ಪೆನ್ನು ಹಿಡಿವ ಕೈಯಲ್ಲಿ ಭಿಕ್ಷಾಪಾತ್ರೆ!
ಕ.ಪ್ರ.ವಾರ್ತೆ ಮುದಗಲ್ ನ.9
ಶಾಲೆಗೆ ಹೋಗಿ ಪೆನ್ನು ಪುಸ್ತಕ ಹಿಡಿಯಬೇಕಾದ ಮಕ್ಕಳು ಕೈಯಲ್ಲಿ ಭಿಕ್ಷಾಪಾತ್ರೆ ಬಗಲಿಗೆ ಜೋಳಿಗೆ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.
ಅಕ್ಷರ ಮಂತ್ರ ಪಠಿಸುವ ಬಾಯಿಯಲ್ಲಿ ಭಿಕ್ಷಾಮಂತ್ರ ಪಠಿಸಿ ತಮ್ಮ ಕುಟುಂಬದ ವ್ಯವಾಹರದಲ್ಲಿ ಪಾಲುದಾರರಾಗುತ್ತಾರೆ. ಮೈ ಕೊರೆಯುವ ಚಳಿಯಲ್ಲೂ ಆರು ಗಂಟಗೆ ಎದ್ದು ಕೈಯಲ್ಲಿ ಪಾತ್ರೆ ಬಗಲಿಗೆ ಚೀಲ ಹಿಡಿದು ಮನೆ ಮನೆಗೆ ಪರೆಡ್ ಮಾಡಿ ರಾತ್ರೆ ಮಿಕ್ಕಿದ ಅನ್ನವನ್ನು ಪಾತ್ರೆಗೆ ಹಾಕುವವರೆಗೂ ಮನೆ ಮುಂದೆ ನಿಂತು ಅಮ್ಮ, ತಾಯಿ ಎನ್ನ ಹಡಿದವ್ವ ಎಂದು ಜೋರು ಧ್ವನಿಯಲ್ಲಿ ಅನ್ನ ಹಾಕುವವರೆಗೂ ಕೂಗುತ್ತಾರೆ.
ವಿವಿಧ ರೀತಿ ಭಿಕ್ಷೆ: ಅನ್ನ ಹಾಕಿದ ಮೇಲೆ ಪಾತ್ರೆ ಹಾಗೂ ಚೀಲ ತುಂಬಿಕೊಂಡು ತಮ್ಮ ಗುಡಿಸಲು ಸೇರುತ್ತಾರೆ. ಹತ್ತು ಗಂಟೆಯ ಸುಮಾರಿಗೆ ಅದೇ ಪಾತ್ರೆಯಲ್ಲಿ ಹನಮಂತದೇವರ ಹಾಗೂ ಅಂಕಲಗಿ ಶ್ರೀಗಳ ಫೋಟೊ ಇಟ್ಟು ಕೊಂಡು, ಹೆಗಲಿಗೆ ಚೀಲ ಹಾಕಿ ಬಸ್ ನಿಲ್ದಾಣ, ಹೋಟೆಲ್, ಬೀದಿಗಳು ಗಣೇಶ ಕೆಫೆ, ಪಪಂ ಎದುರು ಗಸ್ತು ತಿರುಗಿ ತುಸು ಹೊತ್ತಿನಲ್ಲಿಯೇ ತಮ್ಮ ದಿನ ನಿತ್ಯ ಕಾರ್ಯ ಮುಗಿಸಿ ಮಾಯವಾಗಿ ಬಿಡುತ್ತಾರೆ.
ಅನಿವಾರ್ಯವೇ?: ಇವರ ಜತೆಯಲ್ಲಿಯೇ ಹೆತ್ತವ್ವ ಹೆಗಲಿಗೆ ಜೋಳಿಗೆ ಹಾಕಿ ಅದರಲ್ಲಿ ಹಸುಗೂಸುವಿಟ್ಟುಕೊಂಡು ನಿಂತಲ್ಲಿ, ಕುಂತಲ್ಲಿ, ಬೆನ್ನು ಬಿಡದೆ ಭಿಕ್ಷಾಟನೆಯಲ್ಲಿ ತೊಡಗಿ ಚಿಲ್ಲರೆ ಹಣ ನೀಡುವರಿಗೆ ಬಿಡುವುದಿಲ್ಲ. ಬೆನ್ನಿಗೆ ಪಾಠಿ ಚೀಲ ಹಾಕಿಕೊಂಡು ಶಾಲೆಗೆ ಹೋಗಿ ನಾಲ್ಕು ಅಕ್ಷರ ಕಲಿಯಬೇಕಾದ ಮಕ್ಕಳು ಪಟ್ಟಣದ ನಾನಾ ಬೀದಿಗಳಲ್ಲಿ ಬೆನ್ನ ಮೇಲೆ ಜೋಳಿಗೆ ಹಿಡಿದು ಭಿಕ್ಷೆ ಬೇಡುತ್ತಾ ತಿರುತ್ತಿದ್ದಾರೆ. ಅಷ್ಟಕ್ಕೂ ಈ ಮಕ್ಕಳಿಗೆ ಭಿಕ್ಷೆ ಅನಿವಾರ್ಯವೇ. ಈ ಮಕ್ಕಳ ಬಾಲ್ಯ ಜೀವನವನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಇವರು ಭಿಕ್ಷೆ ಬೇಡಿ ತಂದು ಕೊಟ್ಟರೆ ಇವರ ಕುಟುಂಬದ ಸಂಸಾರ ತೂಗುವುದೇ?
ಪಟ್ಟಣದ ನಾನಾ ಕೇಂದ್ರದಲ್ಲಿ ಭಿಕ್ಷೆಬೇಡಿ ಕೆಲವರಿಂದ ಕಾಸು ಹಾಕಿಸಿ ಕೊಂಡು ಮತ್ತೆ ಕೆಲವರಿಂದ ಬಯ್ಸಿಕೊಂಡು ಬೀದಿಗಳಲ್ಲಿ ತಿರುಗುತ್ತಾರೆ. ಈ ಮಕ್ಕಳಿಗೆ ಕರೆದು ಶಾಲೆಗ್ಯಾಕ ಹೋಗುವುದಿಲ್ಲ ಎಂದು ಪತ್ರಿಕೆ ಮಾತನಾಡಿಸಿದಾಗ ಗುಬ್ಬಚ್ಚಿ ಮರಿಗಳಂತೆ ಕಣ್ಣು ಪಿಳಕಿಸುತ್ತವೆಯೇ ಹೊರೆತು ಬಾಯಿಂದ ಮಾತು ಬರುವುದಿಲ್ಲ.
ಮಕ್ಕಳ ಅಭಿವೃದ್ಧಿ ಹಾಗೂ ಭಿಕ್ಷಾಟನೆ ನಿಷೇಧ ಕಾಯ್ದೆಗಳು ಇದ್ದರೂ ಇಲ್ಲಿನ ಅಧಿಕಾರಿಗಳು ಸಂಬಂಧವಿಲ್ಲದಂತೆಇದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ನೀಡಿ ಈ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡುವರೇ ಕಾದು ನೋಡಬೇಕಾಗಿದೆ.
-ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

