ಕನ್ನಡವಿಲ್ಲ ಜೋರು, ಆಂಗ್ಲ ಮಾಧ್ಯಮದ್ದೇ ದರ್ಬಾರು!
-ಜಗನ್ನಾಥ ಆರ್. ದೇಸಾಯಿ
ರಾಯಚೂರು: ಹಿಂದಿ, ತೆಲುಗು ಭಾಷೆಗಳ ಗಾಢ ಪ್ರಭಾವ. ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಜತೆಗೆ ಶಿಕ್ಷಕರ ಅಭಾವ... ಹೀಗೆ ವಿವಿಧ ಕಾರಣಗಳಿಂದ ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕನ್ನಡ ಶಾಲೆಗಳು ಸೊರಗುತ್ತಿವೆ. ಆಂಗ್ಲ ಮಾಧ್ಯಮದ ಅಬ್ಬರ ಕನ್ನಡ ಶಾಲೆಗಳ ಪ್ರಗತಿಯನ್ನೂ ಕುಂಠಿತಗೊಳಿಸುತ್ತಿದೆ. ಆಂಗ್ಲ ಮಾಧ್ಯಮದ ಕಡೆಗೆ ಒಲವು ಹೆಚ್ಚಳದಿಂದ ಕನ್ನಡಕ್ಕಾಗಿ ಹಂಬಲಿಸುವವರು ಬಡವರು ಮಾತ್ರ. ಮಧ್ಯಮ ವರ್ಗದವರು ಹಾಗೂ ಸ್ಥಿತಿವಂತ ಮಕ್ಕಳಿಗೆ ಆಂಗ್ಲ ಮಾಧ್ಯಮವೇ ಅಚ್ಚುಮೆಚ್ಚು.
ಜಿಲ್ಲೆಯಲ್ಲಿ ಸರ್ಕಾರದ 1579 ಕನ್ನಡ ಮಾಧ್ಯಮ ಶಾಲೆಗಳಿವೆ. ಅನುದಾನಿತ 53, ಅನುದಾನ ರಹಿತ 441 ಸೇರಿ ಒಟ್ಟು 2073 ಕನ್ನಡ ಮಾಧ್ಯಮ ಶಾಲೆಗಳಿವೆ. ಹಾಗೆಯೇ ಆಂಗ್ಲ ಮಾಧ್ಯಮದ 129 ಶಾಲೆಗಳಿವೆ. ಕನ್ನಡ ಮಾಧ್ಯಮದಲ್ಲಿ 284942 ವಿದ್ಯಾರ್ಥಿಗಳು ಒಂದರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಅದೇ ರೀತಿ 9ರಿಂದ 12ನೇ ತರಗತಿವರೆಗೆ ಕನ್ನಡದಲ್ಲಿ 326971 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇನ್ನು ಆಂಗ್ಲ ಮಾಧ್ಯಮದಲ್ಲಿ ಒಂದರಿಂದ 8ನೇ ತರಗತಿವರೆಗೆ 18018 ಹಾಗೂ 9ರಿಂದ 12ನೇ ತರಗತಿವರೆಗೆ 23582 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದಲ್ಲದೇ ಉರ್ದು, ಹಿಂದಿ, ತೆಲುಗು ಮಾಧ್ಯಮದ ಶಾಲೆಗಳಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಸೌಲಭ್ಯಗಳ ಕೊರತೆ
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶೈಕ್ಷಣಿಕ ವರ್ಷಾರಂಭದಿಂದ ಕಡೆಯವರೆಗೂ ಸಮವಸ್ತ್ರ, ಪಠ್ಯಪುಸ್ತಕ ಪೂರೈಸುತ್ತದೆ. ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ ಒಟ್ಟು 3095 ಹುದ್ದೆಗಳ ಪೈಕಿ 2469 ಶಿಕ್ಷಕರ ಹುದ್ದೆ ಭರ್ತಿಯಾಗಿವೆ. 626 ಹುದ್ದೆಗಳು ಖಾಲಿ ಇವೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳಿಗೆ ದೂರದ ಜಿಲ್ಲೆಗಳಿಂದ ನೇಮಕಗೊಂಡವರು ನಂತರ ತಮ್ಮೂರಿಗೆ ವರ್ಗಾವಣೆ ಪಡೆಯುವುದರಿಂದ ಶಿಕ್ಷಕರ ಹುದ್ದೆಗಳು ಯಾವಾಗಲೂ ಖಾಲಿಯಾಗಿಯೇ ಇರುತ್ತದೆ. ಜಿಲ್ಲೆಯಲ್ಲಿ ಒಟ್ಟು 7318 ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ 5590 ಸುಸ್ಥಿತಿಯಲ್ಲಿವೆ. 161 ಶಾಲೆಗಳು ಬಾಡಿಗೆ ಕಟ್ಟಡದಲ್ಲಿವೆ. 825 ಶಾಲೆಗಳು ಬೃಹತ್ ಪ್ರಮಾಣದ ದುರಸ್ತಿ ಮತ್ತು 903 ಶಾಲೆಗಳು ಸಣ್ಣಪುಟ್ಟ ದುರಸ್ತಿಗಾಗಿ ಕಾದಿವೆ. ಈಗಲೂ 730 ಶಾಲೆಗಳಿಗೆ ಮೈದಾನವಿಲ್ಲ. 85 ಶಾಲೆಗಳಿಗೆ ಗ್ರಂಥಾಲಯವಿಲ್ಲ, 552 ಶಾಲೆಗಳಿಗೆ ಆವರಣ ಗೋಡೆಯಿಲ್ಲ.
