ರಾಯಚೂರು

ಕಾಯಿಲೆ ಹತೋಟಿಗೆ ಸಮುದಾಯದ ಸಹಕಾರ ಅಗತ್ಯ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 29
ಡೆಂಘೀ ಹಾಗೂ ಇತರ ಸೊಳ್ಳೆಯಿಂದ ಹರಡುವ ಕಾಯಿಲೆಗಳ ಹತೋಟಿಗೆ ಇಲಾಖೆಗಳ ಜೊತೆಗೆ ಸಮುದಾಯದ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಆರ್.ಎಚ್. ಕ್ಯಾಂಪ್ ನಂ. 2 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಆರ್.ಎಚ್. ನಂ.5 ಕ್ಯಾಂಪ್ನಲ್ಲಿ ಇಬ್ಬರಿಗೆ ಕಂಡುಬಂದಿರುವ ಸಂಶಯಾಸ್ಪದ ಡೆಂಘೀ ಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆತಂಕಪಡುವ ಅಗತ್ಯವಿಲ್ಲ: ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಒಳಗೊಂಡ ಸೊಳ್ಳೆ ಉತ್ಪತ್ತಿ ತಾಣಗಳ, ಸಮೀಕ್ಷಾ ತಂಡದ ಕಾರ್ಯ ಪರಿಶೀಲನೆ ಕೈಗೊಂಡ ನಂತರ ಪ್ರಸಕ್ತ ರೋಗವು ಹತೋಟಿಯಲ್ಲಿದೆ. ಒಟ್ಟು 5 ಕ್ಯಾಂಪ್ಗಳಿಗೆ ತಂಡಗಳು ಭೇಟಿ ನೀಡಿ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ತಾಲೂಕಾಡಳಿತ ಸಂಪೂರ್ಣ ಸಹಕಾರ ನೀಡಲಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಜ್ವರ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಎಂದು ಕುಮಾರಸ್ವಾಮಿ ತಿಳಿಸಿದರು.
ಸಲಹೆ: ಡೆಂಘೀ ಕಾಯಿಲೆಯು ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಹರಡುವುದು. ಇದು ಸ್ವಚ್ಛ ನೀರಿನಲ್ಲಿ ತನ್ನ ವಂಶ ವೃದ್ಧಿಸಿಕೊಳ್ಳುತ್ತದೆ. ಗ್ರಾಮದ ಪ್ರತಿ ಕುಟುಂಬದವರು ತಮ್ಮ ಮನೆಯ ಆವರಣದಲ್ಲಿ ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಡಿಕೆ, ಇತರ ನೀರು ಸಂಗ್ರಹಕಗಳನ್ನು ವಾರದಲ್ಲಿ ಒಮ್ಮೆ ಚೆನ್ನಾಗಿ ತಿಕ್ಕಿ ತೊಳೆದು ಒಳಭಾಗದಲ್ಲಿ ಸುಣ್ಣವನ್ನು ಹಚ್ಚಿ ತುಂಬಿಸುವುದರಿಂದ ಸೊಳ್ಳೆ ಮೊಟ್ಟೆ ಇಟ್ಟು ನಂತರ ಅದರ ಮರಿ(ಲಾರ್ವಾ) ನಾಶವಾಗುವುದರ ಜೊತೆಗೆ ರೋಗ ನಿಯಂತ್ರಿಸಬಹುದು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನ್ ತಿಳಿಸಿದರು.
ಸ್ವಚ್ಛತೆ ಕಾರ್ಯ: ಪ್ರಸಕ್ತ ರೋಗದ ನಿಯಂತ್ರಣ ಹತೋಟಿಯಲ್ಲಿದ್ದು 5 ನಂಬರ್ ಕ್ಯಾಂಪ್ನಲ್ಲಿ ಆರೋಗ್ಯ ಇಲಾಖೆಯ ಜೊತೆ ಪಂಚಾಯತ್ರಾಜ್ ಇಲಾಖೆ ವತಿಯಿಂದ ಫಾಗಿಂಗ್ ಮಾಡಲಾಗಿದೆ. ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಬಿ.ಆರ್. ಗೌಡೂರು ತಿಳಿಸಿದರು.
ಮುಖಂಡರಾದ ಸುಮಂತ ಮಂಡಲ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಎಚ್. ದಾಸಪ್ಪನವರ, ಆರೋಗ್ಯ ಮೇಲ್ವಿಚಾರಕ ಪಿ. ವೆಂಕಟೇಶ, ಮಲೇರಿಯಾ ಮೇಲ್ವಿಚಾರಕ ಎಫ್.ಎ. ಹಣಿಗಿ ಆರೋಗ್ಯ ಸಂದರ್ಶಕಿ ಎ.ಐ. ಪಾಟೀಲ, ಕಿರಿಯ ಆರೋಗ್ಯ ಸಂದರ್ಶಕಿ ಸರಸ್ವತಿ, ಸುಶ್ರೂಷಕಿಯರಾದ ರೇಣುಕಾ, ರೂಪಾ, ಸ್ತ್ರೀಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.