'ಜಲಾನಯನ ಇಲಾಖೆ ಅವ್ಯವಸ್ಥೆಗೆ ಕ್ರಮ ಜರುಗಿಸಿ'
ಲಿಂಗಸ್ಗೂರು: ಪಟ್ಟಣದ ಜಲಾನಯನ ಇಲಾಖೆ ಕಚೇರಿ ಸದಾ ಮುಚ್ಚಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದಸಂಸ ಮುಖಂಡ ಪ್ರಭುಲಿಂಗ ಮೇಗಳಮನಿ ಆರೋಪಿಸಿದ್ದಾರೆ. ತಾಲೂಕು ವ್ಯಾಪ್ತಿಯ ಭೂಮಿಯ ಮಣ್ಣು ನಿಯಂತ್ರಣಕ್ಕೆ ಹಾಗೂ ರೈತರ ಅನೂಕೂಲಕ್ಕಾಗಿ ಕೃಷಿ ಇಲಾಖೆಯಿಂದ ಬೇರ್ಪಡಿಸಿದ ಜಲಾನಯನ ಇಲಾಖೆ ವಾರದಲ್ಲಿ ಒಂದೆರಡು ದಿನ ಮಾತ್ರ ತೆಗೆದು, ಬೇಕಾಬಿಟ್ಟಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಯಾವುದೇ ಸಮಯದಲ್ಲಿ ಕಚೇರಿಗೆ ತೆರಳಿದರೂ ಸದಾ ಬೀಗ ಹಾಕಲಾಗಿರುತ್ತದೆ. ಕಚೇರಿಯ ಮಾಹಿತಿಗಾಗಿ ಅಲೆದಾಡುವಂತಾಗಿದೆ ಎಂದು ದೂರಿದರು. ಇಲಾಖೆ ಕಚೇರಿಯಲ್ಲಿ ಬಹು ದಿನಗಳಿಂದ ನೆಲೆಸಿದ ಸಿಬ್ಬಂದಿಯ ಕಾರ್ಯನಿರ್ವಹಣೆ ಲೋಪ ಎದ್ದು ಕಾಣುತ್ತದೆ. ಪ್ರಭಾರಿ ಜಲಾನಯನ ಅಧಿಕಾರಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿದರೆ ಕಚೇರಿ ಬೀಗ ಮುದಗಲ್ನಲ್ಲಿದೆ ಎಂದು ಹೇಳುತ್ತಾರೆ. ಈ ಹಿಂದೆ ಕಚೇರಿ ಮುಚ್ಚುವ ಕುರಿತು ತಾಪಂ ಸಾಮಾನ್ಯಸಭೆಯಲ್ಲಿ ಇರುವ 6 ಸಿಬ್ಬಂದಿಯಲ್ಲಿ ದಿನಕ್ಕೊಬ್ಬರಂತೆ ಕಚೇರಿಯಲ್ಲಿರಬೇಕೆಂದು ಸೂಚಿಸಿದ್ದರೂ ಕಚೇರಿ ಸಮಯದಲ್ಲೇ ಸರಿಯಾಗಿ ತೆರೆಯುತ್ತಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕ್ರೀಡಾಕೂಟ: ವಿಸಿಬಿ ಕಾಲೇಜು ಸಾಧನೆ
ಲಿಂಗಸ್ಗೂರು: ಗುಲ್ಬರ್ಗ ವಿಶ್ವವಿದ್ಯಾಲಯದ 33ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾ
ಕೂಟದಲ್ಲಿ ಲಿಂಗಸ್ಗೂರು ವಿಸಿಬಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಗುಲ್ಬರ್ಗದಲ್ಲಿ ಅ.30 ರಂದು ಬಿ.ಶ್ಯಾಮಸುಂದರ ಸ್ಮಾರಕ ಬಿಪಿಎಡ್ ಮಹಾವಿದ್ಯಾಲಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ನಾಗರತ್ನ 5 ಸಾವಿರ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಬಿಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಬಿಎ 3ನೇ ಸೆಮಿಸ್ಟರ್ ವಿದ್ಯಾರ್ಥಿ ಎಚ್. ಬಸವರಾಜ 10 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 5 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಬಿಎ 3ನೇ ಸೆಮಿಸ್ಟರ್ ವಿದ್ಯಾರ್ಥಿ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ವಿಸಿಬಿ ಕಾಲೇಜು ಪ್ರಾಚಾರ್ಯ ವಿ. ಅಶೋಕ, ದೈಹಿಕ ನಿರ್ದೇಶಕ ಎಂ.ಬಿ. ಬಿರಾದಾರ, ಆಡಳಿತಾಧಿಕಾರಿ ಸಿ. ಶರಣಪ್ಪ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

