ರಾಯಚೂರು

ಇಕ್ಕಟ್ಟಲ್ಲೂ ರಸ್ತೆ ಸಂಚಾರ ಕಷ್ಟವಿದೆ...!

Published On :

ಕನ್ನಡಪ್ರಭ ವಾರ್ತೆ ,  ಮುದಗಲ್ ,  ಮೇ 25
ಲೋಕೊಪಯೋಗಿ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಅತಿಕ್ರಮವಾಗುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಸುಮಾರು 30 ಮೀಟರ್ ಅಗಲ ಇರಬೇಕಾದ ನೇರ ರಸ್ತೆಗಳು ಅತಿಕ್ರಮಣಕ್ಕೆ ತುತ್ತಾಗಿ ಕೇವಲ 10 ರಿಂದ 15 ಮೀಟರಷ್ಟು ಇರುವುದು ಕಂಡುಬರುತ್ತಿದೆ. ಇನ್ನು ಜಿಪಂ ವ್ಯಾಪ್ತಿಯ ಗ್ರಾಮೀಣ ರಸ್ತೆಗಳಂತೂ ಇದಕ್ಕೆ ಹೊರತಾಗಿಲ್ಲ. 20 ಮೀಟರ್ ಇರುವ ರಸ್ತೆಗಳು ಕೇವಲ ಹತ್ತು ಅಡಿಗೆ ಮೀಸಲಾಗಿರುವುದು ಕಂಡು ಬರುತ್ತಿದೆ. ರಸ್ತೆ ಪಕ್ಕದ ಜಮಿನುದಾರರು ಪ್ರತಿವರ್ಷ ಒಡ್ಡು ಹಾಕಿ ರಸ್ತೆಯನ್ನ ಅತಿಕ್ರಮಿಸುತ್ತಿರುವದು ಸಾಮಾನ್ಯವಾಗಿದೆ.
ಇದರಿಂದ ವಾಹನಗಳು ಸಂಚರಿಸಲಿಕ್ಕಾಗದೆ ಅನೇಕ ಅಪಘಾತಕ್ಕೂ ಕಾರಣವಾಗುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.
ರಸ್ತೆ ಅತಿಕ್ರಮಣ: ಪಟ್ಟಣದ ಮೂಲಕ ಹಾದು ಹೋಗಿರುವ ಹೈದರಾಬಾದ್-ಬೆಳಗಾವಿ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಅನೇಕ ಅಕ್ರಮ ಕಟ್ಟಡಗಳನ್ನು ಒಂದು ವರ್ಷದ ಹಿಂದೆ ತೆರವುಗೊಳಿಸಲಾಯಿತು. ಆದರೆ ಇತ್ತೀಚೆಗೆ ಉನ್ನತ ದರ್ಜೆಗೇರಿರುವ ಕನ್ನಾಪುರಹಟ್ಟಿ, ಆಶಿಹಾಳ, ಬೊಮ್ಮನಾಳ ಹಾಗೂ ನಾಗರಹಾಳ ಗ್ರಾಮಗಳ ಮೂಲಕ ಹಾದು ಹೋಗುವ ಮಾನವಿ-ರಾಮದುರ್ಗ ರಸ್ತೆ ಅತಿಕ್ರಮಣಕ್ಕೆ ತುತ್ತಾಗಿದೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅಳತೆ: ಮುಖ್ಯರಸ್ತೆ ಮಧ್ಯಭಾಗದಿಂದ ಎಡಕ್ಕೆ 15 ಮೀಟರ್ ಮತ್ತು ಬಲಕ್ಕೆ 15 ಮೀಟರ್ ಒಟ್ಟು 30 ಮೀಟರ್ ವಿಸ್ತೀರ್ಣ ಇರಬೇಕು ಎಂದು ದಾಖಲೆಗಳು ತಿಳಿಸುತ್ತವೆ. ಇದರಲ್ಲಿ ಮಧ್ಯದಿಂದ ಒಟ್ಟು 7.2 ಮೀಟರ್ ಡಾಂಬರಿಕರಣವಾದರೆ ಉಳಿದ ರಸ್ತೆ ಸಂಚಾರಕ್ಕೆ (ವಾಕ್ ವೇ) ಮೀಸಲಿಡಲಾಗುತ್ತದೆ. ಆದರೆ ಕಚೇರಿಯ ದಾಖಲೆಗಳಲ್ಲಿ ಮಾತ್ರ ಈ ರಸ್ತೆಗಳ ಅಳತೆ ತೋರಿಸುತ್ತಿರುವ ಅಧಿಕಾರಿಗಳಿಗೆ ವಾಸ್ತವವಾಗಿ ರಸ್ತೆ ಎಲ್ಲಿದೆ? ಹೇಗಿದೆ? ಎಂಬ ಬಗ್ಗೆಯೇ ಸರಿಯಾದ ಮಾಹಿತಿ ಇಲ್ಲದಿರುವುದು ಕಂಡುಬರುತ್ತಿದೆ.
ಇಕ್ಕಟ್ಟು ರಸ್ತೆ: ಪಟ್ಟಣದಿಂದ ನಾಗರಹಾಳಗೆ ಸೇರುವ ಮುಖ್ಯ ರಸ್ತೆಗೆ ಬೊಮ್ಮಾನಾಳ ಹತ್ತೀರ ಜಮೀನುಗಳ ಮಾಲೀಕರು ರಸ್ತೆಯ ಡಾಂಬರ್ ಮುಚ್ಚುವಷ್ಟು ಮಣ್ಣಿನ ಒಡ್ಡು ಹಾಕಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಲ್ಲದೆ ಖೈರವಾಡಗಿ ಹತ್ತೀರ ರಸ್ತೆಗೆ ದೊಡ್ಡ ಕಲ್ಲುಗಳನ್ನು ಹಾಕಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ರಸ್ತೆ ಇಕ್ಕಾಟಾಗುವಂತೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.
ತಾಲೂಕಿನಾದ್ಯಂತ ಸಾರಿಗೆ ರಸ್ತೆಗಳು ಪಕ್ಕದ ಹೊಲದವರಿಂದ ಅತಿಕ್ರಮವಾಗಿರುವದು ಹೆಚ್ಚು ಕಂಡು ಬರುತ್ತಿದೆ. ಆದರೆ ಇಲಾಖೆಗೆ ಸಂಬಂಧಿಸಿದ ರಸ್ತೆ ಅಳತೆ ಮಾಡಿಸಲು ತಹಸೀಲ್ದಾರರಿಗೆ ಅರ್ಜಿ ನೀಡಿ ಸರ್ವೇ ಮಾಡಿಸಲು ಯೋಚಿಸಲಾಗುತ್ತಿದೆ ಎಂದು ಮಹಾಂತೇಶ ಕಣ್ಣೂರು ಎಇಇ ಲೋಕೋಪಯೋಗಿ ಇಲಾಖೆ ಲಿಂಗಸ್ಗೂರು ತಿಳಿಸುತ್ತಾರೆ.

-ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.