ರಾಯಚೂರು

ಬಿಡಾಡಿ ದನಗಳ ಹಾವಳಿ ತಡೆಗೆ ಕಾರ್ಯಾಚರಣೆ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ನ.13
ನಗರದ ರಸ್ತೆಗಳಿಗೆ ಬಿಡಾಡಿ ದನಗಳಿಂದ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಎರಡನೇ ಬಾರಿಗೆ ನಗರಸಭೆಯು ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಕಾರ್ಯಾಚರಣೆ ಆರಂಭಿಸಿದೆ. ಹಿಂದೆ ನಗರಸಭೆ ಚುನಾವಣೆಗೂ ಮುನ್ನ ನಡೆದಿದ್ದ ಕಾರ್ಯಾಚರಣೆ ರಾಜ ಕೀಯ ಒತ್ತಡದಿಂದ ಸ್ಥಗಿತಗೊಂಡಿತ್ತು. ಬುಧವಾರದಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದ ಆಡಳಿತವು 167 ಬಿಡಾಡಿ ದನಗಳನ್ನು ವಶಕ್ಕೆ ತೆಗೆದುಕೊಂಡಿದೆ.
ನಗರದ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ನಿಯಂತ್ರಣ ನಗರಸಭೆಗೆ ಅಷ್ಟೇ ಅಲ್ಲ ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲಾ ಗಿತ್ತು. ಬಿಡಾಡಿ ದನಗಳ ರಾಜಕೀಯ ಪ್ರಭಾವದ ಎದುರು ಅಧಿಕಾರಿಗಳು ಅನೇಕ ಬಾರಿ ಸೋತಿದ್ದಾರೆ. ಆದರೆ ಈಚೆಗೆ ಜಿಲ್ಲೆಗೆ ವರ್ಗಾವಣೆಗೊಂಡು ಬಂದ ಎಸ್ಪಿ ಎಂ.ಎನ್. ನಾಗರಾಜ್ ಅವರು ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಆಸಕ್ತಿ ತೋರಿದ್ದು, ಪುನಾ ಕಾರ್ಯಾಚರಣೆಗೆ ಚಾಲನೆ ದೊರೆತಿದೆ.
ನಗರದ ವಿವಿಧೆಡೆ ಮುಖ್ಯ ರಸ್ತೆಗಳಲ್ಲಿದ್ದ 167 ದನಗಳನ್ನು ನಗರಸಭೆ ಮತ್ತು ಸಂಚಾರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡು ಮಹಿಳಾ ಸಮಾಜದ ಆವರಣದಲ್ಲಿ ಕೂಡಿಹಾಕಿದ್ದಾರೆ. ನಗರಸಭೆಯು ಈಗಾಗಲೇ ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಎರಡು ಬಾರಿ ದನಗಳ ಮಾಲಿಕರಿಗೆ ಮಾಧ್ಯಮಗಳ ಮೂಲಕ ಎಚ್ಚರಿಕೆಯ ನೋಟೀಸ್ ಜಾರಿ ಮಾಡಿತ್ತು. ಆನಂತರದಲ್ಲಿ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಅವರೂ ಸಹ ಇಂಥದ್ದೇ ನೊಟೀಸ್ ಜಾರಿ ಮಾಡಿ ಎಚ್ಚರಿಸಿದ್ದರು.
ನಿರುತ್ತರ ಅಧಿಕಾರಿಗಳು: ಆದರೆ ಆಡಳಿತ ಪ್ರತಿ ಬಾರಿ ಎಚ್ಚರಿಕೆ ನೀಡಿದಾಗಲೆಲ್ಲ ಬಿಡಾಡಿ ದನಗಳ ಮಾಲಿಕರ ರಾಜಕೀಯ ಪ್ರಭಾವದ ಮುಂದೆ ಅಧಿಕಾರಿ ಗಳು ನಿರುತ್ತರರಾಗಿಯೇ ಉಳಿದಿದ್ದರು. ಪರಿಣಾಮ ನಗರದ ಪ್ರಮುಖ ರಸ್ತೆಗಳೂ ಸೇರಿ ಎಲ್ಲೆಡೆ ನೂರಾರು ಸಂಖ್ಯೆಯ ಬಿಡಾಡಿ ದನಗಳು ರಾಜಾರೋಷವಾಗಿ ತಿರುಗುತ್ತ, ವಿರಮಿಸುತ್ತಲೇ ಇದ್ದವು.