ಶತಮಾನದ ಶಾಲೆ
ಜಿಲ್ಲೆಯ ಮಸ್ಕಿ, ಗುರುಗುಂಟಾ, ಲಿಂಗಸ್ಗೂರು ತಾಲೂಕಿನ ಮೆದಿಕಿನಾಳ ಗ್ರಾಮಗಳಲ್ಲಿ ಶತಮಾನ ಕಂಡ ಶಾಲೆಗಳಿವೆ. 1869ರಲ್ಲಿ ಸ್ಥಾಪನೆಗೊಂಡ ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆ ಜಿಲ್ಲೆಯಲ್ಲಿ ಪ್ರಪ್ರಥಮ 100 ವರ್ಷ ಪೂರೈಸಿದ ಶಾಲೆ ಎಂಬ ಹೆಸರು ಗಳಿಸಿದೆ.
1873ರಲ್ಲಿಯೇ ಈ ಶಾಲೆಯಲ್ಲಿ ಉರ್ದು, ಫಾರ್ಸಿಯೊಂದಿಗೆ ಇಂಗ್ಲಿಷ್ ಅನ್ನೂ ಕಲಿಸಲಾಗುತ್ತಿತ್ತು. 1866ರಲ್ಲಿ ನಿಜಾಮಶಾಹಿ ಆಡಳಿತದ ವೇಳೆ ಕಟ್ಟಿದ ಈ ಶಾಲೆಯಲ್ಲಿ ಪಂ.ತಾರಾನಾಥರು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಅವರು ಶಾಲೆಯಲ್ಲಿ ಪ್ರಾರ್ಥಿಸುವಾಗ ಅರಸರ ಗುಣಗಾನ ಮಾಡಲು ವಿರೋಧಿಸಿ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿ, 'ಹಮ್ ದರ್ದ್' ಶಾಲೆ ಆರಂಭಿಸಿದ್ದು ಇತಿಹಾಸ.
ಇದೇ ಶಾಲೆಯಲ್ಲಿ ಮುಖ್ಯ ಅಧ್ಯಾಪಕರಾಗಿದ್ದ ಎನ್.ಎಸ್.ಎ.ಮಿರ್ಜಾ ಎಂಬುವವರಿಗೆ ಆಗಿನ ಜಿಲ್ಲಾಧಿಕಾರಿ ತಮ್ಮ ರಜೆ ಅವಧಿಯಲ್ಲಿ ಪ್ರಭಾರ ವಹಿಸುತ್ತಿದ್ದರು. ಇಂಥ ಶತಮಾನದ ಶಾಲೆಯಲ್ಲಿ ಕಲಿತು ರಾಜ್ಯಕ್ಕೆ ಹೆಸರು ತಂದವರಲ್ಲಿ ಹಿರಿಯ ಸಾಹಿತಿ ದಿ.ಶಾಂತರಸರು, ಹಿರಿಯ ಕಲಾವಿದ ದಿ.ಪ್ರೊ.ಶಂಕರಗೌಡ ಬೆಟ್ಟದೂರು, ಮಾಜಿ ಶಾಸಕ ದಿ.ಎಂ.ನಾಗಪ್ಪನವರು, ನಗರದ ಹಿರಿಯ ತಜ್ಞ ವೈದ್ಯ ಡಾ.ರಾಘವೇಂದ್ರ ಕುಲಕರ್ಣಿ, ಮಾಜಿ ಎಂಪಿ ಸಮದ್ ಸಿದ್ದಿಖಿ ಸೇರಿದ್ದಾರೆ.
ವಲಸೆ ಸಮಸ್ಯೆ
ಜಿಲ್ಲೆಯಲ್ಲಿ ಆಂಧ್ರದಿಂದ ವಲಸೆ ಬಂದವರು ಸಾಕಷ್ಟು ಮಂದಿ ಇದ್ದಾರೆ. ಇವರು ಕನ್ನಡ ಕಲಿಯುವ ಬದಲು ಕನ್ನಡಿಗರಿಗೇ ತೆಲುಗು ಕಲಿಸಿದ್ದಾರೆ. ಇನ್ನು ಕೂಲಿ ಕಾರ್ಮಿಕರ ಮಕ್ಕಳು ಪ್ರತಿ ಹಂಗಾಮಿಗೊಮ್ಮೆ ತಮ್ಮ ಸ್ವಂತ ಊರುಗಳಿಗೆ ಇಲ್ಲವೇ ಕೂಲಿ ಕೆಲಸ ಅರಸಿ ಗುಳೆ ಹೋಗುವ ಪಾಲಕರ ಜತೆ ತೆರಳುವುದರಿಂದ ಶಾಲೆಗೆ ಹೋಗುವವರ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಕಡಿಮೆ. ಹಾಗಾಗಿ ಶಿಕ್ಷಣ ಇಲಾಖೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ನಿಖರವಾಗಿ ಪತ್ತೆ ಹಚ್ಚುವ ಗೋಜಿಗೂ ಹೋಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

