ಗ್ರಾನೈಟ್ ಅಕ್ರಮ ಗಣಿ ಮಾಲೀಕರು ಎಸ್ಕೇಪ್!
ಕನ್ನಡಪ್ರಭ ವಾರ್ತೆ ಮುದಗಲ್ ನ.12
ಗ್ರಾನೈಟ್ ಅಕ್ರಮ ಗಣಿಗಾರಿಕೆ ತನಿಖೆ ಚುರುಕುಗೊಂಡಿದ್ದು ಮಾಕಾಪುರ ಸುತ್ತಮುತ್ತ ನಡೆಸುತ್ತಿದ್ದ ಅಕ್ರಮ ಗಣಿ ಮಾಲೀಕರು ರಾತ್ರೋ ರಾತ್ರಿ ಯಂತ್ರಗಳ ಸಮೇತ ಪಲಾಯನಗೊಂಡಿದ್ದಾರೆ.
ಲಿಂಗಸ್ಗೂರು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗ್ರಾನೈಟ್ ಗಣಿಗಾರಿಕೆ ಕುರಿತು ಸರ್ಕಾರಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಾಗರಾಜ್ ಅವರು ಲಿಂಗಸ್ಗೂರು ಸಹಾಯಕ ಆಯುಕ್ತ ಟಿ.ಯೋಗೇಶ್ವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ.
ರಾತ್ರೋರಾತ್ರಿ ಎಸ್ಕೇಪ್!: ತನಿಖಾ ತಂಡ ಮಾಕಾಪುರದಲ್ಲಿ ನಡೆಯುತ್ತಿರುವ ಗ್ರಾನೈಟ್ ಗಣಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರಿಂದ ಅಕ್ರಮ ಗಣಿ ಮಾಲೀಕರು ರಾತ್ರೋರಾತ್ರಿ ಗಣಿಗಾರಿಕೆ ಸ್ಥಳದಿಂದ ಯಂತ್ರಗಳ ಸಮೇತ ಜಾಗ ಖಾಲಿ ಮಾಡಿದ್ದಾರೆ. ಮಾಕಾಪುರ ಸುತ್ತಮುತ್ತ ಸುಮಾರು 24 ಗಣಿಗಳು ಆರಂಭವಾಗಿದ್ದವು. ಅಲ್ಲಿ ಕೇವಲ 4 ಗಣಿಗಳಿಗೆ ಮಾತ್ರ ಸರ್ಕಾರದ ಪರವಾನಗಿಯಿದ್ದು, ಉಳಿದ 20 ಗಣಿಗಳು ಅಕ್ರಮವಾಗಿ ನಡೆಯುತ್ತಿದ್ದವು ಎಂದು ಹೇಳಲಾಗುತ್ತಿದೆ.
ತನಿಖೆ ಆರಂಭವಾಗಿದ್ದರಿಂದ ಕೇವಲ 2 ಗಣಿಗಳು ಮಾತ್ರ ಆರಂಭವಾಗಿದ್ದು ಉಳಿದೆಲ್ಲಾ ಗಣಿಗಳನ್ನು ಬಂದ್ ಮಾಡಿದ್ದರಿಂದ ತನಿಖಾಧಿಕಾರಿಗಳಿಗೆ ಗಣಿ ಮಾಲೀಕರು ಚಳ್ಳೆಹಣ್ಣು ತಿನ್ನಿಸಿದ್ದಾರೆ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ.
ಇಳಕಲ್ ಮೂಲದವರು: ಮಾಕಾಪುರ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಳನ್ನು ನಡೆಸುವವರಲ್ಲಿ ಹೆಚ್ಚಿನವರು ಬಾಗಲಕೋಟೆ ಜಿಲ್ಲೆಯ ಇಳಕಲ್ ನಿವಾಸಿಗಳು ಎನ್ನಲಾಗಿದೆ.