ಹಾಗಾಗಿ ರಸ್ತೆಯಲ್ಲಿ ಸಾಗುವವರು ಬಿಡಾಡಿ ದನಗಳಿಂದಾಗಿ ನಿಯಂತ್ರಣ ತಪ್ಪಿ ವಾಹನಗಳಿಂದ ಆಗಾಗ್ಗೆ ಬಿದ್ದು ಗಾಯಗೊಂಡು ಆಡಳಿತಕ್ಕೆ ಹಿಡಿಶಾಪ ಹಾಕುತ್ತಲೇ ಸಾಗಿದ್ದರು. ಆದರೆ ದನಗಳ ಹಾವಳಿ ನಿಯಂತ್ರಣ ಮಾತ್ರ ಸಾಧ್ಯವಾಗಿರಲಿಲ್ಲ. ಆಡಳಿತಕ್ಕೆ ತಲೆನೋವು ತಂದಿದ್ದ ದನಗಳ ಕಿರಿಕಿರಿಗೆ ಬ್ರೇಕ್ ಹಾಕಲು ನೂತನ ಎಸ್ಪಿ ಎಂ.ಎನ್.ನಾಗರಾಜ್ ಈಗ ಮುಂದಾಗಿದ್ದಾರೆ.
ಅದರಂತೆ ಈಚೆಗೆ ಜಿಲ್ಲಾ ಎಸ್ಪಿ ಕಚೇರಿಯಿಂದ ಬಿಡಾಡಿ ದನಗಳ ಮಾಲಿಕರಿಗೆ ಮತ್ತೊಮ್ಮೆ ನೊಟೀಸ್ ಜಾರಿಯಾಯಿತು.
ನೊಟೀಸ್ಗೆ ಬಗ್ಗಲಿಲ್ಲ: ಅಂತೆಯೇ ನಗರಸಭೆಯೂ ತಾನೂ ಒಂದು ನೊಟೀಸ್ ಜಾರಿ ಮಾಡಿ ದನಗಳನ್ನು ಕಟ್ಟಿ ಹಾಕಿಕೊಳ್ಳಿ ಇಲ್ಲವೇ ಕ್ರಮ ಎದುರಿಸಿ ಎಂಬ ಎಚ್ಚರಿಕೆ ನೀಡಲಾಯಿತು.
  ಮಾಲಿಕರು ಈ ಬಾರಿಯೂ ನೊಟೀಸ್ ನಿಂದ ಜಗ್ಗಲಿಲ್ಲ, ಬಗ್ಗಲಿಲ್ಲ. ಪರಿಣಾಮ ಬುಧವಾರದಿಂದಲೇ ನಗರದಲ್ಲಿ ನಗರಸಭೆ ಮತ್ತು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಅದರಂತೆ ವಿವಿಧ ರಸ್ತೆಗಳಲ್ಲಿ ಮಲಗಿದ್ದ 167 ದನಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಅವುಗಳನ್ನು ನಗರದ ಮಹಿಳಾ ಸಮಾಜ ದಲ್ಲಿರಿಸಿದ್ದಾರೆ.
ಸಮಸ್ಯೆ: ಬಿಡಾಡಿ ದನಗಳನ್ನು ನಗರಸಭೆ ಹಿಡಿದ ನಂತರದಲ್ಲಿ ಅವುಗಳ ವಿಲೇವಾರಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೊಂದಲ ಎದ್ದಿದೆ. ಆಡಳಿತದ ವಶದಲ್ಲಿರುವ ದನಗಳ ಮಾಲಿಕರಿಗೆ ಮಾಹಿತಿ ನೀಡಿಕೆ ವಿಚಾರ ಸಮಸ್ಯೆ ತಂದಿದೆ.
ದನಗಳ ಮಾಲಿಕರನ್ನು ಪತ್ತೆ ಹಚ್ಚುವುದು, ದಂಡ ಪಾವತಿಗೆ ಮಾಲಿಕರು ಆಗಮಿಸದಿದ್ದಲ್ಲಿ ಅಂಥ ದನಗಳನ್ನು ಮಾಡುವುದಾದರೂ ಏನು ಅವುಗಳನ್ನು ಎಲ್ಲಿಗೆ ಕಳಿಸುವುದು ಎಂಬ ವಿಷಯಗಳು ಕಗ್ಗಂಟಾಗಿವೆ.
  ನಗರಸಭೆ ಮತ್ತು ಪೊಲೀಸ್ ಇಲಾಖೆಯು ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಕ್ಕೆ ನಗರದಲ್ಲಿ ಸ್ವಾಗತವೇನೋ ವ್ಯಕ್ತವಾಗಿದೆ. ಆದರೆ ಕಾರ್ಯಾಚರಣೆ ಹೀಗೆಯೇ ಮುಂದುವರಿಯುವುದೇ ಎಂಬುದು ನಾಗರಿಕರ ಸದ್ಯದ ಅನುಮಾನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.