಲ್ಕು ತಿಂಗಳು ಕಾರ್ಯನಿರ್ವಹಿಸಿದ್ದು ಇಷ್ಟೊಂದು ಕಡಿಮೆ ಅವಧಿಯಲ್ಲಿ 13 ಜಿಲ್ಲೆಗಳ ಪ್ರವಾಸ ಕೈಗೊಂಡು ಆಯಾ ಭಾಗದಲ್ಲಿನ ಹಿಂದುಳಿದ ವರ್ಗದವರ ಸ್ಥಿತಿಗತಿ ಅರಿಯುವ ಪ್ರಯತ್ನ ಮಾಡಿದ್ದಾಗಿ ತಿಳಿಸಿದ ಅವರು, ನಿಗಮದ ವಿವಿಧ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿತ್ತು. ಒಟ್ಟು 250ಕ್ಕೂ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಅಗತ್ಯತೆಯಿದ್ದು ಆ ಪೈಕಿ ತಮ್ಮ ಅವಧಿಯಲ್ಲಿ 66 ಜನ ಸಿಬ್ಬಂದಿ ನೇಮಕಾತಿಗೆ ಹಣಕಾಸು ಇಲಾಖೆ ಸಮ್ಮತಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಬಂಡೇಶ ವಲ್ಕಂದಿನ್ನಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

