ಚಿಗುರೊಡೆದ ಮುದಗಲ್ ತಾಲೂಕು ಕೇಂದ್ರ ಕನಸು
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 29
ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ನೂತನ ತಾಲೂಕು ಕೇಂದ್ರಗಳನ್ನು ಮರು ಪರಿಶೀಲನೆ ಮಾಡಲಾಗುವುದೆಂಬ ನಿರ್ಧಾರ ಪ್ರಕಟಿಸಿದ್ದು, ತಾಲೂಕು ಕೇಂದ್ರ ಘೋಷಣೆಯಿಂದ ವಂಚಿತವಾಗಿದ್ದ ಮುದಗಲ್ ತಾಲೂಕು ರಚನೆಯ ಕನಸೀಗ ಚಿಗುರೊಡೆದಂತಾಗಿದೆ.
ಲಿಂಗಸ್ಗೂರು ತಾಲೂಕಿನಲ್ಲಿ ಅತ್ಯಂತ ದೊಡ್ಡ ಪಟ್ಟಣವಾಗಿರುವ ಮುದಗಲ್ ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಅವಧಿಯಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತಾಳಿ ಮುದಗಲ್ಅನ್ನು ಮರೆತು ಬಿಟ್ಟಿತ್ತು.
ಆಶಾಭಾವನೆ: ಇದರಿಂದ ಅನೇಕ ವರ್ಷಗಳಿಂದ ತಾಲೂಕು ಕೇಂದ್ರವಾಗಲಿದೆ ಎಂದುಕೊಂಡಿದ್ದ ನಾಗರಿಕರ ಕನಸಿಗೆ ಎಳ್ಳು ನೀರು ಬಿಟ್ಟಂತಾಗಿತ್ತು. ಆದರೆ ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾಲೂಕು ರಚನೆಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದಿದ್ದರಿಂದ ಪಟ್ಟಣದ ನಾಗರಿಕರಲ್ಲಿ ಆಶಾಭಾವ ಮೂಡುವಂತಾಗಿದೆ.
ನಿರ್ಲಕ್ಷ್ಯಕ್ಕೆ ಬಲಿ: ಲಿಂಗಸ್ಗೂರು ತಾಲೂಕ ಕೇಂದ್ರದಿಂದ 20 ಕಿಮೀ ಹಾಗೂ ನೂತನವಾಗಿ ಘೋಷಿಸಲ್ಪಟ್ಟ ಮಸ್ಕಿ ತಾಲೂಕ ಕೇಂದ್ರದಿಂದ 27 ಕಿಮೀ ದೂರಲ್ಲಿರುವ ಮುದಗಲ್ ಪಟ್ಟಣ ಶೈಕ್ಷಣಿಕ, ಆರ್ಥಿಕ, ಭೌಗೋಳಿಕವಾಗಿ ಸಾಕಷ್ಟು ವಿಶಾಲವಾಗಿದ್ದರೂ ತಾಲೂಕು ಕೇಂದ್ರವಾಗದೆ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತ ಬಂದಿದೆ. ಇದಕ್ಕೆ ಚುನಾಯಿತ ಶಾಸಕರ ಬೇಜವಬ್ದಾರಿ ಅಲ್ಲದೆ ಪ್ರಗತಿಪರ ಸಂಘಟನೆಗಳು ಸರ್ಕಾರದ ಗಮನ ಸೆಳೆಯಲು ಹಿಂದೆ ಬಿದ್ದಿರುವುದೂ ಕಾರಣ ಎನ್ನಲಾಗುತ್ತಿದೆ.
ಹೀಗಿದೆ ಪಟ್ಟಣದ ಸ್ಥಿತಿಗತಿ: ಸ್ಥಳೀಯವಾಗಿ ಸಾಕಷ್ಟು ಶಿಲೆ ಹಾಗೂ ಖನಿಜ ಸಂಪತ್ತು ತುಂಬಿಕೊಂಡಿರುವ ಮುದಗಲ್ ಪಟ್ಟಣ ಗ್ರಾನೈಟ್ ಕಲ್ಲಿನಿಂದಾಗಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಗುರುತಿಸಿಕೊಂಡಿದೆ. ಅಲ್ಲದೆ ಪಪಂ ಕೇಂದ್ರಸ್ಥಾನವನ್ನು ಹೊಂದಿದ್ದು ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು 9 ಗ್ರಾಪಂ, 3 ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, 32 ಸಿಬ್ಬಂದಿಗಳಿರುವ ಪೊಲೀಸ್ ಠಾಣೆ, ವಿಶಾಲವಾದ ಎಪಿಎಂಸಿ ಉಪ ಮಾರುಕಟ್ಟೆ, ನಾಡ ತಹಸೀಲ್ದಾರ್ ಕಚೇರಿ ಹಾಗೂ ಶೈಕ್ಷಣಿಕವಾಗಿ ಜವಾಹರ ನವೋದಯ ವಿದ್ಯಾಲಯ ಸೇರಿದಂತೆ ಶಾಲಾ- ಕಾಲೇಜುಗಳನ್ನು ಒಳಗೊಂಡಿದೆ.
ಇದರಲ್ಲಿ ಒಟ್ಟು 58 ಕಂದಾಯ ಗ್ರಾಮಗಳು ಹಾಗೂ ತಾಂಡ ಸೇರಿ ಸುಮಾರು 36 ಕಿಮೀ ದೂರದ ಹಳ್ಳಿಗಳ ಜನರಿಗೆ ವ್ಯಾಪಾರ- ವಹಿವಾಟಿನ ಕೇಂದ್ರಸ್ಥಾನವಾಗಿದೆ. ಆದರೆ ಇಷ್ಟಿದ್ದರೂ ತಾಲೂಕು ಕೇಂದ್ರದಿಂದ ವಂಚಿತವಾಗಿರುವುದು ದುರದೃಷ್ಟಕರ.
ಸದ್ಯ ಸರ್ಕಾರದಿಂದ ಮರುಪರಿಶೀಲನೆಯ ಭರವಸೆ ಸಿಕ್ಕಿದ್ದರಿಂದ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಗತಿಪರ ಸಂಘಟನೆಗಳು, ಈ ಭಾಗದ ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ. ಆದರೆ ಈ ಬಾರಿಯಾದರೂ ಮುದಗಲ್ ಪಟ್ಟಣ ನೂತನ ತಾಲೂಕು ರಚನೆಯ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

