ರಾಯಚೂರು

ಬಿಸಿಲ ನಾಡಿನಲ್ಲಿ ಚಳಿಯ ಆರ್ಭಟಕ್ಕೆ ತತ್ತರ

Published On :

ವಿಶೇಷ ವರದಿ
ಕ.ಪ್ರ. ವಾರ್ತೆ  ರಾಯಚೂರು  ನ.14
ಬಿಸಿಲ ನಗರಿಯಲ್ಲಿ ಮೈಕೊರೆವ ಚಳಿಯ ಆರ್ಭಟ. ರಾತ್ರಿಯಾಗುತ್ತಿದ್ದಂತೆಯೇ ಬಿಕೋ ಎನ್ನುವ ರಸ್ತೆಗಳು. ಬೆಳಗ್ಗೆ ವಾಯು ವಿಹಾರಕ್ಕೂ ಚಳಿಗಾಳಿ ಭೀತಿ. ವಾಯುವಿಹಾರಕ್ಕೆ ಆಗಮಿಸುವವರ ಸಂಖ್ಯೆ ಇಳಿಮುಖ. ಬಿಸಿಲ ನಾಡಿನಲ್ಲಿ ಚಳಿಗೆ ಈಗ ಜನಜೀವನ ತತ್ತರ.
ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಕಳೆದ ಮೂರು ದಿನಗಳಿಂದ ಚಳಿಯ ಆರ್ಭಟದ ಹಿನ್ನೆಲೆಯ ಚಿತ್ರಣವಿದು. ದಿನವಿಡೀ ಸಂಪಾದ ವಾತಾವರಣ. ಸಂಜೆಯಾಗುತ್ತಿದ್ದಂತೆಯೇ ಚಳಿಗಾಳಿಯ ಅಬ್ಬರ. ಅದರಲ್ಲೂ ರಾಯಚೂರು ನಗರದಲ್ಲಿ ಬೇಸಿಗೆ ಕಾಲವೇ ಸರ್ವಕಾಲಕ್ಕೂ ಕಾಣಸಿಗುತ್ತದೆ.
ಆಗೀಗ ಬಂದು ಹೋಗುವ ಮಳೆಯ ಮಧ್ಯೆ ಇಲ್ಲಿನ ಜನತೆ ಚಳಿ ಅನುಭವಿಸಿದ್ದು ತೀರಾ ಕಡಿಮೆ. ಇಂಥ ಪ್ರದೇಶದಲ್ಲೀಗ ಚಳಿಯ ಅಬ್ಬರ ಕಂಡುಬಂದಿದ್ದು ಜನತೆ ಬೆಚ್ಚಿ ಬೀಳುವಂತಾಗಿದೆ. ಅಷ್ಟೇ ಅಲ್ಲ ಅನೇಕರು ನಾನಾ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುವಂತಾಗಿದೆ.
ಚಳಿಯ ಅಬ್ಬರ: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲೆಡೆ ಕಳೆದ ಮೂರು ದಿನಗಳಿಂದ ರಾತ್ರಿಯಾಗುತ್ತಿದ್ದಂತೆಯೇ ಮೈಕೊರೆವ ಚಳಿಗಾಳಿಯ ಆರ್ಭಟ. ಬೆಳಗ್ಗೆ ಮಂಜು ಕವಿದ ವಾತಾವರಣ. ಕಳೆದ ಮೂರು ದಿನಗಳಿಂದ ಚಳಿಯ ಕಾಟ ಹೆಚ್ಚಿದ್ದು, ಜನತೆಗೆ ಸಮಸ್ಯೆ ತಂದೊಡ್ಡಿದೆ.
ನ. 11ರಂದು ಕನಿಷ್ಟ ತಾಪಮಾನ 18ಡಿಗ್ರಿಯಿತ್ತು. ನ.12ರಂದು ಕನಿಷ್ಟ ತಾಪಮಾನ 17ಡಿಗ್ರಿಗೆ ಕುಸಿಯಿತು. ನ.13 ರಂದು ತಾಪಮಾನ ದಿಢೀರ್ ಆಗಿ 3 ಡಿಗ್ರಿಯಷ್ಟು ಕುಸಿದು 14.5ಡಿಗ್ರಿ ದಾಖಲಾಯಿತು. ನ.14ರಂದು ಬೆಳಗ್ಗೆ 14.2 ಡಿಗ್ರಿಯಷ್ಟು ತಾಪಮಾನ ದಾಖಲಾಗುವ ಮೂಲಕ ದಿನದಿಂದ ದಿನಕ್ಕೆ ನಗರದ ಜನತೆಯ ಚಳಿಯ ಅನುಭವ ಹೆಚ್ಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ವಿವಿ ಯ ಹವಾಮಾನ ವಿಭಾಗದ ಅಧಿಕಾರಿ ಮಹದೇವರೆಡ್ಡಿ, ಪ್ರಸಕ್ತ ಚಳಿಗಾಲದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಾಪಮಾನ 14.2ರಷ್ಟು ಗಣನೀಯ ಕುಸಿತ ಕಂಡಿದೆ ಎಂದಿದ್ದಾರೆ.
ಅನಾರೋಗ್ಯ: ಬಿಸಿಲ ನಾಡಿನ ಜನತೆಗೆ ಚಳಿಗಾಲ ತೀರಾ ಅಪರಿಚಿತ. ಆದರೆ ಕಳೆದ ಮೂರು ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಳ ವಾಗುತ್ತಿರುವುದು ವಯೋವೃದ್ಧರು ಹಾಗೂ ಮಕ್ಕಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಂದಿದೆ. ಅಸ್ತಮಾದಿಂದ ಬಳಲುತ್ತಿರುವವರು ಉಸಿರಾಟದ ತೊಂದರೆ ಎದುರಿಸಿದರೆ ಮಕ್ಕಳಿಗೆ ಶೀತ, ಕೆಮ್ಮು, ಜ್ವರದಿಂದ ಬಳಲಿಕೆಯ ವರದಿಯಾಗಿದೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣಪ್ಪ ಕನ್ನಡಪ್ರಭ ಜೊತೆ ಮಾತನಾಡಿ, ವಾತಾವರಣದಲ್ಲಿನ ದಿಢೀರ್ ಏರುಪೇರು ಆರೋಗ್ಯದ ಮೇಲೆ ಸಹಜವಾಗಿಯೇ ಪರಿಣಾಮ ಬೀರುತ್ತದೆ. ಉಸಿರಾಟದ ತೊಂದರೆ, ಜ್ವರ ಬಾಧಿಸುವ ಸಾಧ್ಯತೆಯೇ ಹೆಚ್ಚು ಎಂದು ಹೇಳಿದ್ದಾರೆ.
ವಾಯುವಿಹಾರ ವಿಳಂಬ: ದಿನಬೆಳಗಾದರೆ ನಗರದ ಮಾವಿನಕೆರೆ, ಎಲ್‌ವಿಡಿ ಕಾಲೇಜು ಮೈದಾನ ಸೇರಿ ವಿವಿಧೆಡೆ ವಾಯುವಿಹಾರಕ್ಕೆ ಓಡೋಡಿ ಬರುತ್ತಿದ್ದ ಜನತೆ, ಸದ್ಯ ಮೈಕೊರೆಯುವ ಚಳಿಯಿಂದ ಬೆಚ್ಚಿಬಿದ್ದಿದ್ದಾರೆ. ಕೆಲವರು ವಾಯುವಿಹಾರದಿಂದ ದೂರವೇ ಉಳಿದರೆ ಮತ್ತೆ ಕೆಲವರು ತಡವಾಗಿ ಧಾವಿಸುತ್ತಿದ್ದಾರೆ.
ಬಿಸಿಲ ನಗರಿ ರಾಯಚೂರಿನಲ್ಲಿ ಕಳೆದ ಎರಡು ದಿನಗಳಿಂದ ಕುಸಿಯುತ್ತಿರುವ ತಾಪಮಾನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲ ಅನೇಕ ಸಮಸ್ಯೆಗಳಿಗೂ ದಾರಿ ಮಾಡಿದೆ. ರಾಯಚೂರಿಗರಲ್ಲಿ ಸದ್ಯ ಒಂದೇ ಮಾತು ಬಿಸಿಲು 50 ಡಿಗ್ರಿಯಾದರೂ ತಡ್ಕೋತೀವಿ, ಆದ್ರ ಚಳಿ ಮಾತ್ರ ಉಹುಂ ಅಸಾಧ್ಯ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.