ರಸ್ತೆ, ನೀರು, ನಿವೇಶನದ ಸೌಲಭ್ಯ ಕೊಡಿ: ನಿವಾಸಿಗಳ ಒತ್ತಾಯ
ಸಿಂಧನೂರು: ನಮಗೆ ರಸ್ತೆ, ನೀರು, ನಿವೇಶನದ ಸೌಲಭ್ಯ ಕೊಡಿ ಎಂಬ ಬೇಡಿಕೆಯನ್ನು ನಗರದ ಜನತಾ ಕಾಲೋನಿಯ ನಿವಾಸಿಗಳು ನಗರಸಭೆ ಅಧ್ಯಕ್ಷ ಜಾಫರ ಅಲಿ ಜಾಗೀರದಾರ ಮತ್ತು ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಅವರ ಮುಂದಿಟ್ಟರು. ಶಾಲಾ ಕೊಠಡಿಗಳಿಗೆ ಗುದ್ದಲಿ ಪೂಜೆ ಮಾಡುವ ಸಂದರ್ಭದಲ್ಲಿ ನಾಗರಿಕರು ಒತ್ತಾಯಿಸಿದರು. ಮಳೆ ಬಂದರೆ ಸಾಕು ಸಂಚಾರವೇ ಸ್ಥಗಿತಗೊಳ್ಳುತ್ತದೆ. ಈ ಓಣಿಯಲ್ಲಿ ಮಳೆ ಬಂದರೆ ಬೀಳದವರೆ ಇಲ್ಲ. ರಸ್ತೆಗಳು ಚರಂಡಿಗಳಾಗಿ ಮಾರ್ಪಡುತ್ತವೆ. ಮಹಿಳೆಯರು ಶೌಚಾಲಯಕ್ಕೆ ಹೋಗುವುದು ದುಸ್ತರವಾಗುತ್ತದೆ. ಕಾರಣ ಶೀಘ್ರದಲ್ಲಿ ರಸ್ತೆಯನ್ನು ನಿರ್ಮಿಸಿ ಕೊಡಿ, ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಿದೆ. ಇನ್ನು ವಾಸಕ್ಕೆ ಜಾಗವೇ ಇಲ್ಲದಂತಾಗಿದ್ದು ಸರ್ಕಾರಿ ಜಾಗದಲ್ಲಿ ನಿವೇಶನ ಒದಗಿಸಿಕೊಡಿ ಎಂದು ಜನತಾ ಕಾಲೋನಿಯ ಮಹಿಳೆಯರು ಅತ್ಯಂತ ದಯನೀಯವಾಗಿ ವಿನಂತಿಸಿಕೊಂಡರು. 20 ವರ್ಷಗಳಿಂದ ಶರಣೇಗೌಡರ ಜಮೀನಿನಲ್ಲಿ ಜೋಪಡಿ ಹಾಕಿಕೊಂಡಿದ್ದು, ಅವರು ತೆರವುಗೊಳಿಸಲು ತಿಳಿಸಿದ್ದಾರೆ. ಅವರು ತಮ್ಮ ಹೊಲದಿಂದ ಬಿಡಿಸಿದರೆ ವಾಸಕ್ಕೆ ಜಾಗವೇ ಇಲ್ಲದಂತಾಗುತ್ತದೆ. ಆದ ಪ್ರಯುಕ್ತ ಪಕ್ಕದಲ್ಲಿಯೇ ಇರುವ ಸರ್ಕಾರಿ ಜಾಗದಲ್ಲಿ ನಿವೇಶನ ಒದಗಿಸಬೇಕೆಂದು ಕಾಲೋನಿಯ ಇಮಾಂಬಿ, ಶಹನಾಜ್ ಬೇಗಂ, ಹುಸೇನ್ ಬೀ ಮತ್ತಿತರರು ವಿನಂತಿಸಿದರು.
