ರಾಯಚೂರು

ಒಪೆಕ್ ಪುನಾರಂಭ ಕಾರ್ಯಕ್ರಮಕ್ಕೆ ಬಹಿಷ್ಕಾರ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ನ.1
ನಗರದ ಒಪೆಕ್ ಆಸ್ಪತ್ರೆಯ ಪುನಾರಂಭ ಸಮಾರಂಭ ಸರ್ಕಾರಿ ಕಾರ್ಯಕ್ರಮ. ಆದರೆ ಕಾಂಗ್ರೆಸ್ ಅದನ್ನು ತನ್ನ ಸಮಾರಂಭವೆಂಬಂತೆ ಬಿಂಬಿಸುತ್ತಿದೆ ಎಂದು ಆರೋಪಿಸಿ ಒಪೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಪುನಾರಂಭ ಸಮಾರಂಭವನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗ ನಡೆಯಿತು.
  ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿದ್ದ ಒಪೆಕ್ ಆಸ್ಪತ್ರೆಯ ಪುನಾರಂಭ ಸಮಾರಂಭ ಆರಂಭವಾಗುತ್ತಿದ್ದಂತೆಯೇ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಆರ್.ಮಾನಸಯ್ಯ ಹಾಗೂ ಅಂಬಣ್ಣ ಅರೋಲಿ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಉಳಿದಂತೆ ಕಾಂಗ್ರೆಸ್ ಪಕ್ಷದವರೇ ಇದ್ದಾರೆ. ಸಮಾರಂಭ ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಆಕ್ಷೇಪಿಸಿದರು.
ಸಚಿವರ ಭಾಷಣಕ್ಕೆ ಆಕ್ಷೇಪ: ಈ ವೇಳೆ ಹೋರಾಟಗಾರರ ಮಾತಿಗೆ ಕಿವಿಗೊಡದೇ ಸಮಾರಂಭ ಮುಂದುವರಿಯಿತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಲು ಮುಂದಾಗುತ್ತಿದ್ದಂತೆಯೇ ಮತ್ತೆ ಅಸಮಾಧಾನದ ಮಾತು ಕೇಳಿಬಂದಿತು. ಜಿಲ್ಲಾ ಕಾಂಗ್ರೆಸ್ ನಾಯಕರು ಒಪೆಕ್ ಆಸ್ಪತ್ರೆ ಉಳಿಸಿ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಅಂಥವರನ್ನೂ ವೇದಿಕೆಯಲ್ಲಿ ಕೂಡಿಸಿ ಸನ್ಮಾನಿಸುವುದು ಸರಿಯಲ್ಲ ಎಂದು ಅಂಬಣ್ಣ ಅರೋಲಿ ಆಕ್ಷೇಪಿಸಿ ಘೋಷಣೆ ಕೂಗಿದರು.
  ಈ ವೇಳೆ ಅವರಿಗೆ ಆರ್.ಮಾನಸಯ್ಯ ಮತ್ತಿತರ 100ಕ್ಕೂ ಹೆಚ್ಚು ಜನ ದನಿಗೂಡಿಸಿ ಘೋಷಣೆ ಕೂಗಿದರು. ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕರು ವೇದಿಕೆಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದರು. ಆದರೆ ಅದಕ್ಕೆ ಸಚಿವರು ಮತ್ತು ವೇದಿಕೆಯಲ್ಲಿದ್ದವರು ಬೆಲೆ ನೀಡದ್ದರಿಂದ ಸಮಾರಂಭ ಬಹಿಷ್ಕರಿಸಿದ ಹೋರಾಟಗಾರರು ಆಸ್ಪತ್ರೆಯ ಮುಂದೆ ಜಮಾಯಿಸಿ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವರ್ತನೆ ಖಂಡಿಸಿ ಘೋಷಣೆ ಹಾಕಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಭ್ರಮದ ಸಮಾರಂಭಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಿದರು. ಈನಂತರ ಹೋರಾಟಗಾರರು ಅಲ್ಲಿಂದ ತೆರಳಿದರು.
ಪ್ರತಿಕ್ರಿಯೆ: ಈ ಕುರಿತು ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪ್ರತಿಕ್ರಿಯಿಸಿ, ಸಮಾರಂಭದಲ್ಲಿ ನಡೆದ ಘಟನೆ ಬಗ್ಗೆ ಯಾರೂ ಗಮನಕೊಡಬೇಕಿಲ್ಲ. ರಾಜಕೀಯ ಲಾಭ ಇಲ್ಲವೇ ಆಸ್ಪತ್ರೆಯಲ್ಲಿ ನೌಕರಿ ನೀಡದ ಬೇಸರದಿಂದ ಹಾಗೆ ವರ್ತಿಸಿರುವ ಸಾಧ್ಯತೆಯಿದೆ ಎಂದು ಹೇಳಿದರು.
  ಮಾಧ್ಯಮದವರು ಒಪೆಕ್ ಪುನಾರಂಭದ ಸಂಭ್ರಮದ ಬಗ್ಗೆ ಮಾತ್ರ ವರದಿ ಮಾಡಿ ಬಹಿಷ್ಕಾರದ ಸುದ್ದಿಯನ್ನೇ ಹೆಚ್ಚು ಬಿಂಬಿಸದಂತೆ ಮನವಿಯನ್ನೂ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.