ರಾಯಚೂರು

ದೀಪಾವಳಿ: ಮಂತ್ರಾಲಯಕ್ಕೆ ಸಾವಿರಾರು ಭಕ್ತರ ಭೇಟಿ

Published On :

ಕನ್ನಡಪ್ರಭ ವಾರ್ತೆ ,  ರಾಯಚೂರು ,  ನ.4
ಸರ್ಕಾರಿ ಕಚೇರಿಗಳಿಗೆ ಸಾಲು ಸಾಲು ರಜೆಗಳ ನೀಡಿಕೆ. ಸೀಮಾಂಧ್ರ ಭಾಗದಲ್ಲಿ ಬಹುತೇಕ ತಗ್ಗಿದ ಹೋರಾಟದ ಬಿಸಿ. ಪರಿಣಾಮ ಆಂಧ್ರದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದಲ್ಲೀಗ ಸಾವಿರಾರು ಸಂಖ್ಯೆಯ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿದ್ದು, ಶ್ರೀಮಠದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದೆ.
  ಕಳೆದ ಕೆಲ ದಿನಗಳಿಂದ ಸೀಮಾಂಧ್ರ ಹೋರಾಟದ ಕಾರಣಕ್ಕೆ ಮಂತ್ರಾಲಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಆದರೆ ದೀಪಾವಳಿ ಹಬ್ಬದ ಆಗಮನವಾಗುತ್ತಿದ್ದಂತೆಯೇ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸಾವಿರಾರು ಸಂಖ್ಯೆಯ ಭಕ್ತರು ಕಳೆದ ನಾಲ್ಕು ದಿನಗಳಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಶ್ರೀಮಠದ ಆತಂಕ ದೂರ ಮಾಡಿದ್ದಾರೆ.
ಭಕ್ತರು, ಪ್ರವಾಸಿಗರ ಆಗಮನ: ಕರ್ನಾಟಕದಲ್ಲಿ ನ.1ರಿಂದ ನ.4ರವರೆಗೆ ಸಾಲು ಸಾಲು ರಜೆಯ ದಿನಗಳು. ಹಾಗಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧೆಡೆಯಿಂದ ಭಾರೀ ಸಂಖ್ಯೆಯ ಭಕ್ತರು ಹಾಗೂ ಪ್ರವಾಸಿಗರು ಮಂತ್ರಾಲಯಕ್ಕೆ ಆಗಮಿಸಿದ್ದಾರೆ.
  ದೀಪಾವಳಿಯ ಹಿನ್ನೆಲೆ ಲಭ್ಯವಾದ ರಜೆಯ ಮಜಾ ಮತ್ತು ಮಂತ್ರಾಲಯದ ರಾಯರ ದರ್ಶನ ಭಾಗ್ಯಕ್ಕಾಗಿ ಅನೇಕರು ಕಳೆದ ನಾಲ್ಕು ದಿನಗಳಿಂದ ಮಂತ್ರಾಲಯದಲ್ಲಿಯೇ ಇದ್ದು, ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ರಾಘವೇಂದ್ರತೀರ್ಥರ ಮೂಲಬೃಂದಾವನ ದರ್ಶನ ಪಡೆದಿದ್ದಾರೆಂದು ಮಠದ ಮೂಲಗಳು ಹೇಳಿವೆ.
60 ಸಾವಿರಕ್ಕೂ ಅಧಿಕ ಭಕ್ತರು: ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ ಈ ಬಗ್ಗೆ ಪ್ರತಿಕ್ರಿಯಿಸಿ ಕಳೆದ ನಾಲ್ಕು ದಿನಗಳಲ್ಲಿ 60 ಸಾವಿರಕ್ಕೂ ಅಧಿಕ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಇದು ಮಠಕ್ಕೆ ಸಂತಸದ ವಿಚಾರ. ಶ್ರೀಮಠಕ್ಕೆ ಭಾರೀ ಸಂಖ್ಯೆಯ ಭಕ್ತರ ಆಗಮನದಿಂದ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ ಎಂದಿದ್ದಾರೆ.