ಅವರು ಕಳೆದ 10 ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಇಲ್ಲಿ ದೊರೆಯುವ ಪಿಂಕ್ ಕಲರ್ ಗ್ರಾನೈಟ್ ಶಿಲೆಗೆ ಭಾರಿ ಬೇಡಿಕೆ ಇದೆ. ಈ ಕಲ್ಲನ್ನು ಇಳಕಲ್ನಲ್ಲಿರುವ ಗ್ರಾನೈಟ್ ಪಾಲಿಷ್ ಫ್ಯಾಕ್ಟರಿಗಳಿಗೆ ಸರ್ಕಾರದ ಪರವಾನಗಿಯಿಲ್ಲದೆ ಸರಾಗವಾಗಿ ಸಾಗಿಸುವ ಮೂಲಕ ಬೊಕ್ಕಸಕ್ಕೆ ಕತ್ತರಿ ಹಾಕುವಲ್ಲಿ ಗಣಿ ಮಾಲೀಕರು ನಿರತರಾಗಿದ್ದರು.
ಇಲ್ಲಿನ ಶಿಲೆಗೆ ಭಾರಿ ಬೇಡಿಕೆ: ಮಾಕಾಪುರದಲ್ಲಿ ದೊರೆಯುವ ಪ್ರತಿ ಮೀಟರ್ ಶಿಲೆಗೆ 45ರಿಂದ 55 ಸಾವಿರ ದರವಿದೆ. ಪಟ್ಟಣ ಪ್ರದೇಶಕ್ಕೆ ದೂರ ಇರುವ ಈ ಗ್ರಾಮದಲ್ಲಿ ಅಕ್ರಮ ಗಣಿ ಮಾಲೀಕರು ತಮ್ಮ ಅಟ್ಟಹಾಸವನ್ನು ಮೆರೆದು ಹಳ್ಳಿಯ ಮುಗ್ಧ ರೈತರ ಜಮೀನಲ್ಲಿ ದೊರೆಯುವ ಗ್ರಾನೈಟನ್ನು ಲೂಟಿ ಮಾಡುವ ಮೂಲಕ ರಾತ್ರೋರಾತ್ರಿ ಶ್ರೀಮಂತರಾಗಿ ಮೆರೆದಿದ್ದರು.
ಸರ್ಕಾರ ತನಿಖೆ ಆರಂಭಿಸಿದ್ದರಿಂದ ಗಣಿ ಮಾಲೀಕರು ಇನ್ನು ತಮಗೆ ಉಳಿಗಾಲವಿಲ್ಲ ಎನ್ನುವುದನ್ನು ಮನಗಂಡು ಬಂದ ದಾರಿಗೆ ಸುಂಕವಿಲ್ಲ ಎಂದು ಗಣಿಗಾರಿಕೆ ಸ್ಥಳದಿಂದ ಪಲಾಯನ ಮಾಡಿದ್ದಾರೆ.
ಹಗಲು ರಾತ್ರಿ ಎನ್ನದೆ ಭೂಮಿ ಅಗೆದಿರುವ ಕಲ್ಲುಗಳ್ಳರು ಜಾಗ ಖಾಲಿ ಮಾಡಿದ್ದರಿಂದ ಗಣಿಗಳಲ್ಲಿ ನೀರು ತುಂಬಿಕೊಂಡು ಪಾಳು ಬಿದ್ದಿವೆ. 40ರಿಂದ 45 ಅಡಿ ಆಳದವರೆಗೆ ಜಮೀನು ಅಗೆದಿದ್ದರಿಂದ ನೀರು ತುಂಬಿ ಜನ, ಜಾನುವಾರುಗಳು ಬಿದ್ದರೆ ಶವವಾಗಿ ಹೊರಬರುವಂತ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ನೀರು ಸಂಗ್ರವಾಗಿದ್ದರಿಂದ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುವ ಭೀತಿಯಲ್ಲಿ ಮಾಕಾಪುರ ಜನರಿದ್ದಾರೆ.
ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