ಪಿಡಿಒ ನಿರ್ಲಕ್ಷ್ಯ: ಕ್ರಮಕ್ಕೆ ಆಗ್ರಹ
ರಾಯಚೂರು: ತಾಲೂಕಿನ ಮರ್ಚೇಟಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾನೂನು ಉಲ್ಲಂಘನೆ ಮಾಡಿದ್ದು, ಅವ್ಯವಹಾರದಲ್ಲಿ ತೊಡಗಿದ್ದಾರೆ. ಕೂಡಲೇ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಗಳಿಗೆ ಒತ್ತಾಯಿಸಿದ್ದಾರೆ. ಮರ್ಚೇಟಾಳ ಗ್ರಾಪಂ ಅಧಿಕಾರಿಗಳು ಮೇಲಾಧಿಕಾರಿಗಳ ಭಯವಿಲ್ಲದೆ ಅವ್ಯವಹಾರ ನಡೆಸಿದ್ದು, ಸರ್ಕಾರದ ನಿಯಮ ಗಾಳಿಗೆ ತೂರಿ ವ್ಯವಹರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ಅಭಿವೃದ್ಧಿಗೆ ಹಲವಾರು ಯೋಜನೆ ಜಾರಿಗೆ ತಂದಿದ್ದು, ಗ್ರಾಮಸಭೆ ನಡೆಸದೆ ಹಣ ನೀಡಿದವರಿಗೆ, ಶ್ರೀಮಂತರಿಗೆ ವಸತಿ ಮನೆಗಳ ಹಂಚಿಕೆ ಮಾಡುತ್ತಿದ್ದಾರೆ. ಹಿಂದೆ 5 ವರ್ಷಗಳಲ್ಲಿ ಮಂಜೂರಾದ ಸಾವಿರ ಮನೆಗಳಲ್ಲಿ 400 ಮನೆಗಳು ಶ್ರೀಮಂತರು ಕಟ್ಟಿಕೊಂಡಿದ್ದು, ಉಳಿದ ಮನೆಗಳು ಸುಳ್ಳು ಬಿಲ್ಲುಗಳು ಬರೆದು ಕೊಟ್ಟಿರುತ್ತಾರೆ. ಕೆಲ ಮನೆಗಳು ಬಡವರ ಹಣ ಕೊಡದೆ ಇರುವ ಪರಿಣಾಮ ಮನೆಗಳು ಆಗಿರುವುದಿಲ್ಲ. 2013-14 ನೇ ಸಾಲಿನಲ್ಲಿ ಹಣ ಕೊಟ್ಟವರಿಗೆ, ಊರಲ್ಲಿ ಇರಲಾರದವರಿಗೆ, ಗ್ರಾಪಂ ಸದಸ್ಯರು ತಯ್ಯಾರಿಸಿದ ಯಾದಿಯನ್ನು ಅನುಮೋದನೆಗೆ ಕಳುಹಿಸಲು ಮುಂದಾಗಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಪ್ರೆಂಟಿಸ್ ತರಬೇತಿಗೆ ಆಹ್ವಾನ
ರಾಯಚೂರು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರಿಂದ ಬೆಂಗಳೂರಿನ ಎಚ್ಎಎಲ್ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಎಸ್ಸೆಸ್ಸೆಲ್ಸಿ ಪಾಸಾದವರು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಹರು. ಸಾಮಾನ್ಯ- ಒಬಿಸಿ ಅಭ್ಯರ್ಥಿಗಳಾಗಿದ್ದಲ್ಲಿ ಶೇ.60 ರಷ್ಟು ಅಂಕ ಪಡೆದಿರಬೇಕು. ಎಸ್ಸಿ, ಎಸ್ಟಿ ಹಾಗೂ ಅಂಗವಿಕಲರಾಗಿದ್ದಲ್ಲಿ ಶೇ.50 ಅಂಕ ಪಡೆದಿರಬೇಕು. ಅರ್ಜಿ ಸಲ್ಲಿಸುವವರ ವಯಸ್ಸು 2013ರ ಅ.1ಕ್ಕೆ 15ರಿಂದ 18ವರ್ಷ ಒಳಗಿರಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಿಂದ ಬಂದವರಾಗಿರಬೇಕು. ಅರ್ಹ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಹಾಗೂ ಶಿಕ್ಷಣ ನೀಡಲಾಗುವುದು. ಶಿಷ್ಯ ವೇತನ, ಮತ್ತಿತರೆ ಭತ್ಯೆಯನ್ನೂ ಸಂಸ್ಥೆ ನೀಡಲಿದ್ದು, ಅರ್ಜಿಯನ್ನು ನ.13ರೊಳಗೆ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬಾಲಾಜಿ ಕಾಂಪ್ಲೆಕ್ಸ್, ಗೂಡ್ಶೆಡ್ ರಸ್ತೆ, ರಾಯಚೂರು, ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿಗಳು ರಾಯಚೂರು ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