  ಕಳೆದ ಆಗಸ್ಟ್‌ನಲ್ಲಿ ರಾಘವೇಂದ್ರತೀರ್ಥರ ಆರಾಧನಾ ಮಹೋತ್ಸವ ಕಾರಣಕ್ಕೆ ಮೂರು ದಿನಗಳ ಕಾಲ ಸೀಮಾಂಧ್ರದಲ್ಲಿ ಪ್ರತ್ಯೇಕ ತೆಲಂಗಾಣ ವಿರೋಧಿ ಹೋರಾಟ ತಗ್ಗಿತ್ತು. ಆದರೆ ಆರಾಧನಾ ಮಹೋತ್ಸವ ಮುಗಿಯುತ್ತಿದ್ದಂತೆಯೇ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ಹೋರಾಟದ ಕಾವೇರಿತ್ತು.
ಸಿಬ್ಬಂದಿಯೂ ಮುಷ್ಕರದಲ್ಲಿ: ಅಷ್ಟೇ ಅಲ್ಲ ಆಂಧ್ರದಲ್ಲಿ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿ ಅಲ್ಲಿನ ಸಾರಿಗೆ ಸಂಸ್ಥೆಯ ಸಿಬ್ಬಂದಿಯೂ ಮುಷ್ಕರದಲ್ಲಿ ತೊಡಗಿದ್ದರು. ಅದರಿಂದಾಗಿ ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ಅಡಚಣೆಯಾಗಿತ್ತು. ರಾಯಚೂರು ಮತ್ತು ಬಳ್ಳಾರಿ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರಕ್ಕೆ ಸುರಕ್ಷತಾ ದೃಷ್ಟಿಯಿಂದ ಸಂಸ್ಥೆ ಹಿಂದೇಟು ಹಾಕಿತ್ತು.
  ಆದರೆ ಕಳೆದೊಂದು ತಿಂಗಳಿನಿಂದ ಆಂಧ್ರದಲ್ಲಿ ಸೀಮಾಂಧ್ರ ಹೋರಾಟ ತಗ್ಗಿದೆ. ಅಷ್ಟೇ ಅಲ್ಲ ಅಲ್ಲಿನ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರದಿಂದ ಹೊರಬಂದು ಬಸ್ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು, ಅದರಿಂದಾಗಿ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್‌ಗಳು ನಿರಾತಂಕವಾಗಿ ಸಂಚರಿಸಲಾರಂಭಿಸಿವೆ.
  ಮಂತ್ರಾಲಯಕ್ಕೆ ಬಂದು ಹೋಗುವುದು ತೀರಾ ಸರಾಗವಾಗಿದೆ. ಹಾಗಾಗಿ ಸದ್ಯ ಮಂತ್ರಾಲಯಕ್ಕೆ ಭಕ್ತರ ಆಗಮನದಲ್ಲೂ ಹೆಚ್ಚಳ ವಾಗಿದೆ. ಕಳೆದ ಅನೇಕ ತಿಂಗಳಿನಿಂದ ಮಠಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಜತೆಗೆ ಸಾರಿಗೆ ಸಂಸ್ಥೆ ಮತ್ತು ಮಠದ ಆದಾಯಕ್ಕೂ ಹಿನ್ನಡೆಯಾಗಿತ್ತು. ಸದ್ಯ ಮತ್ತೆ ಭಕ್ತರು ಮಂತ್ರಾಲಯದತ್ತ ಧಾವಿಸುತ್ತಿರುವುದು ಮಠ ಮತ್ತು ಸಾರಿಗೆ ಸಂಸ್ಥೆಯಲ್ಲಿ ನೆಮ್ಮದಿ ತಂದಿದೆ.
-ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.