ರಾಯಚೂರು

'ಮಕ್ಕಳ ಬೌದ್ಧಿಕ ಗುಣಮಟ್ಟಕ್ಕೆ ಆದ್ಯತೆ ನೀಡಿ'

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 27
ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ವಿದ್ಯಾರ್ಥಿಗಳ ಪ್ರವೇಶದ ಪೈಪೋಟಿಯ ಬದಲಾಗಿ ಮಕ್ಕಳ ಬೌದ್ಧಿಕ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ಕರೆ ನೀಡಿದರು.
ಖಾಸಗಿ ವಸತಿಗೃಹವೊಂದರಲ್ಲಿ ಖಾಸಗಿ ಶಾಲಾ ಮತ್ತು ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಇತ್ತೀಚಿಗೆ ವ್ಯಾಪಾರೀಕರಣಗೊಳ್ಳುತ್ತಿವೆ. ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಅವ್ಯಾಹತವಾಗಿ ಡೊನೇಷನ್ ಸಂಗ್ರಹಿಸುತ್ತಿವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕಲಂ 371(ಜೆ) ಶೀಘ್ರದಲ್ಲಿಯೇ ನೂತನ ಸರ್ಕಾರ ಅನುಷ್ಠಾನಕ್ಕೆ ತರಲಿದ್ದು ಇದರ ಸದುಪಯೋಗವನ್ನು ಎಲ್ಲರೂ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಸ್ಯೆ ಅವಲೋಕಿಸಿ ನಿಯಮ ರಚಿಸಿ: ಒಕ್ಕೂಟದ ಬೈಲಾ ರಚಿಸುವಾಗ ಕಿರಿಯ, ಹಿರಿಯ, ಪ್ರೌಢ, ಕಾಲೇಜು ಮಟ್ಟದ, ಅನುದಾನ ರಹಿತ ಹಾಗೂ ಅನುದಾನ ಸಹಿತ ಆಡಳಿತ ಮಂಡಳಿಯ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಸಮಸ್ಯೆಗಳ ಬಗ್ಗೆ ಅವಲೋಕಿಸಿ ನಿಯಮಗಳನ್ನು ರಚಿಸಬೇಕೆಂದು ಬಾದರ್ಲಿ ಸಲಹೆ ನೀಡಿದರು.
ಇದಕ್ಕೂ ಪೂರ್ವದಲ್ಲಿ ಒಕ್ಕೂಟದ ಸಭೆಯಲ್ಲಿ ಕಾರ್ಯದರ್ಶಿ ವೈ.ನರೇಂದ್ರನಾಥ ಮಾತನಾಡಿ, 2013- 14ರ ಸಾಲಿನ ಪ್ರಥಮ ಸಭೆ ಇದಾಗಿದ್ದು, ಆರು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಈ ಒಕ್ಕೂಟ ಜಿಲ್ಲೆಗೆ ಮಾದರಿಯಾಗಿದೆ. ಒಂದೇ ಸೂರಿನಡಿ ಎಲ್ಲ ಶಾಲಾ- ಕಾಲೇಜುಗಳನ್ನು ತರುವ ಉದ್ದೇಶ ಈಡೇರಿದೆ.
ವಿದ್ಯಾ ಸಂಸ್ಥೆಗಳನ್ನು ಕೇವಲ ದುಡ್ಡಿಗಾಗಿ ನಡೆಸುವುದಿಲ್ಲ. ಸಾಮಾಜಿಕ ತುಡಿತ ಹಾಗೂ ಸೇವಾ ಮನೋಭಾವನೆ ಹೊಂದಿರುವವರು ಇಂತಹ ಸಾಹಸಕ್ಕೆ ಕೈ ಹಾಕುತ್ತಾರೆ. ಒಮ್ಮತ, ಐಕ್ಯತೆಯಿಂದ ಒಕ್ಕೂಟದ ಸದಸ್ಯರು ಕಾರ್ಯನಿರ್ವಹಿಸಿ ಎದುರಾಗುವ ಸಮಸ್ಯೆಗಳಿಗೆ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳಬೇಕೆಂದು ಮನವಿ ಮಾಡಿದರು.
ಅನುಭವಿ ಶಿಕ್ಷಕರು ಅವಶ್ಯ: ಸಹನಾ ಎಬಿಸಿ ಮಾಂಟೆಸ್ಸರಿ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಶಿವರಾಜ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪೈಪೋಟಿಯಲ್ಲಿ ಮುಂದುವರಿಯಬೇಕೆಂದರೆ ಉತ್ತಮ ಗುಣಮಟ್ಟದ ತರಬೇತಿ ಹೊಂದಿದ ಶಿಕ್ಷಕರು ಅವಶ್ಯ. ಮೈಸೂರಿನಲ್ಲಿ ಆರ್ಐ ಸಂಸ್ಥೆಯವರು ಆಂಗ್ಲ ಮಾಧ್ಯಮದಲ್ಲಿ ಆರಂಭಿಸಿರುವ ಬಿಇಡಿ ಸಂಸ್ಥೆಯನ್ನು ಒಕ್ಕೂಟ ವತಿಯಿಂದ ಸಿಂಧನೂರು ತಾಲೂಕಿನಲ್ಲಿ ಆರಂಭಿಸಿದರೆ ಇನ್ನಷ್ಟು ಪರಿಣಾಮಕಾರಿಯಾದ ಫಲಿತಾಂಶವನ್ನು ನಿರೀಕ್ಷಿಸಬಹುದು. ಶಿಕ್ಷಣ ಹಕ್ಕು ಕಾಯ್ದೆ, ಶಾಲಾ- ಕಾಲೇಜುಗಳ ಏಕರೂಪದ ಕಾರ್ಯನಿರ್ವಹಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ಟಿಇ ಕಾಯ್ದೆಯಲ್ಲಿ ಗೊಂದಲ: ಮೀನಾಕ್ಷಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ಯಾಮಸುಂದರ ಕೀರ್ತಿ ಮಾತನಾಡಿ, ಆರ್ಟಿಇ ಕಾಯ್ದೆಯಲ್ಲಿ ಗೊಂದಲಗಳಿವೆ. ತಮ್ಮ ಶಾಲೆಯ 7 ವಿದ್ಯಾರ್ಥಿಗಳು ಈ ನಿಯಮದಡಿ ಆಯ್ಕೆಯಾದರೆ ಅವರಲ್ಲಿ ಮೂವರಿಗೆ ಮಾತ್ರ ಹಣ ಪಾವತಿಯಾಗಿದೆ. ಉಳಿದ ನಾಲ್ವರು ವಿದ್ಯಾರ್ಥಿಗಳ ಪಾಲಕರಿಗೆ ಒಕ್ಕೂಟದವರು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿ ಹೇಳಬೇಕು. ಇಲ್ಲದಿದ್ದರೆ ಹಣ ಕೊಡಿಸುವ ಏರ್ಪಾಡು ಮಾಡಬೇಕು ಎಂದರು.
ಸರ್ಕಾರಿ ನಿಯಮ ಪಾಲನೆಯಾಗುತ್ತಿಲ್ಲ: ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ. ಹಂಪಣ್ಣ ಮಾತನಾಡಿ, ಪದವಿ ಪೂರ್ವ ಕಾಲೇಜುಗಳು ತಾಲೂಕಿನಲ್ಲಿ ನಾಯಿ ಕೊಡೆಯಂತೆ ಬೆಳೆಯುತ್ತಿವೆ. ಆದರೆ ಸರ್ಕಾರಿ ನಿಯಮಗಳ ಪ್ರಕಾರ ಸಂಸ್ಥೆಗಳು ನಡೆಯುತ್ತಿಲ್ಲ. ಸರ್ಕಾರಿ ಪಪೂ ಕಾಲೇಜುಗಳು ಬೆ. 10ರಿಂದ ಮ.4 ರವರೆಗೆ ಕಟ್ಟುನಿಟ್ಟಾಗಿ ನಡೆಯುತ್ತಿವೆ. ಆದರೆ ಖಾಸಗಿ ಸಂಸ್ಥೆಗಳು ಬೆ. 8ಕ್ಕೆ ಆರಂಭಗೊಂಡು 12ಕ್ಕೆ ಮುಕ್ತಾಯಗೊಳ್ಳುತ್ತವೆ. ಬಸ್ಗಳು ಬೆಳಗಿನ ಜಾವ ಸರಿಯಾಗಿ ಸಿಗದೆ ಇರುವುದರಿಂದ ಬಹುತೇಕ ಗ್ರಾಮಗಳ ವಿದ್ಯಾರ್ಥಿಗಳು 8.30 ಅಥವಾ 9ಕ್ಕೆ ಬರುತ್ತಾರೆ. ಕೇವಲ 3 ಅಥವಾ 4 ತಾಸುಗಳಲ್ಲಿ ಅದೆಂಥಹ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಟೀಕಿಸಿದರು.
ಜ್ಞಾನಜ್ಯೋತಿ ಕಾಲೇಜಿನ ಅಧ್ಯಕ್ಷ ವಿಷ್ಣುವರ್ಧನ ರೆಡ್ಡಿ, ವಿಕಾಸ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುನೇಶ್ವರಾವ, ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಮರಪ್ಪ ಮೈಲಾರ, ಅರುಣೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರೇಶ ಅಗ್ನಿ, ಇಖ್ರಾ ಸಂಸ್ಥೆಯ ಆಯಿಷಾ ಬೇಗಂ, ಆನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗೌತಮ ಮೆಹ್ತಾ ಒಕ್ಕೂಟದ ಜವಾಬ್ದಾರಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೇರೆಕಡೆಗೆ ವಲಸೆ ಹೋಗುವ ಕಡ್ಡಾಯ ಶಿಕ್ಷಣ ಕಾಯ್ದೆ, ಶಿಕ್ಷಕರ ಕೊರತೆ, ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಹೇಳದೆ ಕೇಳದೆ ಮಧ್ಯದಲ್ಲಿ ಸಂಸ್ಥೆ ಬಿಟ್ಟು ಬೇರೊಂದು ಸಂಸ್ಥೆಗೆ ಹೋಗುವ ಹಲವಾರು ವಿಚಾರಗಳ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಉಪಾಧ್ಯಕ್ಷ ಎಸ್.ಬಸವರಾಜ ಉಪಸ್ಥಿತರಿದ್ದರು. ವಿವಿಧ ಶಾಲಾ- ಕಾಲೇಜುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.